ಉಡುಪಿ: ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಪಡುಬಿದ್ರಿ ಸಮೀಪದ ಯುಪಿಸಿಎಲ್ ವಿದ್ಯುತ್ ಘಟಕದ ಎರಡನೆ ಹಂತದ ಕಾಮಗಾರಿಯನ್ನು ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ನಡೆಸಲಾಗುವುದು ಎಂದು ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಭರವಸೆ ನೀಡಿರುವುದಾಗಿ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

adani_udupi_visit 11-10-2015 22-47-01 adani_udupi_visit 11-10-2015 22-47-16 adani_udupi_visit 11-10-2015 22-47-30

ಉಡುಪಿ ಶ್ರೀಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಅದಾನಿ ಬಳಿಕ ಪೇಜಾವರ ಮಠಕ್ಕೆ ಆಗಮಿಸಿ ಮಾತುಕತೆ ನಡೆಸಿರುವ ವಿಚಾರದ ಕುರಿತು ಪೇಜಾವರ ಸ್ವಾಮೀಜಿ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಈ ಹಿಂದೆ ಪೇಜಾವರ ಸ್ವಾಮೀಜಿಯ ಮುತುವರ್ಜಿಯಲ್ಲಿ ಯುಪಿಸಿಎಲ್ ಸಮಸ್ಯೆ ಕುರಿತು ಪರಿಸರ ತಜ್ಞ ರಾಮಚಂದ್ರ ನೇತೃತ್ವದ ತಂಡ ತಯಾರಿಸಿದ ವರದಿಯನ್ನು ಈ ಸಂದರ್ಭದಲ್ಲಿ ಅದಾನಿಗೆ ಹಸ್ತಾಂತರಿಸಲಾಯಿತು.

ಯುಪಿಸಿಎಲ್‍ನ ಹಾರುಬೂದಿ ಹಾಗೂ ಉಪ್ಪುನೀರಿನಿಂದಾಗಿ ಕುಡಿಯುವ ನೀರು, ಪರಿಸರ ಹಾಳಾಗಿದ್ದು ಇದರ ವಿರುದ್ಧ ಸಾಕಷ್ಟು ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ನಡೆಸಿರುವ ಬಗ್ಗೆ ಅದಾನಿ ಗಮನಕ್ಕೆ ತಂದಿದ್ದೇನೆ. ಯುಪಿ ಸಿಎಲ್‍ನಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿದ್ದೆನೆ. ಇದನ್ನೆಲ್ಲ ಬಗೆಹರಿಸುವ ಭರವಸೆಯನ್ನು ಅದಾನಿ ನೀಡಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದರು.

ಎತ್ತಿನಹೊಳೆ ಯೋಜನೆಗೆ ನನ್ನ ವಿರೋಧ ಇಲ್ಲ. ಆದರೆ ಕರಾವಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದು. ನಾವೆಲ್ಲರು ಕನ್ನಡಿಗರು. ಆದುದರಿಂದ ಅಲ್ಲಿಗೂ ಅನ್ಯಾಯ ಆಗಬಾರದು, ಇಲ್ಲಿಗೂ ಅನ್ಯಾಯ ಆಗಬಾರದು ಎಂದು ಪೇಜಾವರ ಶ್ರೀ ಹೇಳಿದರು.

ಎತ್ತಿನ ಹೊಳೆಯಲ್ಲಿ ಒಂದು ಟಿಎಂಸಿಯೂ ನೀರಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಪರಿಶೀಲನೆ ನಡೆಸದೆ ಯೋಜನೆ ಅನುಷ್ಠಾನ ಆಗಬಾರದು. ಮುಂದೆ ಅಲ್ಲಿಂದ ನೀರು ಹರಿಯದಿದ್ದರೆ ಅದಕ್ಕೆ ಹಾಕಿರುವ ಹಣ ಪೋಲಾಗಿ ದೇಶದ ಆರ್ಥಿಕತೆ ನಷ್ಟ ಆಗಬಾರದು ಎಂದು ಅವರು ತಿಳಿಸಿದರು.

ನೇತ್ರಾವತಿ ನದಿ ನೀರು ಸಮುದ್ರ ಸೇರುವ ಮುನ್ನ ಅಣೆಕಟ್ಟುಗಳನ್ನು ಕಟ್ಟಿ ಅಲ್ಲಿ ಸಂಗ್ರಹವಾದ ನೀರನ್ನು ಮಧ್ಯ ಕರ್ನಾಟಕಕ್ಕೆ ಹಾಯಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಬಗ್ಗೆ ರಾಜಕಾರಣಿಗಳು, ರೈತರು, ಪರಿಸರ ತಜ್ಞರು, ಅಧಿಕಾರಿ ಗಳ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಪೇಜಾವರ ಶ್ರೀ ಸರಕಾರಕ್ಕೆ ಸಲಹೆ ನೀಡಿದರು.

ಪೇಜಾವರ ಶ್ರೀ ಹೋರಾಟದಲ್ಲಿ ಭಾಗಿಯಾಗದ ಕುರಿತು ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಜನಾರ್ದನ ಪೂಜಾರಿ ಹೇಳಿಕೆ ನೀಡುವ ಮೊದಲು ನಾನು ನೀಡಿದ್ದೆನೆ. ಎತ್ತಿನಹೊಳೆ ಹೋರಾಟಕ್ಕೆ ನನ್ನ ಬೆಂಬಲ ಇದೆ. ಆದರೆ ಪರ್ಯಾಯದ ಓಡಾಟದಿಂದಾಗಿ ಹೋರಾಟದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದರು.

 ಈ ಸಂದರ್ಭದಲ್ಲಿ ಅದಾನಿ ಪುತ್ರ ಕರಾನ್ ಅದಾನಿ, ಅದಾನಿ ಗ್ರೂಪ್‍ನ ಅಧಿಕಾರಿಗಳು, ಯುಪಿಸಿಎಲ್ ಅಧಿಕಾರಿ ಕಿಶೋರ್ ಅಳ್ವ ಮೊದಲಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here