ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪುತ್ತೂರು ಜಾತ್ರೋತ್ಸವ : ಜಿಲ್ಲಾಧಿಕಾರಿ

Spread the love

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅತಿಥೇಯರ ಸಾಲಿನಲ್ಲಿ ನನ್ನ ಹೆಸರನ್ನು ಕೇವಲ ಶಿಷ್ಟಾಚಾರಕ್ಕೆ ಮುದ್ರಿಸಲಾಗಿದ್ದು, ದೇವಾಲಯದ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಅಪರ ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಕ್ಕೆ ಪ್ರಕಟಣೆ ಹೊರಡಿಸಿರುವ ಅವರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (4) ರಂತೆ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳನ್ನು ನೇಮಿಸಲು ಅಧಿಕಾರ ಇರುತ್ತದೆ. ಇದರಂತೆ ಸರಕಾರದ ಆದೇಶ RD 107 Musevi 2003 ದಿನಾಂಕ 06-12-2008 ರಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಹಿಂಧೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (4) ರಂತೆ ಜಿಲ್ಲಾಧಿಕಾರಿಗಳೆಂದು ನೇಮಿಸಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಜಿಲ್ಲೆಯ ಜಿಲ್ಲಾಧಿಕಾರಿಗಳು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (4) ರಂತೆ ಜಿಲ್ಲಾಧಿಕಾರಿಗಳು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿ ಅಧಿಕಾರ ಹೊಂದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಸರಕಾರದ ನಂ.ಡಿಪಿಎಆರ್ 1030 ಎಸ್ಎಎಸ್ 2013 ದಿನಾಂಕ 21-12-2013 ರ ಅಧಿಸೂಚನೆ ಪ್ರಕಾರ ನೇಮಕಗೊಂಡ ನಂತರ, ದಿನಾಂಕ 26-12-2013 ರಂದು ಜಿಲ್ಲಾಧಿಕಾರಿಗಳಾಗಿ ಅಧಿಕಾರವನ್ನು ಸ್ವೀಕರಿಸಲಾಗಿದೆ. ಮತ್ತು ಅಧಿಕಾರ ಸ್ವೀಕರಿಸಿದ ಮರುದಿನವೇ ಈ ಕಛೇರಿಯ ಆದೇಶ ಸಂಖ್ಯೆ ಡಿವಿಎಸ್ ಇಎಸ್ ಟಿ (1) ಸಿಆರ್ 68/2013-14/120517 ಎಫ್ (2) ದಿನಾಂಕ 27-12-2013 ರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (7) ರನ್ವಯ ಅಧಿಕಾರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಿ ಉಪಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಅಂದಿನಿಂದ ಇಂದಿನವರೆಗೂ ಅಪರ ಜಿಲ್ಲಾಧಿಕಾರಿಗಳೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (7) ರನ್ವಯ ಉಪಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಂತೆ ಅಧಿಕಾರ ಪ್ರತ್ಯಾಯೋಜಿಸಿಲ್ಪಟ್ಟ ರೀತ್ಯಾ ಅಪರ ಜಿಲ್ಲಾಧಿಕಾರಿಯವರೇ ಸದ್ರಿ ಕಾರ್ಯದಲ್ಲಿ ಉಪಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದರನ್ವಯ
1) ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಣೆ
2) ವಿವಿಧ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವುದು
3) ಅಗತ್ಯವಿರುವ ಸಂದರ್ಭದಲ್ಲಿ ದೇವಾಲಯಗಳಿಗೆ ಆಡಳಿತಾಧಿಕಾರಿ ನೇಮಕಾತಿ ಮಾಡುವುದು
4) ನ್ಯಾಯಾಲಯದ ಕಲಾಪಗಳನ್ನು ನಿರ್ವಹಿಸುವುದು
5) ಅನುವಂಶಿಕ ಹಕ್ಕನ್ನು ನಿರ್ಧರಿಸುವುದು
6) ದೇವಾಲಯಗಳ ಯಾವುದೇ ವಿವಾದಗಳನ್ನು ಇತ್ಯರ್ಥಪಡಿಸುವುದು
7) ದೇವಾಲಯಗಳ ಮುಂಗಡ ಪತ್ರಗಳನ್ನು ಪರಿಶೀಲಿಸುವುದು
8) ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡು ಬರುವ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು ಮುಂತಾದ ರೀತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದುದರಿಂದ ಈ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆಡಳಿತ ನಡೆಸುವಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಮತ್ತು ಕಾಯ್ದೆಯ ಪ್ರಕಾರವೇ ಅಪರ ಜಿಲ್ಲಾಧಿಕಾರಿಗಳಿಂದ ಎಲ್ಲಾ ಪ್ರಕಾರ್ಯಗಳನ್ನು ನಡೆಸಲಾಗುತ್ತಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಯವರ ಹೆಸರನ್ನು ಮುದ್ರಣ ಮಾಡಿದ ಕುರಿತಾಗಿ ಏರ್ಪಟ್ಟ ಗೊಂದಲದ ಬಗ್ಗೆ ತಿಳಿಸ ಬಯಸುವುದೇನೆಂದರೆ, ಜಿಲ್ಲಾಧಿಕಾರಿಯವರ ಹೆಸರನ್ನು ಶಿಷ್ಟಾಚಾರದ ನೆಲೆಯಲ್ಲಿ ಮುದ್ರಿಸಲಾಗಿರುತ್ತದೆ. ಹಾಗೂ ಜಿಲ್ಲಾಧಿಕಾರಿಯವರು ಜಿಲ್ಲೆಯ ಮುಖ್ಯಸ್ಥರಾಗಿದ್ದು, ಜಿಲ್ಲಾ ದಂಡಾಧಿಕಾರಿಯವರೂ ಸಹ ಆಗಿರುವುದರಿಂದ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ನೆಲೆಯಲ್ಲಿ ಶಿಷ್ಠಾಚಾರ ದೃಷ್ಟಿಕೋನದಿಂದ ಜಿಲ್ಲಾಧಿಕಾರಿಯವರ ಹೆಸರನ್ನು ಮುದ್ರಿಸಲಾಗಿರುತ್ತದೆಯೇ ವಿನ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ 7 ಉಲ್ಲಂಘನೆಯಾಗುವಂತೆ ಮುದ್ರಿಸಿರುವುದಿಲ್ಲ. ಹಾಗೂ ಈ ರೀತಿ ದೇವಾಲಯಗಳ ಜಾತ್ರಾ ಮಹೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳ ಹೆಸರನ್ನು ಮುದ್ರಿಸುವುದು ಈ ಜಿಲ್ಲೆಯಲ್ಲಿ ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ವಿವಿಧ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳ ಹೆಸರನ್ನು ಶಿಷ್ಟಾಚಾರ ನೆಲೆಯಲ್ಲಿ ಮುದ್ರಿಸಿಕೊಂಡು ಬರಲಾಗುತ್ತಿದೆ.
ಇದೇ ಮಾದರಿಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಹಿಂದೂಯೇತರ ಜಿಲ್ಲಾಧಿಕಾರಿಗಳು ಇರುವಲ್ಲಿಯೂ ಸಹ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಟ್ಟ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿಯೂ ಜಿಲ್ಲಾಧಿಕಾರಿಗಳ ಹೆಸರನ್ನು ಮುದ್ರಿಸಿರುವ ನಿದರ್ಶನವಿರುವುದು ಸ್ಪಷ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಮುಖ್ಯಸ್ಥರಾಗಿದ್ದು, ಸರ್ವ ಜನಾಂಗದ ಎಲ್ಲಾ ಸಾರ್ವಜನಿಕರ ನಡುವೆ ಸಾಮರಸ್ಯ ಭಾಂಧವ್ಯದ ಪ್ರತೀಕವಾಗಿರುವ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕಾಗಿರುತ್ತದೆ. ಕೊಡಗಿನ ತಲಕಾವೇರಿ ದೇವಸ್ಥಾನದಲ್ಲಿ , ರಾಮನಗರದ ಕೆಂಗಲ್ ದೇವಸ್ಥಾನದಲ್ಲಿ, ಉಡುಪಿ, ಬೀದರ್, ಮತ್ತಿತರ ಜಿಲ್ಲೆಗಳಲ್ಲಿ ಸಹ ಮುದ್ರಿಸಲಾಗಿರುತ್ತದೆ.
ಸದ್ರಿ ದೇವಾಲಯದ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಾಗಿದ್ದು, ಸದ್ರಿ ರಿಟ್ ಅರ್ಜಿಯು ದಿನಾಂಕ 21-03-2016 ರಂದು ವಿಚಾರಣೆಗೆ ಬಂದಿರುತ್ತದೆ. ಸದ್ರಿ ದಿನದಂದು ಅರ್ಜಿದಾರ ಶ್ರೀ ನವೀನ್ ಕುಲಾಲರ ಪರ ವಕೀಲರೇ ಹೆಚ್ಚಿನ ಸಮಯಾವಕಾಶ ಕೋರಿದ್ದರಿಂದ, ಪ್ರಕರಣದ ವಿಚಾರಣೆಯನ್ನು ದಿನಾಂಕ 24-03-2016 ರಂದು ನಿಗಧಿಪಡಿಸಲಾಗಿರುತ್ತದೆ.
ದಿನಾಂಕ 24-03-2016ರಂದು ಕೂಡಾ ಅರ್ಜಿದಾರ ಶ್ರೀ ನವೀನ್ ಕುಲಾಲರ ಪರ ವಕೀಲರೇ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪರಿಷ್ಕೃತ ಅರ್ಜಿ ಸಲ್ಲಿಸಿ ಮತ್ತಷ್ಟು ಸಮಯಾವಕಾಶ ಕೋರಿದ್ದರಿಂದ , ಪ್ರಕರಣ ಇತ್ಯರ್ಥಗೊಳ್ಳದೇ ಮುಂದೂಡಲ್ಪಟ್ಟಿರುತ್ತದೆ. ಆದ್ದರಿಂದ ಸದ್ರಿ ದೇವಳದಲ್ಲಿ ಜಾತ್ರಾ ಮಹೋತ್ಸವವು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಈ ಬಗ್ಗೆ ಭಕ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಇರುವ ಗೊಂದಲ ನಿವಾರಿಸಿ, ಸೂಕ್ತ ಸ್ಪಷ್ಟೀಕರಣ ನೀಡುವುದು ಸಮಂಜಸ ಎಂದು ಭಾವಿಸಲಾಗಿದೆ.
ಆದಾಗ್ಯೂ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಏಪ್ರಿಲ್ 10 ರಿಂದ 20 ರ ವರೆಗೆ ನಡೆಯುವ ಜಾತ್ರಾಮಹೋತ್ಸವವು ಅತ್ಯಂತ ಸುಗಮವಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಮತ್ತು ಆಡಳಿತಾಧಿಕಾರಿಯವರು ದೇವಾಲಯದಲ್ಲಿ ಹಾಜರಿದ್ದು ಎಲ್ಲಾ ಪ್ರಕಾರ್ಯಗಳನ್ನು ನಡೆಸಲಿರುತ್ತಾರೆ. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದ ಧಾರ್ಮಿಕ ವಿಧಿವಿಧಾನದಲ್ಲಿ ರೀತಿಯಲ್ಲಿ ಜಾತ್ರಾ ಮಹೋತ್ಸವವನ್ನು ನಡೆಸಲು ಸೂಚಿಸಲಾಗಿದೆ. ಇದರ ಜೊತೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರವರೂ ಕೂಡಾ ಮಾರ್ಗದರ್ಶಕರಾಗಿ ಜಾತ್ರಾ ಉಸ್ತುವಾರಿ ನೋಡಿಕೊಳ್ಳಲಿರುವರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ (7) ರನ್ವಯ ಉಪ ಆಯುಕ್ತರಾಗಿ ಈಗಾಗಲೇ ಈ ಕಛೇರಿಯ ಆದೇಶ ಸಂಖ್ಯೆ ಡಿವಿಎಸ್ ಇಎಸ್ ಟಿ (1) ಸಿಆರ್ 68/2013-14/120517 ಎಫ್ (2) ದಿನಾಂಕ 27-12-2013 ರನ್ವಯ ಅಪರ ಜಿಲ್ಲಾಧಿಕಾರಿಯವರನ್ನು ನೇಮಿಸಿರುವುದರಿಂದ, ಅಪರ ಜಿಲ್ಲಾಧಿಕಾರಿಗಳೇ ಪ್ರಸ್ತುತ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಉಪಆಯುಕ್ತರಾಗಿರುವ ಹಿನ್ನಲೆಯಲ್ಲಿ ಮತ್ತು ಮೇಲೆ ವಿವರಿಸಿರುವಂತೆ ಸದ್ರಿ ಕಲಂನ ಅಡಿ ಎಲ್ಲಾ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಅಪರ ಜಿಲ್ಲಾಧಿಕಾರಿಗಳು ದೇವಸ್ಥಾನದಲ್ಲಿ ಖುದ್ದು ಹಾಜರಿದ್ದು ಮೇಲೆ ತಿಳಿಸಿರುವ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಜಾತ್ರಾ ಮಹೋತ್ಸವವನ್ನು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲಾಗುವುದು.
ಆದ್ದರಿಂದ, ಈ ವಿಚಾರದಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ವಿಜ್ರಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಸುವುದರೊಂದಿಗೆ ಹಾಗೂ ಜಿಲ್ಲೆಯ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಬೇಕಾಗಿ ಜಿಲ್ಲಾದಂಡಾಧಿಕಾರಿಯಾಗಿ ಕೋರಿಕೊಂಡಿದ್ದಾರೆ.


Spread the love