ಇಬ್ಬರಿಗೆ ಸಂಪುಟ ದರ್ಜೆ, ಮತ್ತಿಬ್ಬರಿಗೆ ರಾಜ್ಯ ಸಚಿವ ಸ್ಥಾನ: ಸಿಎಂ

ಬೆಂಗಳೂರು: ಇಂದು ಸಂಜೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದು, ಇಬ್ಬರು ಶಾಸಕರಿಗೆ ಸಂಪುಟ ದರ್ಜೆ ಹಾಗೂ ಮತ್ತಿಬ್ಬರು ಶಾಸಕರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಇಂದು ಬೆಳಗ್ಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸಂಪುಟ ಪುನಾರಚನೆ ಇಲ್ಲ. ಕೇವಲ ವಿಸ್ತರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಡಾ.ಜಿ.ಪರಮೇಶ್ವರ, ವಿನಯ್ ಕುಲಕರ್ಣಿ, ಮನೋಹರ್ ತಹಶೀಲ್ದಾರ್ ಹಾಗೂ ಎ.ಮಂಜು ಅವರು ತಮ್ಮ ಸಂಪುಟ ಸೇರುತ್ತಿರುವುದಾಗಿ ಸಿಎಂ ತಿಳಿಸಿದರು.

ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆ

ಈಗಾಗಲೇ ರಾಜ್ಯ ಸರ್ಕಾರ ಅಧಿಕೃತವಾಗಿ ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನಿಸಿದ್ದು, ಡಾ.ಜಿ.ಪರಮೇಶ್ವರ ಹಾಗೂ ಮನೋಹರ್ ತಹಶೀಲ್ದಾರ್ ಅವರಿಗೆ ಸಂಪುಟ ದರ್ಜೆ ಹಾಗೂ ವಿನಯ್ ಕುಲಕರ್ಣಿ ಮತ್ತು ಎ.ಮಂಜು ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿದೆ.

ಇಂದು ಸಂಜೆ 4.30ಕ್ಕೆ ಪ್ರತಿಜ್ಞಾವಿಧಿ ಸಮಾರಂಭ ನಿಗದಿಯಾಗಿದ್ದು, ರಾಜಭವನದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Leave a Reply