ಉಡುಪಿ:  ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಆರೋಪಿಗಳಿಗೆ ಶಿಕ್ಷೆ

ಉಡುಪಿ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಿನ್ನಿಮುಲ್ಕಿ ಮಂಜುನಾಥ ಪೆಟ್ರೋಲ್ ಬಂಕ್ ಬಳಿ 2012 ರ ಮೇ 20 ರಂದು ರಾತ್ರಿ 9-15 ಗಂಟೆಗೆ ರೂಟ್ ನಂ. 19-20 ರಲ್ಲಿ ಮಂಗಳೂರಿನಿಂದ ಬಾಗಲಕೋಟೆಗೆ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಚಾಲಕನಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ತಾಫ್ ಇವರಿಗೆ ಆರೋಪಿಗಳಾದ ದಯಾನಂದ, ಪ್ರೇಮಚಂದ್ರ, ಕಾರ್ತಿಕ್ ಕೆ. ಎಸ್. ಮತ್ತು ಶರೀನ್ ಕುಮಾರ್ ಇವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಮತ್ತು ಪ್ರಯಾಣಿಕನಾಗಿ ಬಂದಿದ್ದ ಕೆಎಸ್‍ಆರ್‍ಟಿಸಿ ಡಿಪೋದ ಬಸ್ಸಿನ ನಿರ್ವಾಹಕ ಶ್ರೀಧರ ಪೂಜಾರಿ ಇವರಿಗೆ  ಕೈಯಿಂದ ಹೊಡೆದು ಸಾಮಾನ್ಯ ಸ್ವರೂಪದ ಗಾಯವನ್ನುಂಟು ಮಾಡಿದ್ದಾರೆಂದು ಆಪಾದಿಸಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

     ಈ ಪ್ರಕರಣವು ಮಾನ್ಯ ಉಡುಪಿ  ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶೆ ಶ್ರೀಮತಿ ವಿ.ಎನ್. ಮಿಲನ ರವರು ಆರೋಪಿಗೆ 3 ತಿಂಗಳ ಸಾದಾ ಸಜೆ ಮತ್ತು ರೂ.4,000/- ದಂಡ ವಿಧಿಸಿ, ದಂಡದ ಮೊತ್ತದಲ್ಲಿ ತಲಾ ರೂ.1,500/-ನ್ನು ಅಲ್ತಾಫ್ ಮತ್ತು ಗಾಯಾಳು ಶ್ರೀಧರ ಪೂಜಾರಿ  ರವರಿಗೆ ನೀಡುವಂತೆ  2015 ರ ಜುಲೈ 2 ರಂದು ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಶಾಂತಿ ಬಾಯಿ ಇವರು ಭಾಗಶ: ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರು ಶ್ರೀಮತಿ ಮಮ್ತಾಜ್ ರವರು ಉಳಿದ ಸಾಕ್ಷಿದಾರರ ವಿಚಾರಣೆ ನಡೆಸಿ  ವಾದ ಮಂಡಿಸಿದ್ದರು.

Leave a Reply

Please enter your comment!
Please enter your name here