ಅಂಬಲಪಾಡಿ, ಕಟಪಾಡಿ ಹಾಗೂ ಬಸ್ರೂರು ಮೇಲ್ಸೇತುವೆ ನಿರ್ಮಾಣಕ್ಕೆ ಜಯಪ್ರಕಾಶ ಹೆಗ್ಡೆ ಆಗ್ರಹ

ಅಂಬಲಪಾಡಿ, ಕಟಪಾಡಿ ಹಾಗೂ ಬಸ್ರೂರು ಮೇಲ್ಸೇತುವೆ ನಿರ್ಮಾಣಕ್ಕೆ ಜಯಪ್ರಕಾಶ ಹೆಗ್ಡೆ ಆಗ್ರಹ

ಉಡುಪಿ: ಮುಂದಿನ 50 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಉಡುಪಿ ಜಿಲ್ಲೆಯ ಅಂಬಲಪಾಡಿ ಜಂಕ್ಷನ್, ಕಟಪಾಡಿ ಹಾಗೂ ಬಸ್ರೂರು ಮೂರುಕೈಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‍ಪಾಸ್ ಕಾಮಗಾರಿಗಳ ಬದಲಿಗೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಆಗ್ರಹಿಸಿದ್ದಾರೆ.
ತಾನು ಸಂಸದನಾಗಿದ್ದ ಸಂದರ್ಭದಲ್ಲಿ ಕುಂದಾಪುರ ಶಾಸ್ತ್ರಿ ಸರ್ಕಲ್‍ನ ಮೇಲ್ಸೇತುವೆ ನಿರ್ಮಾಣಕ್ಕೆ ಸಚಿವರುಗಳಲ್ಲಿ ಮತ್ತು ಇಲಾಖಾ ಅಧಿಕಾರಿಗಳಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದು ಕುಂದಾಪುರ ಶಾಸ್ತ್ರಿ ಸರ್ಕಲ್‍ನ ಮೇಲ್ಸೇತುವೆಗೆ ಆಗಲೇ ಅನುಮೋದನೆ ದೊರಕಿ ಈಗ ಕೆಲಸ ಪ್ರಗತಿಯಲ್ಲಿದೆ ಹಾಗೆಯೇ ಮೇಲ್ಕಾಣಿಸಿದ ಮೂರು ಮೇಲ್ಸೇತುವೆಗಳ ನಿರ್ಮಾಣದ ಕುರಿತು ಪ್ರಯತ್ನಿಸಬೇಕಾಗಿದೆ ಎಂದರು.
ಬಸ್ರೂರು ಮೂಲಕ ಶಿವಮೊಗ್ಗ- ಮಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗುವುದರಿಂದ, ಮೂಡ್ಲಕಟ್ಟೆ ರೈಲು ನಿಲ್ದಾಣ, ಇಂಜಿನಿಯರಿಂಗ್ ಕಾಲೇಜುಗಳು ಇರುವ ಕಾರಣಕ್ಕೆ ತಾಲೂಕು ಕೇಂದ್ರವಾದ ಕುಂದಾಪುರಕ್ಕೆ ಪ್ರತೀ ದಿನವೂ ಇದೇ ಮಾರ್ಗವಾಗಿ ನೂರಾರು ಬಸ್ಸುಗಳು, ಲಾರಿಗಳು, ಕಾರುಗಳು ಭಾರೀ ಗಾತ್ರದ ಸರಕು ಸಾಗಣೆ ವಾಹನಗಳು ಚಲಿಸುತ್ತಿರುವ ಕಾರಣಕ್ಕೆ ಈ ಅಂಡರ್‍ಪಾಸ್ ನಿರ್ಮಾಣದಿಂದ ದಿನವೂ ಟ್ರಾಫಿಕ್ ಜಾಮ್ ಆಗುವ ಪರಿಸ್ಥಿತಿ ಇದೆ ಆ ಕಾರಣಕ್ಕೆ ಬಸ್ರೂರು ಮೂರುಕೈ ಅಂಡರ್‍ಪಾಸ್ ಬದಲಿಗೆ ಮೇಲ್ಸೇತುವೆ ನಿರ್ಮಿಸಲು ಕೋರಿ ಕುಂದಾಪುರದ ನಾಗರಿಕರು ಇತ್ತೀಚೆಗೆ ಸರಕಾರಕ್ಕೆ ಮತ್ತಿತರ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ಹೇಳಿಕೆ ನೀಡಿದ್ದು ಈ ಕುರಿತಾಗಿ ಇಲಾಖಾ ಅಧಿಕಾರಿಗಳು, ಸಂಸದ್ ಸದಸ್ಯರು, ರಾಜ್ಯಸಭಾ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕುಂದಾಪುರ ತಾಲೂಕಿನ ನಾಗರಿಕರ ಈ ಪ್ರಾಮಾಣಿಕ ಮನವಿಯ ಕುರಿತಾಗಿ ಗಂಭೀರವಾಗಿ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Please enter your comment!
Please enter your name here