ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ

ಉಜಿರೆ: ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ. ಆದರೆ, ಅಲ್ಲಿ ಸಾಹಿತಿಗಳಿಲ್ಲ, ವಿಚಾರವಂತರಿದ್ದಾರೆ. ಧರ್ಮ ಗುರುಗಳಿಲ್ಲ, ರಾಜಕೀಯ ವ್ಯಕ್ತಿಗಳಿದ್ದಾರೆ. ಮುಕ್ತ ಮನಸ್ಸಿನಿಂದ ಇಂದು ಸಂಶೋಧನೆ ಮಾಡುವುದೇ ಅಪರಾಧವಾಗಿದೆ ಎಂದು ಖ್ಯಾತ ಸಂಶೋಧಕ ಬೆಂಗಳೂರಿನ ಡಾ. ಷ. ಶೆಟ್ಟರ್ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಎಂಬತ್ತಮೂರನೆ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಬುದ್ಧ ಪ್ರಜಾಪ್ರಭುತ್ವದ ಮೂಲ ಗುಣ ಸಹಿಷ್ಣುತೆ ಆಗಿದೆ. ಈಗ ಯಾವುದೇ ವಿಚಾರ ಮಂಡನೆ ಮಾಡಬೇಕಾದರೂ ಅತೀವ ವೇದನೆಯಾಗುತ್ತಿದೆ. ತಾನು ಇನ್ನೂ ಬರೆಯುತ್ತಿದ್ದರೂ ಆತಂಕದಿಂದಲೇ ಬರೆಯುತ್ತಿದ್ದೇನೆ. ಆದರೆ, ಸಮಾಜದ ಜನರು ತನ್ನನ್ನು ನೋಯಿಸಿದರೆ ಬರೆಯುವುದನ್ನೇ ತಾನು ಬಿಡಬೇಕಾಗುತ್ತದೆ ಎಂದು ಶೆಟ್ಟರ್ ಹೇಳಿದರು.

ಮುಕ್ತ ವಿಚಾರ ಮಂಡನೆ ಪ್ರಬುದ್ಧ ಸಮಾಜದ ಲಕ್ಷಣವಾಗಿದೆ. ಕುಲ, ಜಾತಿ, ಮತವನ್ನು ವೇದಿಕೆಯಾಗಿ ಬಳಸಿ ನಮ್ಮ ಸಾಹಿತ್ಯ ಮತ್ತು ಸಂಸ್ಕøತಿಯ ಅಧ್ಯಯನ ಮಾಡುವುದು ಸರಿಯಲ್ಲ. ನಮ್ಮ ಸಾಹಿತ್ಯವನ್ನು ನಾವು ಮಾತ್ರ ಓದದೆ ಇತರ ಭಾಷೆಯವರೂ ಓದಿದಾಗ ಸಾರ್ವತ್ರಿಕ ಸಾಹಿತ್ಯ ನಿರ್ಮಾಣವಾಗುತ್ತದೆ. ಅವರ ಟೀಕೆ, ಟಿಪ್ಪಣಿಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಶೆಟ್ಟರ್ ಸಲಹೆ ನೀಡಿದರು.

ನಾವು ಬಹುಭಾಷಾ ಪರಿಣತರಾದಾಗ ಸಂಸ್ಕøತಿ ಮತ್ತು ಸಾಹಿತ್ಯದ ಅಧ್ಯಯನ ಅರ್ಥಪೂರ್ಣವಾಗುತ್ತದೆ. ಇತರ ಭಾಷೆಗಳಲ್ಲಿ ನಿರ್ಮಾಣವಾದ ಸಾಹಿತ್ಯವನ್ನು ನಾವು ಓದಬೇಕು. ಅದೇ ರೀತಿ ನಮ್ಮ ಭಾಷೆಯಲ್ಲಿ ರಚನೆಯಾದ ಸಾಹಿತ್ಯವನ್ನು ಇತರ ಭಾಷೆಯವರೂ ಓದಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಕøತ ಪುರಾತನವಾದ ಮತ್ತು ಭವ್ಯ ಭಾಷೆ ಆಗಿದ್ದರೂ ಅದಕ್ಕೆ ಸ್ವಂತ ಲಿಪಿ ಇಲ್ಲದೆ ಹೆಳವನ ಭಾಷೆ ಆಗಿತ್ತು. ಕೇವಲ ಮೌಖಿಕ ಭಾಷೆಯಾಗಿತ್ತು. ಭಾಷೆಯ ವ್ಯವಹಾರ ಮೊದಲು ಪ್ರಾರಂಭವಾದದ್ದು ಕರ್ನಾಟಕದಲ್ಲೇ ಎಂದು ಅವರು ತಿಳಿಸಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ಯಶಸ್ವಿಯಾಗಿ ಏರ್ಪಡಿಸಿರುವುದನ್ನು ಸ್ಮರಿಸಿ ಸಾಹಿತ್ಯ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿರುವ ಪುರಾತನ ಹಸ್ತಪ್ರತಿಗಳನ್ನು ಆಸಕ್ತರ ಬಳಕೆಗೆ ನೀಡಲಾಗುತ್ತಿದೆ. ಸಾಕಷ್ಟು ಜನರು ಇದರ ಸಹಾಯದಿಂದ ಸಂಶೋಧನೆ ನಡೆಸುತ್ತಿದ್ದಾರೆ ಎಂದರು.

ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿರುವ ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಸಿ.ಡಿ., ಸೆಟ್‍ಲೈಟ್, ಡಿ.ವಿ.ಡಿ. ಮೊದಲಾದ ಆಧುನಿಕ ತಂತ್ರಜ್ಞಾನ ಬಳಕೆಯ ಸಾಧನಗಳನ್ನು ಸಂಗೀತ, ಕಲೆ, ನೃತ್ಯ ಸಿನಿಮಾಗಳ ಸಾಹಿತ್ಯ ಪ್ರಕಾರಗಳಲ್ಲಿ ಬಳಸಿ ಜ್ಞಾನ ಪ್ರಸಾರ ಮಾಡಲಾಗುತ್ತಿದೆ. ಈಗ ಸಾಹಿತ್ಯ ಪ್ರಕಾರಗಳು ಹೆಚ್ಚಾಗಿವೆ. ವಿಜ್ಞಾನ, ವೈದ್ಯಕೀಯ, ಯೋಗ, ಧ್ಯಾನ, ಮನೋ ವಿಜ್ಞಾನ ಮೊದಲಾದ ವಿಭಾಗಗಳಿವೆ ಎಂದು ಹೇಳಿದರು. ಮಾಧ್ಯಮವನ್ನು ಕೂಡಾ ಜ್ಞಾನಕ್ಕೆ ಮೂಲವೆಂದು ತಿಳಿದು ಸಾಹಿತ್ಯ ಪ್ರಕಾರಗಳಲ್ಲಿ ಸೇರಿಸಬಹುದು ಎಂದು ಡಾ. ಹೆಗ್ಗಡೆಯವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಖ್ಯಾತ ಸಾಹಿತಿ ಮೈಸೂರಿನ ಡಾ. ಪ್ರಧಾನ್ ಗುರುದತ್ ಮಾತನಾಡಿ, ಧರ್ಮ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧ ಇದೆ. ವಸ್ತುನಿಷ್ಟವಾಗಿ ನಾವು ಧರ್ಮವನ್ನು ಆಚರಣೆ ಮಾಡಬೇಕು. ಅಸಹಿಷ್ಣುತೆಗೆ ಪರಿಹಾರ ಮಾರ್ಗ ಧರ್ಮದಲ್ಲಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಭಾರತೀಯ ಸಂಸ್ಕøತಿಯ ಸಾರ ಅಡಗಿದೆ. ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹ ಮೂರ್ತಿ, ಉದಯವಾಣಿ ದೈನಿಕದ ಬೆಂಗಳೂರಿನ ಸಮೂಹ ಸಂಪಾದಕ ರವಿ ಹೆಗಡೆ ಮತ್ತು ಚಿತ್ರದುರ್ಗದ ಡಾ. ಲೋಕೇಶ್ ಅಗಸನ ಕಟ್ಟೆ ಸಾರ್ಥಕ ಬದುಕಿಗೆ ಸಾಹಿತ್ಯದ ಕೊಡುಗೆ ಬಗ್ಯೆ ಉಪನ್ಯಾಸ ನೀಡಿದರು.

ಡಾ. ಡಿ. ಯದುಪತಿ ಗೌಡ ಧನ್ಯವಾದವಿತ್ತರು. ಕಾರ್ಕಳದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

ರಾತ್ರಿ ನಡೆದ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವವನ್ನು ಲಕ್ಷಕ್ಕೂ ಮಿಕ್ಕಿದ ಭಕ್ತಾದಿಗಳು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

ಚೆನ್ನೈ ಮಳೆ ಸಂತ್ರಸ್ತರಿಗೆ ಧರ್ಮಸ್ಥಳದಿಂದ ನೆರವು
ಇತ್ತೀಚೆಗೆ ಚೆನ್ನೈನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಸಂಕಷ್ಟಕ್ಕೊಳಗಾದ ರೈತರಿಗೆ ಸಾಂತ್ವನ ನೀಡಿ ತಕ್ಷಣದ ಪರಿಹಾರವಾಗಿ ಧರ್ಮಸ್ಥದ ವತಿಯಿಂದ ಐವತ್ತು ಲಕ್ಷ ರೂ. ಮೊತ್ತದ ನೆರವು ನೀಡುವುದಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗುರುವಾರ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಿಸಿದರು.

ಈ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದ್ಯದಲ್ಲಿಯೇ ಚೆನ್ನೈಗೆ ಹೋಗಿ ಸಮೀಕ್ಷೆ ನಡೆಸಿ ಬಳಿಕ ಸೂಕ್ತ ಪರಿಹಾರ ನೀಡಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.

Leave a Reply

Please enter your comment!
Please enter your name here