ಉಜಿರೆ: ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ: ಕೇಂದ್ರ ಸಚಿವ ಕಾಲ್‍ರಾಜ್ ಮಿಶ್ರಾ

ಉಜಿರೆ: ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಪ್ರಬಲ ಇಚ್ಚಾಶಕ್ತಿಯೊಂದಿಗೆ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಆರ್ಥಿಕ ಅನುದಾನ ಮತ್ತು ನೆರವನ್ನು ಸರ್ಕಾರ ನೀಡುತ್ತದೆ. ತನ್ಮೂಲಕ ಗ್ರಾಮೀಣ ಉದ್ಯಮ ಶೀಲತೆ ಅಭಿವೃದ್ಧಿಯಿಂದ ದೇಶದ ಸ್ವಾವಲಂಬನೆ, ಪ್ರಗತಿ ಮತ್ತು ಸಬಲೀಕರಣ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ಕಾಲ್‍ರಾಜ್ ಮಿಶ್ರಾ ಹೇಳಿದರು.

ಧರ್ಮಸ್ಥಳದಲ್ಲಿ ಭಾನುವಾರ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ಸಬಲೀಕೃತ ಸ್ವ-ಸಹಾಯ ಸಂಘಗಳ ಸದಸ್ಯರ ಮತ್ತು ಸಣ್ಣ ಉದ್ದಿಮೆದಾರರ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಖಾದಿ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸಿಗುವ ಕಚ್ಛಾವಸ್ತುಗಳನ್ನು ಬಳಸಿ ಕಿರು ಉದ್ದಿಮೆಗಳನ್ನು ಪ್ರಾರಂಭಿಸಬೇಕು. ಇದಕ್ಕೆ ಬೇಕಾದ ಕೌಶಲ ಅಭಿವೃದ್ಧಿಗಾಗಿ ಸರ್ಕಾರ ತರಬೇತಿ ನೀಡುತ್ತದೆ. ಯುವಜನತೆ ನೌಕರಿ ಬೇಟೆಯಲ್ಲಿ ತೊಡಗದೆ ಸ್ವಂತ ಉದ್ದಿಮೆ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು,

ಕರ್ನಾಟಕದಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಿಜವಾದ ಅರ್ಥದಲ್ಲಿ ಧರ್ಮದ ಪ್ರತೀಕವಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವೆ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಶ್ಲಾಘಿಸಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿವರು ಕಲ್ಪನೆ ಮಾಡಿದ ರಾಮರಾಜ್ಯದ ಕನಸು ಇಲ್ಲಿ ನನಸಾಗುತ್ತಿದೆ ಎಂದು ಅವರು ಹೇಳಿದರು.

ಶುಭಾಶಂಸನೆ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬರ ಮನದಲ್ಲಿಯೂ ಧನಾತ್ಮಕ ಪರಿವರ್ತನೆಯಾಗಿದೆ. ಬಡವರ ಭಾಗ್ಯದ ಬಾಗಿಲು ತೆರೆದಿದೆ ಎಂದರು.

ಮುದ್ರಾ ಬ್ಯಾಂಕ್ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿನಾಶದಂಚಿನಲ್ಲಿರುವ ಗೃಹ ಕೈಗಾರಿಕೆ ಮತ್ತು ಗ್ರಾಮೀಣ ಕೈಗಾರಿಕೆಯನ್ನು ಪುನರ್‍ಜ್ಜೀವನಗೊಳಿಸಬೇಕು. ಸ್ವ-ಸಹಾಯ ಸಂಘದ ಮಹಿಳೆಯವರು ತಯಾರಿಸಿದ ಗೃಹ ಬಳಕೆಯ ವಸ್ತುಗಳು, ಬಟ್ಟೆ, ಅಗರಬತ್ತಿ, ಫಿನಾಯಿಲ್ ಇತ್ಯಾದಿಗಳಿಗೆ ಉತ್ತಮ ಬೇಡಿಕೆ ಇದೆ. ಕಳೆದ ವರ್ಷ “ಸಿರಿ” ಸಂಸ್ಥೆ ಕಳೆದ ವರ್ಷ 25 ಕೋಟಿ ರೂ, ವ್ಯವಹಾರ ಮಾಡಿದೆ ಎಂದು ಹೆಗ್ಗಡೆಯವರು ಹೇಳಿದರು.

ಬೆಂಗಳೂರಿನಲ್ಲಿ 2 ಎಕ್ರೆ ಜಾಗದಲ್ಲಿ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳಿಗೆ ತರಬೇತಿ ನೀಡಲು ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಅವರು ಕೋರಿದರು.

ಆರ್‍ಸೆಟಿಯ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ದನ್ ಮಾತನಾಡಿ, ದೇಶದಲ್ಲಿ 580 ಆರ್‍ಸೆಟಿ ಶಾಖೆಗಳ ಮೂಲಕ ಪ್ರತಿವರ್ಷ 4 ಲಕ್ಷ ನಿರುದ್ಯೋಗಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.

ಯಶಸ್ವೀ ಕಿರು ಉದ್ದಿಮೆದಾರರಾದ ಬೆಳ್ತಂಗಡಿಯ ವೇದಾ ಮತ್ತು ಪಟ್ರಮೆಯ ಗುಲಾಬಿ ತಮ್ಮ ಉದ್ಯಮದ ಯಶೋಗಾಥೆಯನ್ನು ವಿವರಿಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಸತ್ಯವತಿ ಕಾಲ್‍ರಾಜ್ ಮಿಶ್ರಾ, ಎಮ್.ಎಸ್.ಎಮ್.ಇ. ಸಚಿವಾಲಯದ ಜಂಟಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಸಿಂಡಿಕೇಟ್ ಬ್ಯಾಂಕ್‍ನ ಮಹಾಪ್ರಬಂಧಕ ಕೆ.ಟಿ. ರೈ, ಕಾರ್ಪೋರೇಶನ್ ಬ್ಯಾಂಕ್‍ನ ಮಹಾಪ್ರಬಂಧಕ ವಿ. ತಂಗರಾಜು, ವಿಜಯಾ ಬ್ಯಾಂಕ್‍ನ ಉಪ ಮಹಾಪ್ರಬಂಧಕ ಅನಿಲ್ ಕೆ. ಶೆಟ್ಟಿ, ಕೆನರಾ ಬ್ಯಾಂಕ್‍ನ ಉಪ ಮಹಾಪ್ರಬಂಧಕ ಜಿ.ವಿ. ಪ್ರಭು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಯುತ ಪೂಜಾರಿ, ಲ್ಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ರಾವ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ ಸ್ವಾಗತಿಸಿದರು. ಸಿರಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ಧನ್ಯವಾದವಿತ್ತರು.

Leave a Reply