ಅಡಿಕೆ ಬೆಲೆ ಧಾರಣೆ ಕುಸಿತ ; ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಕಳವಳ

Spread the love

ಅಡಿಕೆ ಬೆಲೆ ಧಾರಣೆ ಕುಸಿತ ; ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಕಳವಳ 

ಹೊಸದಿಲ್ಲಿ: ವಾಣಿಜ್ಯ ಬೆಳೆಯಾದ ಅಡಿಕೆಯ ಧಾರಣೆಯಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಕುಸಿತದ ಬಗ್ಗೆ ಇಂದು ಲೋಕಸಭೆಯಲ್ಲಿ ಪ್ರಸ್ತಾವಿಸಿದ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇದರಿಂದ ಅಡಿಕೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ನಿಯಮ 377 ರ ಅಡಿಯಲ್ಲಿ ಲೋಕಸಭೆಯಲ್ಲಿ ಅಡಿಕೆ ಬೆಲೆ ಕುಸಿತದ ಬಗ್ಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಮೂರು ತಿಂಗಳುಗಳಿಂದ ಅಡಿಕೆಯ ಧಾರಣೆಯಲ್ಲಿ ನಿರಂತರ ಕುಸಿತವಾಗುತ್ತಿದ್ದು ಈಗಾಗಲೇ ಶೇ.10 ರಷ್ಟು ಬೆಲೆ ಇಳಿದಿದೆ. 2014 ರ ಆಗಸ್ಟ್ ನಲ್ಲಿ ಕಿಲೋ ಒಂದಕ್ಕೆ 900 ರೂಪಾೈ ಗಳಷ್ಟಿದ್ದ ಅಡಿಕೆಯ ಬೆಲೆ 2015 ರಲ್ಲಿ ರೂಪಾೈ 300 ಕ್ಕೆ ಇಳಿದಿತ್ತು. ಇದೀಗ ಮತ್ತೆ ಬೆಲೆಯಲ್ಲಿ ಕುಸಿತವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ವರ್ಷ ಒಂದಕ್ಕೆ ಸುಮಾರು 6.2 ರಿಂದ 6.3 ಲಕ್ಷ ಟನ್‍ನಷ್ಟು ಅಡಿಕೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಅತ್ಯಂತ ಕಡಿಮೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದರ ಪರಿಣಾಮವಾಗಿ ನಮ್ಮ ದೇಶದೊಳಗೆ ಅಡಿಕೆ ಧಾರಣೆಯು ಇಳಿಯುತ್ತಿದೆ. ಅಂತರ ರಾಷ್ಟ್ರೀಯ ಒಪ್ಪಂದವಾದ ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಪ್ರದೇಶ (ಎಸ್.ಎ.ಎಫ್.ಟಿ.ಎ.) ಮತ್ತು ಸಾರ್ಕ್ ರಾಷ್ಟ್ರಗಳ ನಡುವಿನ ಒಪ್ಪಂದಗಳ ಪ್ರಕಾರ ಆಮದಿನ ಸುಂಕವಿಲ್ಲದ ಕಾರಣದಿಂದ ಅಡಿಕೆ ಬೆಳೆಯುವ ರಾಷ್ಟ್ರಗಳು ಭಾರತಕ್ಕೆ ಕಡಿಮೆ ಗುಣಮಟ್ಟದ ಅಡಿಕೆಯನ್ನು ರಫ್ತು ಮಾಡುತ್ತಿವೆ. ಇದನ್ನು ತಡೆಗಟ್ಟಲಿಕ್ಕಾಗಿ ಕೇಂದ್ರ ಸರಕಾರದ ಆಹಾರ ಸುರಕ್ಷಾ ಮತ್ತು ಗುಣಮಟ್ಟ ಕಾಪಾಡುವ ಸಂಸ್ಥೆಯಾದ ಎಫ್.ಎಸ್.ಎ.ಐ. ಇದರ ಅಧಿಕಾರಿಗಳ ಮುಖಾಂತರ ಉಪಯೋಗಿಸಲು ಯೋಗ್ಯವಲ್ಲದ ಮತ್ತು ಕಡಿಮೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುವುದನ್ನು ತಡೆಯಬೇಕಾಗಿದೆ ಹಾಗೂ ಕೇಂದ್ರ ಸರಕಾರವು ಹೆಚ್ಚಿನ ಆಮದು ಸುಂಕವನ್ನು ವಿಧಿಸುವ ಮೂಲಕ ಹೊರದೇಶಗಳಿಂದ ಕಡಿಮೆ ಗುಣಮಟ್ಟದ ಅಡಿಕೆ ಆಮದು ಆಗುವುದನ್ನು ತಡೆಗಟ್ಟಬೇಕು. ತನ್ಮೂಲಕ ಕರ್ನಾಟಕ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಅಡಿಕೆ ಬೆಳೆಗಾರ ರೈತರ ಹಿತವನ್ನು ಕಾಪಾಡಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.


Spread the love