ಉಡುಪಿ: ಕೃಷಿ ಅಭಿಯಾನ: ಇಲಾಖೆ ನಡಿಗೆ ರೈತರ ಬಾಗಿಲಿಗೆ

ಉಡುಪಿ: ಕೃಷಿಯನ್ನು ಲಾಭದಾಯಕದ ಜೊತೆಗೆ ಸಮಗ್ರ ಹಾಗೂ ತಾಂತ್ರಿಕ ಸ್ನೇಹಿಯನ್ನಾಗಿಸಲು ಕೃಷಿ ಇಲಾಖೆ ಇತರೆ ಇಲಾಖೆಗಳ ಸಹಕಾರದೊಂದಿಗೆ ರೈತರ ಮನೆಗೆ ಮಾಹಿತಿ ಹಾಗೂ ಸೌಲಭ್ಯ ನೀಡಲು ‘ಕೃಷಿ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕಾರ್ಯಕ್ರಮದ ವಿವರವನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಅಂತೋನಿ ಮರಿಯ ಇಮ್ಯಾನುವಲ್ ನೀಡಿದರು.

1 2

   ಜನಸಂಖ್ಯೆಗೆ ಆಹಾರಭದ್ರತೆ ಮತ್ತು ಲಭ್ಯ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ, ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚ ಕಡಿತ, ಕೃಷಿಯೊಂದಿಗೆ ಪೂರಕ ಉಪಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಮಾಹಿತಿ ಹಾಗೂ ಪ್ರೋತ್ಸಾಹ ನೀಡುವುದು ಕೃಷಿ ಅಭಿಯಾನದ ಉದ್ದೇಶ ಎಂದು ಅವರು ಸಭೆಗೆ ವಿವರಿಸಿದರು.

ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರೈತರಲ್ಲಿ ಜಾಗೃತಿ ಮೂಡಿಸಲು ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ವಿಜ್ಞಾನಿಗಳೊಂದಿಗೆ ರೈತರ ಸಂವಾದ, ಸಮಗ್ರ ಕೃಷಿ ಮಾಹಿತಿ ಕಘಟಕ, ಕೃಷಿ ವಸ್ತು ಪ್ರದರ್ಶನ ನಡೆಯಲಿದೆ.

ಮೂರು ಹಂತದಲ್ಲಿ ಜಿಲ್ಲಾ ಮಟ್ಟ, ತಾಲೂಕು ಮಟ್ಟ ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನ ಸಮಿತಿಗಳನ್ನು ರಚಿಸಿ ಹೊಣೆ ನಿಗದಿ ಮಾಡಲು ಜಿಲ್ಲಾ ಪಂಚಾಯತ್ ಸಿಇಒ ಕನಗವಲ್ಲಿ ಅವರು ನಿರ್ದೇಶನ ನೀಡಿದರು.

ಹೋಬಳಿ ಮಟ್ಟದ ಕಾರ್ಯಕ್ರಮಗಳನ್ನು ಪಂಚಾಯಿತಿ ಮಟ್ಟದಲ್ಲಿ ಮಾಡಿ; ನಿಜವಾದ ಫಲಾನುಭವಿಗಳಿಗೆ ಕಾರ್ಯಕ್ರಮದ ಉಪಯೋಗ ಸಿಗುವಂತಾಗಲಿ ಎಂದರು.

ಕೃಷಿ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಯೋಜನೆಗಳು ರೈತರ ಮನೆಗೆ ನೇರವಾಗಿ ತಲುಪಿಸುವುದು, ರೈತರಿಗೆ ಸಕಾಲದಲ್ಲಿ ಕೃಷಿ ಪರಿಕರ, ಸಾಮಗ್ರಿ, ಸಾಲ ಸೌಲಭ್ಯ ಒದಗಿಸುವುದು, ಜ್ಞಾನ ಹಂಚಿಕೆ, ತಾಂತ್ರಿಕತೆಗಳ ಅಳವಡಿಕೆ, ಸಾಮಾನ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲ ಕ್ರಮಗಳ ನಿರ್ವಹಣೆಗೆ ನಿರಂತರ ಸಿದ್ಧತೆ ಮಾಡುವುದು ಕೃಷಿ ಇಲಾಖೆಯ ಉದ್ದೇಶವಾಗಿದ್ದು, ಇದರ ಅನುಷ್ಠಾನಕ್ಕೆ ಪೂರಕವಾಗಿ ಕಾರ್ಯಕ್ರಮ ನಿರ್ವಹಿಸಿ ಎಂದರು.

ಪ್ರತೀ ಹೋಬಳಿ ಮಟ್ಟದ ಕಾರ್ಯಕ್ರಮಕ್ಕೆ ರೂ. 0.75 ಲಕ್ಷ ಅನುದಾನ ನಿಗದಿಯಾಗಿದ್ದು, ಯಶಸ್ವಿ ಅನುಷ್ಠಾನಕ್ಕೆ ಇತರ ಇಲಾಖೆಗಳ  ಸಹಕಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಪ್ರತೀ ಹೋಬಳಿಯಲ್ಲಿ ಗ್ರಾಮ ಪಂಚಾಯಿತಿವಾರು ಕಾರ್ಯತಂಡ ರಚಿಸಿದ್ದು, ಆಯಾ ಪಂಚಾಯಿತಿಗೆ ಸಿದ್ಧಪಡಿಸಿದ ವೇಳಾ ಪಟ್ಟಿಯಂತೆ ಎಲ್ಲ ಗ್ರಾಮಪಂಚಾಯಿತಿಗಳು ಒಳಗೊಂಡಂತೆ ಎರಡು ದಿನಗಳ ಕಾಲ ತೀವ್ರ ಪ್ರಚಾರ ಕಾರ್ಯದ ಜೊತೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡಗಳು ರೈತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು. ಬೀಜೋಪಚಾರ ಆಂದೋಲನವನ್ನೂ ಇದರ ಜೊತೆಗೆ ನಡೆಸಲಾಗುವುದು ಎಂದು ಜಂಟಿ  ನಿರ್ದೇಶಕರು ಮಾಹಿತಿ ನೀಡಿದರು.

ಹೊಸ ತಂತ್ರಜ್ಞಾನ ಪರಿಚಯ ಮತ್ತು ಕೌಶಲ್ಯ ಪ್ರಾತ್ಯಕ್ಷಿಕೆ, ಬೀಜೋಪಚಾರ, ಸಸ್ಯ ಸಂರಕ್ಷಣಾ ಆಂದೋಲನ ಮಾಹಿತಿ. ಕೃಷಿ ಭಾಗ್ಯ ಯೋಜನೆಯಡಿ ಬೆಳೆಗಳಿಗೆ ಸಂದಿಗ್ದ ಪರಿಸ್ಥಿತಿಯಲ್ಲಿ ನೀರನ್ನು ಒದಗಿಸುವ ಬಗ್ಗೆ, ಭೂಚೇತನ, ಆತ್ಮ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ ಮಿಷನ್, ಸಾವಯವ ಭಾಗ್ಯ, ಸಾವಯವ ಗ್ರಾಮ ಕಾರ್ಯಕ್ರಮದ ಬಗ್ಗೆ ಮಾಹಿತಿ   ನೀಡಲಾಗುವುದು.

ಬೆಳೆ ವಿಮೆ ಮತ್ತು ಕೃಷಿ ಸಾಲ ಸೌಲಭ್ಯ, ಸಂಚಾರಿ ಮಣ್ಣು ಪರೀಕ್ಷಾ ಘಟಕ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ರೈತರ ಕ್ಷೇತ್ರ ಪಾಠಶಾಲೆ, ಕೃಷಿ ಆಧಾರಿತ ಉಪ ಕಸುಬುಗಳ ಬಗ್ಗೆ ಮಾಹಿತಿ ನೀಡಲಾಗುವುದು.

ರೈತ ಸಂವಾದದಲ್ಲಿ ತಾಂತ್ರಿಕತೆ ಅಳವಡಿಸುವ ವೇಳೆ ಎದುರಿಸುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ, ಪರಿಹಾರೋಪಾಯ, ಪ್ರಗತಿಪರ ರೈತರ ಅನುಭವನ ಹಂಚಿಕೆ ಕಾರ್ಯಕ್ರಮವಿರುವುದು.

ಸ್ತ್ರೀ ಶಕ್ತಿ ಮತ್ತು ವಿದ್ಯಾರ್ಥಿಶಕ್ತಿಯನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.

ಸಭೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಪಕಾರ್ಯದರ್ಶಿ(ಪ್ರಭಾರ) ಶ್ರೀನಿವಾಸ ರಾವ್, ಎಲ್ಲಾ ಸಂಬಂಧಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು. ಯುವಜನ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆಗಳನ್ನೂ ಕಾರ್ಯಕ್ರಮದೊಳಗೆ ಸೇರಿಸಿಕೊಂಡು ಅವರಿಗೆ ಮಾಹಿತಿ ಕಾರ್ಯಕ್ರಮ ನಿರ್ವಹಣೆಯ ಹೊಣೆ ನೀಡಿ ಎಂದು ಸಿಇಒ ಅವರು ಹೇಳಿದರು.

Leave a Reply

Please enter your comment!
Please enter your name here