ಉಡುಪಿ: ಅಕ್ಟೋಬರ್ 15 ರಂದು ಧರ್ಮಪ್ರಾಂತ್ಯದ ಯೋಜನೆಗಳ ಶಂಕುಸ್ಥಾಪನೆ ಹಾಗೂ ಅಶೀರ್ವಚನ

ಉಡುಪಿ: ನವಜಾತ ಉಡುಪಿ ಧರ್ಮಪ್ರಾಂತ್ಯವು ಇದೇ ಆಕ್ಟೋಬರ್ 15, 2015 ರಂದು ತನ್ನ ಸ್ಥಾಪನೆಯ ಮೂರು ಸಂವತ್ಸರಗಳನ್ನು ಪೂರೈಸುತ್ತಿದೆ. ಇದರೊಂದಿಗೆ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರೂ ತಮ್ಮ ಸೇವಾವಧಿಯ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಶುಭ ಸಂದರ್ಭದಲ್ಲಿ ಧರ್ಮಕ್ಷೇತ್ರದ ಬಹುಮುಖ್ಯ ಮೂರು ಯೋಜನೆಗಳಾದ ಪಾಲನ ಭವನ, ನಿವೃತ್ತ ಯಾಜಕರ ವಸತಿ ಹಾಗೂ ಗುರು ತರಬೇತಿ ಕೇಂದ್ರದ ಕಟ್ಟಡಗಳಿಗೆ ಅಡಿಗಲ್ಲನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಪ್ರಾಂತ್ಯ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ತಿಳಿಸಿದರು.

udupi_diocese_press meet 12-10-2015 16-25-08 udupi_diocese_press meet 12-10-2015 16-25-52 udupi_diocese_press meet 12-10-2015 16-26-28 udupi_diocese_press meet 12-10-2015 16-27-34

ಅವರು ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿಸ ಮಾತನಾಡಿ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರು ಈ ಮೂರೂ ಯೋಜನೆಗಳ ಅಡಿಗಲ್ಲನ್ನು ಆಶೀರ್ವದಿಸಲಿರುವರು. ನಗರಾಭಿವೃದ್ಧಿ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿಯ ಸನ್ಮಾನ್ಯ ಶಾಸಕರಾದ ಪ್ರಮೋದ್ ಮಧ್ವರಾಜ್ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಉಡುಪಿ ಧರ್ಮಪ್ರಾಂತ್ಯದ ಗುರುವರ್ಯರು, ಧರ್ಮಭಗಿನಿಯರು, ಪಾಲನಾ ಮಂಡಳಿಯ ಸದಸ್ಯರು, ಎಲ್ಲಾ ಧರ್ಮಕೇಂದ್ರಗಳ ಪಾಲನಾ ಮಂಡಳಿಗಳ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರುವರು.

ಧರ್ಮಪ್ರಾಂತ್ಯದ ನೂತನ ಪಾಲನಾ ಭವನ ಧರ್ಮಪ್ರಾಂತ್ಯದ ಪಾಲನಾ ಅಗತ್ಯತೆಗಳನ್ನು ಪೂರೈಸುವುದು. ಇದರಲ್ಲಿ ಧರ್ಮಪ್ರಾಂತ್ಯದ 18 ಪಾಲನಾ ಆಯೋಗಗಳ ಕಚೇರಿಗಳು (ಯುವಜನರು, ಕುಟುಂಬ, ಮಹಿಳೆಯರು, ನ್ಯಾಯ ಮತ್ತು ಶಾಂತಿ, ಶಿಕ್ಷಣ, ಆರೋಗ್ಯ, ಅಂತರ್-ಧರ್ಮೀಯ ಸಂವಾದ, ಇತ್ಯಾದಿ ಆಯೋಗಗಳು) ಇರುವುವು. ಈ ಆಯೋಗಗಳು ವಿವಿಧ ರೀತಿಯ ಪಾಲನಾ ಸೇವೆಗಳ ಮೂಲಕ ಜನರೊಡನೆ ಮಿಳಿತು ಕಾರ್ಯ ನಿರ್ವಹಿಸುವುವು. ಈ ಕಚೇರಿಗಳ ಹೊರತು, ಈ ಕೇಂದ್ರದಲ್ಲಿ ಎರಡು ಸಭಾಭವನಗಳು ಹಾಗೂ ವಿವಿಧ ಕಾರ್ಯಗಾರಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ವಿವಿಧ ಸೌಲಭ್ಯಗಳು ಇರುವುವು.

ನಿವೃತ್ತ ಯಾಜಕರ ವಸತಿ ನಿಲಯದಲ್ಲಿ ವಿವಿಧ ಧರ್ಮಕೇಂದ್ರಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಸಮರ್ಪಣಾ ಭಾವದಿಂದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವ ಯಾಜಕರು ವಯೋವೃದ್ಧರಾಗಿ ನಿವೃತ್ತರಾದಾಗ ಅವರಿಗೆ ಜೀವನದ ಕೊನೆಯ ದಿನಗಳನ್ನು ಆತಂಕ, ಚಿಂತೆಯಿಲ್ಲದೆ ಕಳೆಯಲು ಗೌರವಯುತ ವ್ಯವಸ್ಥೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಈ ಯಾಜಕರು ನಿಶ್ಚಿಂತೆಯಿಂದ ಬಾಳಲು ಎಲ್ಲಾ ವ್ಯವಸ್ಥೆಯನ್ನು ಮಾಡುವುದು ಧರ್ಮಾಧ್ಯಕ್ಷರ ಬಾಧ್ಯತೆಯಾಗಿದೆ. ಈ ಯೋಜನೆಯು 25 ಕೊಠಡಿಗಳ ಸಾಮರ್ಥ್ಯವುಳ್ಳದ್ದು.

ಉಡುಪಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ತರಬೇತಿ ಹೊಂದಿದ ಯುವ ಯಾಜಕರ ಆವಶ್ಯಕತೆಯಿದೆ. ಈ ಗುರು ತರಬೇತಿ ಕೇಂದ್ರವು ಯಾಜಕರಾಗಲು ಉಮೇದ್ವಾರರನ್ನು ಬರಮಾಡಿಕೊಂಡು ಅವರ ಸಮರ್ಪಣಾ ಮನೋಭಾವ ಹಾಗೂ ಸೇವಾ ಮನೋಭಾವವನ್ನು ಒರೆಗಚ್ಚುವ ಕಾರ್ಯವನ್ನು ನಿರ್ವಹಿಸಲಿದೆ. ಇಲ್ಲಿ ತರಬೇತಿ ಪಡೆಯುವ ಯುವಜನರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಇಲ್ಲಿಂದಲೇ ನಡೆಸಲಿದ್ದಾರೆ. ಈ ಕೇಂದ್ರವು ಯಾಜಕರಾಗಲು ಆರಿಸಲ್ಪಟ್ಟ ಸುಮಾರು 25 ವಿದ್ಯಾರ್ಥಿಗಳಿಗೆ ವಸತಿಯನ್ನು ನೀಡುವ ಸಾಮರ್ಥ್ಯವುಳ್ಳದ್ದು ಆಗಿದೆ ಎಂದರು

ಆಶೀರ್ವಚನ ಕಾರ್ಯಕ್ರಮವು 15 ಆಕ್ಟೋಬರ್, 2015 ರಂದು ಮುಂಜಾನೆ 10 ಗಂಟೆಗೆ ಸರಿಯಾಗಿ ಕಿನ್ನಿಮುಲ್ಕಿಯಲ್ಲಿರುವ ಧರ್ಮಪ್ರಾಂತ್ಯದ ಜಮೀನಿನಲ್ಲಿ ನಡೆಯಲಿರುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ, ಕೆಥೊಲಿಕ್ ಶಿಕ್ಷಣ ಸೊಸೈಟಿ ಇದರ ಕಾರ್ಯದರ್ಶಿ ವಂ ಡಾ ಲಾರೆನ್ಸ್ ಡಿ’ಸೋಜಾ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here