‘ಅಂಬರ್ ಕ್ಯಾಟರರ್ಸ್’ ತುಳು ಸಿನಿಮಾಕ್ಕೆ ಮೂಹೂರ್ತ

Spread the love

‘ಅಂಬರ್ ಕ್ಯಾಟರರ್ಸ್’ ತುಳು ಸಿನಿಮಾಕ್ಕೆ ಮೂಹೂರ್ತ

ಮಂಗಳೂರು: ‘ನಾಗೇಶ್ವರ ಸಿನಿ ಕಂಬೈನ್ಸ್’ ಲಾಂಛನದಲ್ಲಿ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಣದಲ್ಲಿ ಜೈಪ್ರಸಾದ್ ಬಜಾಲ್ ನಿರ್ದೇಶನದಲ್ಲಿ ‘ಅಂಬರ್ ಕ್ಯಾಟರರ್ಸ್’ ತುಳು ಚಿತ್ರದ ಚಿತ್ರೀಕರಣಕ್ಕೆ ಆದಿತ್ಯವಾರ ಬಾರ್ಕೂರು ಸಮೀಪದ ಕಚ್ಚೂರು ನಾಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಕನ್ನಡದ ಖ್ಯಾತ ನಿರ್ದೇಶಕ ಎಂ.ಡಿ.ಶ್ರೀಧರ್ ಕ್ಲಾಪ್ ಮಾಡಿದರು. ಬಳಿಕ ಮಾತಾಡಿದ ಅವರು, ತುಳು ಭಾಷೆಯಲ್ಲಿ ಇನ್ನಷ್ಟು ವಿನೂತನ ಶೈಲಿಯ ಚಿತ್ರಗಳು ಬರಲಿ ಎಂದು ಶುಭ ಹಾರೈಸಿದರು.

amber-1 amber-2 amber-3 amber-4 amber

ನಾಯಕ ಸೌರಭ್ ಎಸ್.ಭಂಡಾರಿ ದೇವಸ್ಥಾನಕ್ಕೆ ಬರುವ ದೃಶ್ಯವನ್ನು ಕೆಮರಾಮ್ಯಾನ್ ಸಂತೋಷ್ ರೈ ಪಾತಾಜೆ ಚಿತ್ರೀಕರಿಸಿಕೊಂಡರು. ಚಿತ್ರದಲ್ಲಿ ಸಿಂಧು ಲೋಕನಾಥ್ ಸೌರಭ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕನ್ನಡದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ‘ಸಿಲ್ಲಿ ಲಲ್ಲಿ’ ಖ್ಯಾತಿಯ ಸುನೇತ್ರ ಪಂಡಿತ್ ಚಿತ್ರದ ತಾರಾಗಣದಲ್ಲಿದ್ದಾರೆ. ಇವರ ಜೊತೆ ತುಳು ರಂಗಭೂಮಿ ಮತ್ತು ಸಿನಿಮಾ ನಟರುಗಳಾದ ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಸುಂದರ್ ರೈ ಮಂದಾರ, ರಾಘವೇಂದ್ರ ರೈ ಹಾಸ್ಯ ರಸದೌತಣವನ್ನು ಉಣಬಡಿಸಲಿದ್ದಾರೆ. ಕ್ಯಾಟರಿಂಗ್ ಸರ್ವಿಸ್ ಸಂಸ್ಥೆಯೊಂದರಲ್ಲಿ ನಡೆಯುವ ಹಾಸ್ಯದ ವಸ್ತುವೇ ಚಿತ್ರದ ಜೀವಾಳವಾಗಿರಲಿದ್ದು ಜನರು ನಗೋದಕ್ಕೆ ಯಾವುದೇ ಕೊರತೆಯಿಲ್ಲ ಅನ್ನೋದು ಚಿತ್ರತಂಡದ ಮಾತು.

ಚಿತ್ರಕ್ಕೆ ಯುವ ನಿರ್ದೇಶಕ ಜೈಪ್ರಸಾದ್ ಬಜಾಲ್ ಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿರಲಿದ್ದು, ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಸುರೇಶ್ ಭಂಡಾರಿ ಮಾಹಿತಿ ನೀಡಿದರು. ಕನ್ನಡದ ಖ್ಯಾತ ನಿರ್ದೇಶಕ ಹೆಚ್.ವಾಸು, ಸುಧಾಕರ ಬನ್ನಂಜೆ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತ ರೋನ್ಸ್ ಬಂಟ್ವಾಳ್, ಶೋಭಾ ಸುರೇಶ್ ಭಂಡಾರಿ, ಅಂತರರಾಷ್ಟ್ರೀಯ ಕೇಶ ವಿನ್ಯಾಸಗಾರ ಡಾ.ಶಿವರಾಮ ಕೆ. ಭಂಡಾರಿ, ಭಂಡಾರಿ ಮಹಾಮಂಡಳ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಉಡುಪಿ ನಗರ ಸಭಾ ಸದಸ್ಯ ಎನ್.ನವೀನ್ ಭಂಡಾರಿ, ನಿರ್ದೇಶಕ ಜೈಪ್ರಸಾದ್ ಬಜಾಲ್, ಸಂತೋಷ್ ರೈ ಪಾತಾಜೆ, ಶ್ರೀ ಕಚ್ಚೂರು ನಾಗೇಶ್ವರ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಮ್. ಭಂಡಾರಿ, ಚಿತ್ರದ ನಿರ್ಮಾಣ-ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಸತೀಶ್ ಬ್ರಹ್ಮಾವರ, ಶೇಖರ್ ಭಂಡಾರಿ, ಮತ್ತಿತರರು ಉಪಸ್ಥಿತರಿದ್ದರು. ವಿಜಯ ಕುಮಾರ್ ಕೊಡಿಯಾಲ್‍ಬೈಲ್, ನಿತೀನ್ ಬಂಗೇರ ಚಿಲಿಂಬಿ, ಶಿವಾನಂದ ನಿಡಿಂಜ, ಪ್ರಶಾಂತ್ ಆಳ್ವ, ಅಭಿಷೇಕ್ ಡಿ ಶೆಟ್ಟಿ, ಲತೀಶ್ ಪೂಜಾರಿ ಮಡಿಕೇರಿ ಮತ್ತಿತರರ ಸಹಕಾರದಲ್ಲಿ ಚಿತ್ರೀಕರಣ ಗೊಳ್ಳಲಿದ್ದು, ಏಪ್ರಿಲ್ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.


Spread the love