ಉಡುಪಿ: ಉನ್ನತ ಶಿಕ್ಷಣ ಪಡೆದು ಕೃಷಿಯತ್ತ ಮುಖ ಮಾಡಿ ಕೃಷಿಗೆ ಭವಿಷ್ಯವಿದೆ ತೋರಹೊರಟಿರುವ  ಹೆಣ್ಣುಮಕ್ಕಳು

Spread the love

ಉಡುಪಿ : ಮುಖ್ಯವಾಗಿ ಇಂದಿನ ವಿದ್ಯಾವಂತ ಯುವಜನತೆ ಹಳ್ಳಿ ಮತ್ತು ಕೃಷಿಯ ಬಗ್ಗೆ ತೀವ್ರ ತಾತ್ಸಾರವನ್ನು  ಬೆಳೆಸಿಕೊಳ್ಳುತ್ತಿರುವಾಗ, ಇದಕ್ಕೆ ಅಪವಾದವೆಂಬಂತೆ ಉಡುಪಿ ಜಿಲ್ಲೆಯ ಕಟಪಾಡಿ ಗ್ರಾಮದ ಈ 4 ಮಂದಿ ಹೆಣ್ಣಮಕ್ಕಳು ಮತ್ತು ಒಬ್ಬ ಯುವಕ, ನಮ್ಮ ದೇಶದಲ್ಲಿ ಇನ್ನೂ ಕೃಷಿಗೂ ಭವಿಷ್ಯ ಇದೆ ಎಂಬ ಭರವಸೆ ಹುಟ್ಟಿಸುತ್ತಿದ್ದಾರೆ.

agricultrehighereducation 18-07-2014 11-00-37 agricultrehighereducation 18-07-2014 11-00-50 agricultrehighereducation 18-07-2014 11-01-36 agricultrehighereducation 18-07-2014 11-02-32 agricultrehighereducation 18-07-2014 11-06-24 agricultrehighereducation 18-07-2014 11-07-35 agricultrehighereducation 18-07-2014 11-07-57 agricultrehighereducation 18-07-2014 11-11-15 agricultrehighereducation 18-07-2014 11-11-25 agricultrehighereducation 18-07-2014 11-11-40

ಉಡುಪಿ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯವಾದಿ, ಕಟಪಾಡಿ ನಿವಾಸಿ ಹಿಗ್ಗಿನ್ಸ್ ರಾಡ್ರಿಗಸ್ ಅವರ ಮನೆಯ ಮಕ್ಕಳಾದ ಇವರು ಅನಕ್ಷರಸ್ಥರೇನಲ್ಲ ಅಥವಾ ಪಟ್ಟಣದಲ್ಲಿ ಕೈತುಂಬಾ ಸಂಬಳದ ಒಳ್ಳೆಯ ಉದ್ಯೋಗ ಸಿಗದಷ್ಟು ಕಡಿಮೆ ವಿದ್ಯಾವಂತರೂ ಅಲ್ಲ, ಇವರು ಚಾರ್ಟೆರ್ಡ್ ಅಂಕೌಂಟೆಂಟ್, ಇಂಜಿನಿಯರಿಂಗ್, ಎಲ್.ಎಲ್.ಬಿ., ಎಂ.ಕಾಂ., ಬಿ.ಕಾಂ. ಮಾಡಿದ್ದಾರೆ. ಇವರಿಗೆ ಹಳ್ಳಿ ಎಂದರೆ ಪ್ರೀತಿ, ಕೖಷಿ ಎಂದರೆ ಪಂಚಪ್ರಾಣ.

 ಅವರಲ್ಲಿ ಇಬ್ಬರು ಹಿಗ್ಗಿನ್ಸ್ ರಾಡ್ರಿಗಸ್ – ರೋಸ್ ಮರಿಯಾ ದಂಪತಿಯ ಮಕ್ಕಳಾದರೆ, ಒಬ್ಬಾಕೆ ಸಂಬಂಧಿಕರ ಮಗಳು, ಇನ್ನಿಬ್ಬರು ಅವರ ಸಾಕು ಮಕ್ಕಳು. ಆದರೆ ಇವರಲ್ಲಿ ಒಡಹುಟ್ಟಿದವರು ಯಾರು, ಯಾರು ಅಲ್ಲ ಎನ್ನುವುದು ಅವರು ಹೇಳದೆ ಗೊತ್ತಾಗುವುದಿಲ್ಲ, ಒಂದೇ ಮನೆಯಲ್ಲಿ ಒಡಹುಟ್ಟಿದವರಿಗಿಂತಲೂ ಹೆಚ್ಚು ಪ್ರೀತಿಯಿಂದಿದ್ದಾರೆ.

ಹಿರಿಯಾಕೆ ಸ್ಮಿತಾ ಡಿಕುನ್ನ, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಮದುವೆಯಾಗಿ ಪತಿಯೊಂದಿಗೆ ನಾಸಿಕ್ ನಲ್ಲಿ ನೆಲೆಸಿದ್ದರೂ, ಪ್ರತಿ ವರ್ಷ ಭತ್ತದ ಕೃಷಿಯ ಸಂದರ್ಭದಲ್ಲಿ ರಜೆ ಹಾಕಿ ಊರಿಗೆ ಬಂದು ಗದ್ದೆಗಿಳಿಯುತ್ತಾರೆ. ಪ್ರಿಯಾಂಕ ರಾಡ್ರಿಗಸ್ ಎಲ್.ಎಲ್.ಬಿ. ಮುಗಿಸಿದ್ದು ಇತ್ತೀಚೆಗಷ್ಟೇ ತಂದೆಯೊಂದಿಗೆ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ದೀಪಾ ರಾಡ್ರಿಗಸ್ ಎಂ.ಕಾಂ. ಪದವಿಧರೆ ಉಡುಪಿಯ  ತೆಂಕನಿಡಿಯೂರು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ನಿಕೋಲ್ ಪಿಂಟೊ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಕಿರಿಯವ ವಿನೋದ್ ರಾಡ್ರಿಗಸ್ ತೆಂಕನಿಡಿಯೂರು ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.

ಇವರಿಗೆ ಯಾರಿಗೂ ಕೃಷಿಯ ಬಗ್ಗೆ ಕೀಳರಿಮೆ ಇಲ್ಲ, ಬೆಳಿಗ್ಗೆ ಎದ್ದು ಕೖಷಿಗೆ ಸಂಬಂಧಿಸಿದ ಏನಾದರೂ ಕೆಲಸ ಮಾಡುತ್ತಾರೆ, ನಂತರ ಕಚೇರಿಗೊ, ಕಾಲೇಜಿಗೊ ಹೋಗುತ್ತಾರೆ, ಸಂಜೆ ಬಂದು ಮತ್ತೇ ಕೃಷಿ, ಗದ್ದೆ, ತೋಟ… ರಜೆ ಇದ್ದ ದಿನವಂತೂ ಫುಲ್ ಟೈಮ್ ಕೃಷಿ ಮಾಡುತ್ತಾರೆ, ಕೈತುಂಬಾ ಲಾಭವನ್ನೂ ಗಳಿಸುತ್ತಿದ್ದಾರೆ.

ಈ ಹೆಣ್ಣಮಕ್ಕಳು ಗಂಡಸರಿಗೂ ಕಡಿಮೆ ಇಲ್ಲದಂತೆ ದುಡಿಯುತ್ತಾರೆ, ಟಿಲ್ಲರ್ – ಟ್ರಾಕ್ಟರ್ ಓಡಿಸುತ್ತಾರೆ, ಗದ್ದೆ ಹದ ಮಾಡುತ್ತಾರೆ, ಬಿತ್ತುತ್ತಾರೆ, ನಾಟಿ ಮಾಡುತ್ತಾರೆ, ಗೊಬ್ಬರ ಹಾಕುತ್ತಾರೆ, ಬೆಳೆದ ಭತ್ತವನ್ನು ಕಟಾವು ಮಾಡಿ, ಚೀಲದಲ್ಲಿ ತುಂಬಿಸಿ, ಮಿಲ್ಲಿಗೆ ಸಾಗಿಸುವರೆಗೂ ಎಲ್ಲಾ ಕೆಲಸವನ್ನು ತಾವೇ ಮಾಡುತ್ತಾರೆ. ಕೈ ಕೆಸರಾದರೆ ಬಾಯಿ ಮೊಸರಾಗುತ್ತದೆ ಎನ್ನುವುದು ಇವರೊಂದಿಗೆ ಅಕ್ಷರಶಃ ಸತ್ಯವಾಗಿದೆ.

ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ವಕೀಲ ಹಿಗ್ಗಿನ್ಸ್ ರೊಡ್ರಿಗಸ್   ಯುವಜನತೆಗೆ ಕೖಷಿಯಲ್ಲಿ ಆಸಕ್ತಿ ಇಲ್ಲ ಎನ್ನುವುದು ಸುಳ್ಳು, ಆದರೇ ಕೖಷಿಯ ಬಗ್ಗೆ ಅವರ ವಿಚಾರಗಳು ಬೇರೆ ಇವೆ, ಆಧುನಿಕ ಯಂತ್ರಗಳನ್ನು ಬಳಸಿಕೊಂಡು ಕೖಷಿಯನ್ನೊಂದು ಉದ್ಯಮವನ್ನಾಗಿ ಮಾಡುವುದಕ್ಕೆ ಅವರು ಬಯಸುತ್ತಾರೆ, ಅದಕ್ಕೆ ಪ್ರೋತ್ಸಾಹ ನೀಡಬೇಕು, ಆಗ ಖಂಡಿತಾ ಕೖಷಿ ಉಳಿಯುತ್ತದೆ. ನನ್ನ ಹೆಣ್ಣುಮಕ್ಕಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎನ್ನುತ್ತಾರೆ.
ಕಾಲೇಜು ಉಪನ್ಯಾಸಕಿ ದೀಪಾ ರೊಡ್ರಿಗಸ್ ಮಾತನಾಡಿ  ನಮಗೆ ಇದರಲ್ಲೇನೂ ಕೀಳರಿಮೆ ಇಲ್ಲ, ಚಿಕ್ಕಂದಿನಿಂದ ತಂದೆ ತಾಯಿ ಕೃಷಿ ಮಾಡುವಾಗ ನಾವೂ ಅವರ ಜೊತೆಗೆ ಗದ್ದೆಗೆ ಹೋಗುತ್ತಿದ್ದೆವು. ಅವರ ಹಾಗೇ ಎಲ್ಲಾ ಹೆತ್ತವರು ಮಕ್ಕಳಿಗೆ ಕೖಷಿಯ ಬಗ್ಗೆ ಆಸಕ್ತಿ ಮೂಡಿಸಬೇಕು. ಆಗ ಮಾತ್ರ ಕೃಷಿ ಉಳಿತದೆ. ಕೃಷಿ ಮತ್ತು ಬೇರೆ ಉದ್ಯೋಗವನ್ನು ಜೊತೆಯಾಗಿ ಯಶಸ್ವಿಯಾಗಿ ಮಾಡುವುದಕ್ಕೂ ಸಾಧ್ಯವಿದೆ.

ಹಳ್ಳಿಗಳಲ್ಲಿ ಕೃಷಿಯನ್ನು ಕೈಬಿಡುವುದಕ್ಕೆ ಮುಖ್ಯ ಕಾರಣ ಅದರಲ್ಲಿ ಲಾಭ ಇಲ್ಲ ಎನ್ನುವುದು. ಆದರೆ ಈ ಹೆಣ್ಣು ಮಕ್ಕಳು ಕೃಷಿಯಲ್ಲಿ ಲಾಭ ಇದೆ ಎಂದು ಸಾಧಿಸಿ ತೋರಿಸಿದ್ದಾರೆ. ಹೆಣ್ಣುಮಕ್ಕಳು ಎಂದರೇ ಬಹಳ ನಾಜೂಕು, ಕೆಸರಿನಲ್ಲಿ ಕೆಲಸ ಮಾಡಿದರೇ ಸೌಂದರ್ಯ ಹಾಳಾಗುತ್ತದೆ ಎಂಬ ಭ್ರಮೆಗಳನ್ನು ಕಳಚಿಟ್ಟಿದ್ದಾರೆ.

ಅಷ್ಟೇ ಅಲ್ಲ, ಈ ಗ್ರಾಮದಲ್ಲಿ, ಕೃಷಿಯಲ್ಲಿ ಲಾಭ ಇಲ್ಲ ಎಂದು ಪಾಳು ಬಿಟ್ಟಿದ್ದ ಅನೇಕ ಮಂದಿ, ಈ ಹೆಣ್ಣು ಮಕ್ಕಳು ಕೃಷಿಯಲ್ಲಿ ಲಾಭ ಗಳಿಸುವುದನ್ನು ನೋಡಿ, ಆಸೆಯಿಂದಲೋ, ನಾಚಿಕೆಯಿಂದಲೊ, ಪ್ರತಿಷ್ಟೆಗಾಗಿಯಾದರೂ ಮತ್ತೆ ಕೃಷಿ ಆರಂಭಿಸಿದ್ದಾರೆ. ಇದು ಈ ಹಣ್ಣುಮಕ್ಕಳ ನಿಜವಾದ ಯಶಸ್ಸಾಗಿದೆ. ಅವರ ಈ ಯಶೋಗಾತೆ ನಮ್ಮ ಹಳ್ಳಿಗಳಲ್ಲಿ ಕೃಷಿ ಉಳಿಯುತ್ತದೆ ಎನ್ನುವ ಇನ್ನಷ್ಟು ಭರವಸೆ ಮೂಡಿಸುತ್ತಿದೆ.


Spread the love