ಅಪಾಯಕಾರಿ ಉದ್ದಿಮೆಗಳ ಸಮೀಕ್ಷೆಗೆ ಡಿಸಿ ಸೂಚನೆ

ಅಪಾಯಕಾರಿ ಉದ್ದಿಮೆಗಳ ಸಮೀಕ್ಷೆಗೆ ಡಿಸಿ ಸೂಚನೆ
ಮ0ಗಳೂರು: 18ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪಾಯಕಾರಿಯಾದ ಉದ್ದಿಮೆ, ಕೈಗಾರಿಕೆ ಮತ್ತಿತರ ಸಂಸ್ಥೆಗಳಲ್ಲಿ ದುಡಿಯುವುದನ್ನು ಕೇಂದ್ರ ಸರಕಾರ ನಿಷೇಧಿಸಿರುವುದರಿಂದ ಜಿಲ್ಲೆಯಲ್ಲಿ ಅಂತಹ ಸಂಸ್ಥೆಗಳನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚಿಸಿದ್ದಾರೆ.

DC

ಅವರು ಬುಧವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲಕಾರ್ಮಿಕ ನಿಯಂತ್ರಣ ಕಾಯಿದೆಗೆ ತಂದಿರುವ ತಿದ್ದುಪಡಿ ಪ್ರಕಾರ 18ವರ್ಷದವರೆಗಿನ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಪಾಯಕಾರಿಯಾದ ವೃತ್ತಿ, ಉದ್ದಿಮೆಗಳನ್ನು ಗುರುತಿಸಿ ಅಂತಹ ಸಂಸ್ಥೆಗಳನ್ನು ಸಮೀಕ್ಷೆ ಮೂಲಕ ಕಂಡುಹಿಡಿಯಬೇಕು. ಮುಂದಿನ ದಿನಗಳಲ್ಲಿ ಇಂತಹ ಉದ್ದಿಮೆಗಳಲ್ಲಿ 18 ವರ್ಷಕ್ಕಿಂತ ಕೆಳಗಿನವರು ದುಡಿಯುತ್ತಿದ್ದರೆ, ಮಕ್ಕಳನ್ನು ಅಂತಹ ದುಡಿಮೆಯಿಂದ ಹೊರತಂದು, ಅವರಿಗೆ ಇತರ ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸುವಂತೆ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬಾಲಕಾರ್ಮಿಕ ಕಾಯಿದೆಯ ತಿದ್ದುಪಡಿ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಬೇಕು. ಸರಕಾರೇತರ ಸಂಘಟನೆಗಳೊಂದಿಗೆ ಚರ್ಚಿಸಿ, ಕಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಶಾಲೆ ಬಿಟ್ಟಿರುವ ಮಕ್ಕಳನ್ನು ಮರಳಿ ಶಾಲೆಗೆ ತರಲು ಶಿಕ್ಷಣ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನನ ನೋಂದಣಿ ವಹಿಯಂತೆ ಶಾಲೆಗೆ ಮಕ್ಕಳು ನೋಂದಣಿಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ನಿಗದಿತ ಕ್ರೀಡಾ ಅವಧಿಯನ್ನು ನೀಡಲಾಗಿರುವ ಬಗ್ಗೆ ಪರಿಶೀಲಿಸುವಂತೆ ಡಾ. ಜಗದೀಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜು, ಬಾಲಕಾರ್ಮಿಕ ಕಾಯಿದೆಗೆ ತಂದಿರುವ ಇತ್ತೀಚಿನ ತಿದ್ದುಪಡಿ ಪ್ರಕಾರ, ಬಾಲಕಾರ್ಮಿಕರ ವಯಸ್ಸಿನ ಮಿತಿಯನ್ನು 14ರಿಂದ 18ಕ್ಕೇರಿಸಲಾಗಿದೆ. ಇವರು ಅಪಾಯಕಾರಿಯಾದ ಉದ್ದಿಮೆಗಳಲ್ಲಿ ದುಡಿಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೆ, ತಮ್ಮ ಕುಟುಂಬದವರು ನಡೆಸುವ ಅಪಾಯಕಾರಿ ಅಲ್ಲದ ಉದ್ದಿಮೆಗಳಲ್ಲಿ 14-18 ವರ್ಷದ ಮಕ್ಕಳು ತಮ್ಮ ಶಾಲಾ ಕಾಲೇಜಿನ ಅವಧಿಯ ಬಳಿಕ ಅಥವಾ ರಜಾ ದಿನಗಳಲ್ಲಿ ದುಡಿಯಬಹುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ ಮತ್ತಿತರರು ಇದ್ದರು.

Leave a Reply