ಅರಣ್ಯ ಹಕ್ಕು ಕಾಯ್ದೆಯಡಿ 21.54 ಎಕ್ರೆ ಜಮೀನು ಗಿರಿಜನರಿಗೆ ಮಂಜೂರು-ಡಿಸಿ    

ಮಂಗಳೂರು: ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 ಮತ್ತು ನಿಯಮ 2008 ಮತ್ತು ತಿದ್ದುಪಡಿನಿಯಮಗಳು 2012ರಂತೆ ಜಿಲ್ಲಾ ದ.ಕ.ಜಿಲ್ಲೆಯಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ19 ಅರಣ್ಯವಾಸಿಗಳಿಗೆ 21.54ಎಕ್ರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಛೇರಿಯಲ್ಲಿ ಈ ಸಂಬಂದ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರಣ್ಯದಲ್ಲೆ ವಾಸ ಮಾಡುತ್ತಿರುವ ಗಿರಿಜನರು ವೈಯುಕ್ತಿಕ ಹಾಗೂ ಸಮುದಾಯ ಆಧಾರದಲ್ಲಿ ಜಮೀನು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಇನ್ನು 15 ದಿನಗಳ ಒಳಗಾಗಿ ವಿಲೆ ಮಾಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪುತ್ತೂರು ಮತ್ತು ಮಂಗಳೂರು ಉಪ ವಿಭಾಗ ಮಟ್ಟದ ಅರಣ್ಯ ಸಮಿತಿಯಲ್ಲಿ ಬಾಕಿ ಉಳಿದಿರುವ ವೈಯುಕ್ತಿಕ ಮತ್ತು ಸಮುದಾಯದ ಅರ್ಜಿಗಳ ಒಟ್ಟು ಸಂಖ್ಯೆ 301 ಆಗಿದ್ದು, ಇದರಲ್ಲಿ ಪುತ್ತೂರು ಉಪ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 10 ಗ್ರಾಮಗಳ 123 ಪರಿಶಿಷ್ಟ ವರ್ಗದವರ ಮತ್ತು 66 ಇತರರ ಒಟ್ಟು 189 ಅರ್ಜಿಗಳು, ಸುಳ್ಯ ತಾಲೂಕಿನಲ್ಲಿ 03 ಗ್ರಾಮಗಳ 32 ಪರಿಶಿಷ್ಟರು ಹಾಗೂ 50 ಇತರರ ಅರ್ಜಿಗಳು ಸೇರಿ ಒಟ್ಟು 82 ಅರ್ಜಿಗಳು ಬಾಕಿ, ಪುತ್ತೂರು ತಾಲೂಕಿನಲ್ಲಿ 4 ಗ್ರಾಮಗಳ 20 ಪರಿಶಿಷ್ಟರು ಹಾಗೂ ಇತರರ 01 ಅರ್ಜಿಗಳು ಬಾಕಿ ಉಳಿದಿವೆ. ಮಂಗಳೂರು ಉಪ ವಿಭಾಗದ ಬಂಟ್ವಾಳ ತಾಲೂಕಿನಲ್ಲಿ 2 ಗ್ರಾಮಗಳ 4 ಪರಿಶಿಷ್ಟರ ಹಾಗೂ 5 ಇತರರ ಅರ್ಜಿಗಳು ಬಾಕಿ ಉಳಿದಿವೆ ಎಂದು ಸಮಗ್ರ ಗಿರಿಜನ ಅಭಿವೃದ್ದಿ ಅಧಿಕಾರಿ ಸಭೆಗೆ ತಿಳಿಸಿದರು.

ಮೀಸಲು ಅರಣ್ಯ ಒಳಗೆ ಇರುವ ಗಿರಿಜನರು ಕೃಷಿ ಮಾಡುತ್ತಿರುವ ಜಮೀನುಗಳ ಹಕ್ಕನ್ನು ಮಾತ್ರ ಪ್ರತಿಪಾದಿಸಲು ಹಾಗೂ ಸಮ್ಮತಿ ಸೂಚಿಸುವ ಯಾ ನಿರಾಕರಿಸುವ ಪ್ರಕ್ರಿಯೆಯನ್ನು ಮಾತ್ರ ಅರಣ್ಯ ಇಲಾಖೆ ಮಾಡುವುದಾಗಿ ಹಾಗೂ ಮೀಸಲು ಅರಣ್ಯದ ಹೊರಗಿನ 100 ಮೀ.ಒಳಗಿನ ಜಮೀನುಗಳ (ಬಫರ್) ಕುರಿತಂತೆ ಕಂದಾಯ ಇಲಾಖೆ ಅಭಿಪ್ರಾಯ ಸೂಚಿಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಸಭೆಗೆ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆ 20,83,625 ರಲ್ಲಿ 82,268 ಪರಿಶಿಷ್ಟರು 717 ಕಾಲೋನಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಒಟ್ಟಾರೆ ಜನಸಂಖ್ಯೆಯ ಶೇ.3.94 ರಷ್ಟು ಇದೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೊರಗಪ್ಪ ನಾಯಕ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಲೆಕುಡಿಯರ ಅಭಿವೃದ್ದಿಗೆ ರೂ. 227 ಲಕ್ಷ ವೆಚ್ಚ

ಮಂಗಳೂರು: ಅತ್ಯಂತ ಹಿಂದುಳಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯರ ಅಭಿವೃದ್ದಿಗಾಗಿ ಜಿಲ್ಲೆಯಲ್ಲಿ ಗಿರಿಜನ ಅಬಿವೃದ್ಧಿ ಯೋಜನೆಯಡಿ ಒಟ್ಟು. ರೂ.227.00ಲಕ್ಷ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಛೇರಿಯಲ್ಲಿ ಈ ಸಂಬಂದ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

417 ಮನೆಗಳ ದುರಸ್ತಿಗೆ ರೂ.104.25, ಹೈನುಗಾರಿಕೆಗೆ 50 ಜನರಿಗೆ ಹಸು, ಎಮ್ಮೆ ಇತರೆ ಪ್ರಾಣಿಗಳ ಖರಿದಿಗಾಗಿ ರೂ.20.00, ಸಸ್ವಯಂ ಉದ್ಯೋಗ ಕೈಗೊಳ್ಳಲು ಪ್ರವಾಸಿ ಕಾರು ಖರಿದಿಗಾಗಿ 7 ಜನರಿಗೆ ರೂ.17.50, ಕೃಷಿಯಲ್ಲಿ ಸ್ಪ್ರಿಂಕಲರ್ಗಳನ್ನು ಅಳವಡಿಸಲು 21 ಜನರಿಗೆ ರೂ.5.25, 16ಜನರಿಗೆ ಪಂಪ್‍ಸೆಟ್ಟು ಕೊಳ್ಳಲು ರೂ. 3.20, 2 ಸಮುದಾಯ ಭವನ ನಿರ್ಮಾಣಕ್ಕಾಗಿ ರೂ.40.00 ಹಾಗೂ ಮಲೆಕುಡಿಯರು ವಾಸಿಸುವ ಕಾಲೋನಿಗಳಲ್ಲಿನ ರಸ್ತೆ ಚರಂಡಿಗಳ ನಿರ್ಮಾಣಕ್ಕಾಗಿ ರೂ.36.80ಲಕ್ಷ ಅನುದಾನ ಮೀಸಲಿಡಲಾಗಿದೆ.

ಮಲೆಕುಡಿಯರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು 15 ದಿನಗಳೊಳಗೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸೂಚಿಸಿದ್ದಾರೆ.

ಕೊರಗರಿಗೆ ನಿರ್ಮಿಸಿಕೊಟ್ಟಿರುವ ಮನೆಗಳ ಹಕ್ಕು ಪತ್ರ ಮತ್ತು ಮನೆ ನಂಬ್ರಗಳನ್ನು ನೀಡಿ-ಜಿಲ್ಲಾಧಿಕಾರಿ

ಮಂಗಳೂರು: ಜಿಲ್ಲೆಯಲ್ಲಿರುವ ಕೊರಗ ಜನಾಂಗದವರಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಕೆಲವು ತಾಲೂಕುಗಳಲ್ಲಿ ಹಕ್ಕುಪತ್ರ ನೀಡದೆ ಹಾಗೂ ಮನೆ ನಂಬ್ರಗಳನ್ನು ನೀಡದೆ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಕೊರಗಜನಾಂಗದ ಕೆಲವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಲ್ಲಿ ತಮ್ಮ ಕಷ್ಟ ಹೇಳಿದಾಗ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಕೂಡಲೇ ಎಲ್ಲಾ ಕೊರಗ ಸಮುದಾಯದ ಜನರ ಮನೆಗಳಿಗೆ ಕಾನೂನು ರೀತಿಯಲ್ಲಿ ಹಕ್ಕುಪತ್ರ ವಿತರಣೆ ಹಾಗೂ ಮನೆ ನಂಬ್ರಗಳನ್ನು ನೀಡುವಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಸೂಚಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಮೂಲ ನಿವಾಸಿ ಕೊರಗ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಒಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1206 ಕೊರಗ ಕುಟುಂಬಗಳ 4858 ಜನ ಕೊರಗರು ವಾಸ ಮಾಡುತ್ತಿದ್ದಾರೆ. 2008-09 ರಿಂದ 2012-13 ನೇ ಸಾಲಿನಲ್ಲಿ ಕೊರಗರ ಸಮಗ್ರ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ರೂ.1389.02 ಲಕ್ಷಗಳ ಅನುದಾನ ಬಿಡುಗಡೆ ಮಾಡಿದ್ದು,ರೂ. 1008.06ಲಕ್ಷ ಅನುದಾನ ವೆಚ್ಚವಾಗಿದ್ದು, ರೂ.380.96ಲಕ್ಷ ಅನುದಾನ  ಉಳಿಕೆಯಾಗಿದೆ ಎಂದು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.

ಕೊರಗ ಜನಾಂಗದವರಿಗೆ ಇಲ್ಲಿಯ ವರೆಗೆ 474 ಮನೆಗಳನ್ನು ನಿರ್ಮಿಸಿ ವಿತರಿಸಿದ್ದು,  94 ಮನೆಗಳು ನಿರ್ಮಾಣ ಹಂತದಲ್ಲಿವೆ, 263 ಮನೆಗಳು ಪೂರ್ಣಗೊಂಡಿವೆ, 127 ಮನೆಗಳಿಗೆ ಹಕ್ಕು ಪತ್ರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಇಲ್ಲಿಯವರೆಗೆ 03 ಜನರಿಗೆ ಹಕ್ಕು ಪತ್ರ ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 404ಜನರಿಗೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕಿಸಲು ಒಟ್ಟು ರೂ.69.21ಲಕ್ಷ ವೆಚ್ಚ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಮಹಾನಗರಪಾಲಿಕೆ ಉಪ ಆಯುಕ್ತ ಗೋಪಾಲದಾಸ್ ನಾಯಕ್ ಮುಂತಾದವರು ಹಾಜರಿದ್ದರು.

Leave a Reply

Please enter your comment!
Please enter your name here