ಆಯುರ್ವೇದ ಮಾನವ ಧರ್ಮ: ಶಾಸಕ.ಜೆ.ಆರ್.ಲೋಬೋ

ಆಯುರ್ವೇದ ಮಾನವ ಧರ್ಮ: ಶಾಸಕ.ಜೆ.ಆರ್.ಲೋಬೋ

ಮಂಗಳೂರು: ಸಹಸ್ರಾರು ವರ್ಷಗಳಿಂದ ಭಾರತೀಯ ಜನರ ಜೀವನ ಪದ್ಧತಿಯಾಗಿ ಬೆಳೆದು ಬಂದ ಆಯುರ್ವೇದ – “ಮಾನವ ಧರ್ಮವಾಗಿದೆ. ಆಯುರ್ವೇದದ ಧ್ಯಾನ ಸಂಪತ್ತನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಂಡು ಮನೋನಿಗ್ರಹದೊಂದಿಗೆ ಯೋಗ್ಯ ಆಹಾರ ಹಾಗೂ ಯೋಗಾಭ್ಯಾಸದೊಂದಿಗೆ ರೋಗಮುಕ್ತ ಜೀವನ ಸಾಧ್ಯ. ಆದರೆ ಸಂಪದ್ಭರಿತವಾದ ಆಯುರ್ವೇದದ ಬಗ್ಗೆ ಜನರು ನಿರಾಸಕ್ತಿಯಿಂದ ಹಾಗೂ ತಮ್ಮಲ್ಲಿ ಹಣವಿದೆ ಎಂಬ ಕಾರಣದಿಂದ ದಿಢೀರ್ ಗುಣಮುಖರಾಗುವ ಭಾವನೆಯೊಂದಿಗೆ ವೈದ್ಯರ ಬಳಿ ಹೋಗಿ ಔಷಧಿಗಳ ಸೇವನೆಗೆ ಹೆಚ್ಚಿನ ಮಹತ್ವ ನೀಡುವುದು ಕಂಡು ಬರುತ್ತಿದೆ. ಯೋಗಾಸನದಿಂದ ದಿನವಿಡೀ ಲವಲವಿಕೆಯಿಂದ ಕೆಲಸ ಮಾಡಲು ಚೈತನ್ಯ ಲಭಿಸುತ್ತದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಹೇಳಿದರು.

ayush-helth-camp_1-1

ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ, ಆಯುಷ್ ಆಸ್ಪತ್ರೆ ರಸ್ತೆ, ಹ್ಯಾಟ್‍ಹಿಲ್, ಲಾಲ್‍ಬಾಗ್ ಹಾಗೂ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಅಶೋಕನಗರ, ಮಂಗಳೂರು ಇದರ ವತಿಯಿಂದ ಬೋಳೂರು ಮೊಗವೀರ ಗ್ರಾಮಸಭಾ, ಬೋಳೂರು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಬೋಳೂರು ಮೊಗವೀರ ಮಹಿಳಾ ಮಂಡಳಿ ಇದರ ಸಹಭಾಗಿತ್ವದಲ್ಲಿ ರವಿವಾರ ಬೋಳೂರು ಸುಲ್ತಾನ್ ಬತ್ತೇರಿ ಸಮೀಪದ ಮೊಗವೀರ ಸಭಾ ಭವನದಲ್ಲಿ ಆಯೋಜಿಸಲಾದ ಆಯುಷ್ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ “ಆಯುಷ್ ಸ್ವಾಸ್ಥ್ಯ ಕಾರ್ಡ್“ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಯೋಗಮುದ್ರೆಗಳ ಯೋಜನೆಗಳ ಬಗ್ಗೆ ಅನುಭವಾಧಾರಿತ ಸರಳ ಆರೋಗ್ಯ ಸೂತ್ರಗಳೊಂದಿಗೆ ಮಾಹಿತಿ ನೀಡುವ ಮೂಲಕ ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಜಿಲ್ಲಾ ಆಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯರಾದ ಡಾ:ದೇವದಾಸ್‍ರವರು ಈ ಶಿಬಿರವನ್ನು ಆಯೋಜಿಸಿರುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 35 ವರ್ಷಗಳಿಂದ ಬೋಳೂರು ಗ್ರಾಮದ ಜನರ ಆರೋಗ್ಯ ಸೇವೆಯಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆಗೈದು ಆಯುಷ್ ಇಲಾಖೆಯ ಪ್ರಯೋಜನ ದೊರೆತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು. “ಆಯುಷ್ ಸ್ವಾಸ್ಥ್ಯ ಕಾರ್ಡ್“ ಪರಿಕಲ್ಪನೆಯೊಂದಿಗೆ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯಗಳಲ್ಲಿ ದೊರೆಯುವ ಉಚಿತ ವಿಶೇಷ ಚಿಕಿತ್ಸಾ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಸಾರ್ವಜನಿಕರಿಗೆ ಕರೆಯಿತ್ತರು.

ಜಿಲ್ಲಾ ಆಯುಷ್ ಅಧಿಕಾರಿ ಡಾ:ಮಹಮದ್ ಇಕ್ಬಾಲ್ ಮಾತನಾಡಿ, ಆಯುಷ್ ಪದ್ಧತಿಗಳನ್ನು ಪ್ರಧಾನ ವಾಹಿನಿಗೆ ತರಲು ಇಲಾಖೆಯು ಹೆಚ್ಚಿನ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆಯುಷ್ ಆಸ್ಪತ್ರೆ, ಚಿಕಿತ್ಸಾಲಯಗಳು ಹಾಗೂ ವೆನ್‍ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆಯುಷ್ ತಜ್ಞ ವೈದ್ಯರ ಸೇವೆ ಪಡೆಯುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಬೋಳೂರು ಮೊಗವೀರ ಗ್ರಾಮಸಭಾದ ಉಪಾಧ್ಯಕ್ಷರಾದ ದೇವದಾಸ್ ಬೋಳೂರು, ಬೋಳೂರು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್‍ನ ಗೌರವಾಧ್ಯಕ್ಷ ವಾಸುದೇವ ಬೋಳೂರು, ಬೋಳೂರು ಮೊಗವೀರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ರಘು, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ: ಸಂತೋಷ್ ಕುಮಾರ್.ಜೆ, ಡಾ:ಸಂದೀಪ್ ಬೇಕಲ್, ಡಾ:ಜೆಸಿಂತಾ ಎಮ್.ಡಿಸೋಜ, ರಂಜನ್, ದೇವಾನಂದ್, ಜಯರಾಜ್ ಅಮಿನ್ ಮುಂತಾದವರು ಉಪಸ್ಥಿತರಿದ್ದರು.

ಬೋಳೂರು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಆರ್.ಪಿ.ಬೋಳೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಉಷಾ ವಂದಿಸಿದರು.

ಶಿಬಿರದಲ್ಲಿ ಗಂಟುನೋವು, ಬೆನ್ನುನೋವು, ನರಸಂಬಂಧಿ ರೋಗ ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ತಜ್ಞ ವೈದ್ಯರು, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯರು ಸೇವೆಗೈದು ಆರೋಗ್ಯ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತ ಆಯುರ್ವೇದ ಔಷಧಿಗಳನ್ನು ವಿತರಿಸುವುದರ ಜೊತೆಗೆ ಸೂಕ್ತ ಸ್ವಾಸ್ಥ್ಯ ರಕ್ಷಣೆಯ ಸಲಹೆಗಳನ್ನು ನೀಡಲಾಯಿತು. ಸುಮಾರು 200ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

Leave a Reply