ಉಡುಪಿ: `ಜನಾನುರಾಗಿ ರಾಷ್ಟಾಧ್ಯಕ್ಷ ಅಬ್ದುಲ್ ಕಲಾಂ’ ಚಿರಾಯುವಾಗಲಿ ; ಶೋಕ ಸಂದೇಶದಲ್ಲಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಬಡ ಕುಟುಂಬದಲ್ಲಿ ಹುಟ್ಟಿ ಸ್ವ-ಪ್ರಯತ್ನ ಹಾಗೂ ಆತ್ಮ-ವಿಶ್ವಾಸದಿಂದ ಮೇಲೆದ್ದು ಬಂದು, ವಿಜ್ಞಾನಿಯಾಗಿ ಪರಮಾಣು ತಂತ್ರಜ್ಞಾನದಿಂದ ಭಾರತ ದೇಶದ ಚರಿತ್ರೆಯ ದಿಕ್ಕನ್ನೇ ಬದಲಿಸಿ, ಜನಾನುರಾಗಿ ರಾಷ್ಟ್ರಾಧ್ಯಕ್ಷರಾಗಿ ಇಡೀ ದೇಶದ ಮನಗಳನ್ನು ಗೆದ್ದ ಡಾ| ಎಪಿಜೆ ಅಬ್ದುಲ್ ಕಲಾಂರವರ ಹಠಾತ್ ನಿರ್ಗಮನ ಇಡೀ ದೇಶದ ಹೃದಯವಂತ ನಾಗರಿಕ ಮನ ಕಲಕಿದೆ. ನಮ್ಮದೇ ಕುಟುಂಬದ ಸದಸ್ಯರೊಬ್ಬರು ನಿರ್ಗಮಿಸಿದಷ್ಟು ದುಃಖವಾಗಿದೆ ಎಂದು ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಶೋಕ ಸಂದೇಶದಲ್ಲಿ ತಿಳಿಸದ್ದಾರೆ.

Bishop Gerald Lobo_58398

ಇಪ್ಪತ್ತನೇ ಶತಮಾನದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ರಾಷ್ಟ್ರಕ್ಕೆ ನೂತನ ದಿಕ್ಕನ್ನು ತೋರಿಸಿ, ಈ ದೇಶದ ಭವಿಷ್ಯವು ಯುವಜನತೆಯ ಮೇಲೆ ಹೊಂದಿಕೊಂಡಿದೆ ಎಂಬುದನ್ನರಿತ ಡಾ| ಕಲಾಂರವರು ತಮ್ಮ ಜೀವಿತದ ಬಹುಪಾಲನ್ನು, ಅದರಲ್ಲೂ ರಾಷ್ಟ್ರಾಧ್ಯಕ್ಷ ಪದದಿಂದ ನಿವೃತ್ತರಾದ ನಂತರ ತಮ್ಮೆಲಾ ಶಕ್ತಿ ಹಾಗೂ ಸಮಯವನ್ನು ಯುವಜನತೆಗಾಗಿ ಮುಡಿಪಾಗಿಟ್ಟರು.

ರಾಷ್ಟ್ರಾಧ್ಯಕ್ಷರಾಗಿದ್ದರೂ, ಯಾವುದೇ ರಾಜಕೀಯ ಸೋಂಕು ಅವರನ್ನು ತಟ್ಟದಷ್ಟು ಪಾರದರ್ಶಕ ಹಾಗೂ ನಿಷ್ಕಪಟವಾಗಿತ್ತು ಅವರ ಜೀವನ. ಕೊನೆಗಳಿಗೆಯವರೆಗೂ ಪಾದರಸದಂತೆ ಚುರುಕಾಗಿದ್ದು ವಿದ್ಯಾರ್ಥಿಗಳಿಗೆ ಬೋಧನೆ ನೀಡುತ್ತಲೇ ಅವರು ತಮ್ಮ ಕೊನೆಯುಸಿರೆಳೆದರು.

ಆಚರಣೆಯಲ್ಲಿ ಮುಸ್ಲಿಮ್ ಧರ್ಮಕ್ಕೆ ಸೇರಿದವರಾಗಿದ್ದರು, ಬಹುಧರ್ಮ ಹಾಗೂ ಸಂಸ್ಕೃತಿಗಳ ಮಹಾನ್ ಭಾರತ ದೇಶದಲ್ಲಿ ಎಲ್ಲಾ ಧರ್ಮಗಳು ಹಾಗೂ ಸಂಸ್ಕೃತಿಗಳೊಡನೆ ಮಿಳಿತು ಜೀವನ ನಡೆಸುವ ಪರಿಯ ಮಾದರಿಯನ್ನು ನಮಗೆ ತೋರಿಸಿಕೊಟ್ಟಿದ್ದಾರೆ.

ಡಾ| ಅಬ್ದುಲ್ ಕಲಾಂರವರ ನಿಸ್ವಾರ್ಥ, ಸೇವಾಜೀವನ ನಮ್ಮೆಲ್ಲರಿಗೂ ದಾರಿದೀಪವಾಗಲಿ. ಅಗಲಿದ ಮಹಾಚೇತನ ಸದಾ ನಮ್ಮೊಡನಿದ್ದು ನಮ್ಮನ್ನು ಮುನ್ನಡೆಸಲಿ. ಡಾ| ಎಪಿಜೆ ಕಲಾಂರವರು ಅಮರರಾಗಲಿ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply

Please enter your comment!
Please enter your name here