ಆಳ್ವಾಸ್ `ಟೇಕಾಫ್ ಸರಣಿ’ಯ ಮೂರನೇ ಸಂವಾದ

Spread the love

ಆಳ್ವಾಸ್ `ಟೇಕಾಫ್ ಸರಣಿ’ಯ ಮೂರನೇ ಸಂವಾದ

ಮೂಡುಬಿದಿರೆ: `ಪತ್ರಿಕೋದ್ಯಮ ಒಂದು ವಿಶಿಷ್ಟ ಕ್ಷೇತ್ರ. ಇದೇ ಕಾರಣಕ್ಕೆ ಪತ್ರಿಕೋದ್ಯಮವನ್ನು ಅಭ್ಯಸಿಸುವವರೂ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಕೇವಲ ಪಠ್ಯಜ್ಞಾನ ಸಾಕಾಗುವುದಿಲ್ಲ; ಪಠ್ಯಶಿಕ್ಷಣದ ಜೊತೆಗೆ ಬೇರೆ ವಿಷಯಗಳ ಬಗ್ಗೆಯೂ ಜ್ಞಾನ ಇರಬೇಕಾದುದು ಅತಿ ಮುಖ್ಯ. ಈ ರೀತಿಯ ವಿಷಯ ಸಂಗ್ರಹ ಇದ್ದಾಗ ಮಾತ್ರ ಒಬ್ಬ ವಿದ್ಯಾರ್ಥಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಉದಯವಾಣಿಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥ ಮನೋಹರ್‍ಪ್ರಸಾದ ಹೇಳಿದರು.

alvas-interaction

ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹೊಸ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ `ಟೇಕಾಫ್ ಸರಣಿ’ಯ ಮೂರನೇ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಇವತ್ತು ಭಾರತದಲ್ಲಿ ನಡೆದ ಬಹುತೇಕ ಹಗರಣಗಳನ್ನು ಬಯಲಿಗೆಳೆದದ್ದು ಪತ್ರಿಕೆಗಳೇ ಹೊರತು ವಿರೋಧಪಕ್ಷಗಳಲ್ಲ. ಒಬ್ಬ ಪತ್ರಕರ್ತ ಎಲ್ಲಾ ವಿಷಯಗಳಿಗೆ ಸ್ಪಂದಿಸಿದಾಗ, ಸಂವೇದನೆಗಳನ್ನು ಹೊಂದಿದಾಗ ಮಾತ್ರ ಇಂತಹ ಸಾಧನೆಗಳು ಸಾಧ್ಯವಾಗುತ್ತವೆ. ಇದೆಲ್ಲದರ ಜೊತೆಗೆ ಒಬ್ಬ ಪತ್ರಕರ್ತ ಮಾನವ ಸಂಬಂಧಗಳನ್ನು ಅರಿತುಕೊಳ್ಳುವುದು ಹಾಗೂ ಅದಕ್ಕೆ ಬೆಲೆ ಕೊಡುವುದು ತುಂಬಾ ಮುಖ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮೊದಲು ಪತ್ರಿಕೆ ಓದುವುದನ್ನು ಕಲಿತಾಗ ಮಾತ್ರ ಒಂದು ಪತ್ರಿಕೆಯನ್ನು ರೂಪಿಸಬಹುದೆಂದ ಮನೋಹರ್‍ಪ್ರಸಾದ ಸುದ್ದಿಗ್ರಹಣದ ಸೂಕ್ಷ್ಮತೆಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಅರಿಯುವುದು ಅವಶ್ಯಕವೆಂದರು. ಒಬ್ಬ ಪತ್ರಕರ್ತ ಕೇವಲ ಸುದ್ದಿ ಮಾಡುವುದಲ್ಲ ಅದರ ಸುತ್ತಲಿನ ವಿಷಯಗಳನ್ನು ಅರಿಯಬೇಕು. ಒಂದು ವರದಿ ಮಾಡುವಾಗ ಅದರ ಜೊತೆಗೆ ವಿವಿಧ ಕಥೆಗಳು, ವಿವಿಧ ಮುಖಗಳು ಬಯಲಾಗುತ್ತಾ ಹೋಗುತ್ತವೆ. ಅದೆಲ್ಲವನ್ನು ಗ್ರಹಿಸುವ ಹಾಗೂ ಚಿಂತನೆ ಮಾಡುವ ಶಕ್ತಿ ಒಬ್ಬ ಪತ್ರಕರ್ತನಿಗೆ ಇರಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಕೊನೆಗೆ ಸಂವಾದ ನಡೆಯಿತು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಮನೋಹರ್‍ಪ್ರಸಾದ ಉತ್ತರಿಸಿದರು. ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಮುಖ್ಯಸ್ಥೆ ಡಾ. ಮೌಲ್ಯ ಜೀವನ್‍ರಾಮ್, ಪದವಿ ವಿಭಾಗ ಮುಖ್ಯಸ್ಥೆ ರೇಶ್ಮಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


Spread the love