ಉಡುಪಿ ಜಿಲ್ಲೆಯಲ್ಲಿ ಮದುವೆ ಮನೆಗಳಂತೆ ಶೃಂಗಾರಗೊಂಡಿವೆ ಸಖಿ ಮತಗಟ್ಟೆಗಳು

Spread the love

ಉಡುಪಿ ಜಿಲ್ಲೆಯಲ್ಲಿ ಮದುವೆ ಮನೆಗಳಂತೆ ಶೃಂಗಾರಗೊಂಡಿವೆ ಸಖಿ ಮತಗಟ್ಟೆಗಳು

ಉಡುಪಿ: ಏಪ್ರಿಲ್ 18 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಪ್ರಯುಕ್ತ , ಮಹಿಳಾ ಮತದಾರರನ್ನು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸಿರುವ, ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ 25 ಸಖಿ ಮತಗಟ್ಟೆಗಳು ಮದುವೆ ಮನೆಗಳಂತೆ ಕಂಗೊಳಿಸುತ್ತಿವೆ.

ಮತಗಟ್ಟೆಗಳನ್ನು ಆಕರ್ಷಕ ಬಟ್ಟಯ ಬಣ್ಣಗಳಿಂದ ಶೃಂಗಾರಗೊಳಿಸಿದ್ದು, ಮತಗಟ್ಟೆಯಲ್ಲಿ ಮ್ಯಾಟ್ ಅಳವಡಿಕೆ ಜೊತೆಗೆ ಟೇಬಲ್ ಮತ್ತು ಕುರ್ಚಿಗಳನ್ನು ಸಹ ಅಲಂಕರಿಸಲಾಗಿದೆ. ಮತಗಟ್ಟೆಯ ಗೋಡೆಯ ಮೇಲೆ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಅಳವಡಿಸಲಾಗಿದೆ.

ಮತಗಟ್ಟೆಯ ಹೊರಗೆ ಶಾಮಿಯಾನ ಮೂಲಕ ನೆರಳಿನ ವ್ಯವಸ್ಥೆ ಮಾಡಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆರೋಗ್ಯ ಸಿಬ್ಬಂದಿಯನ್ನೂ ಸಹ ನೇಮಿಸಲಾಗಿದೆ.

ಮತದಾನ ಮಾಡುವ ಮಹಿಳೆಯರ ಜೊತೆಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ತೆರೆದಿದ್ದು, ಈ ಅಂಗಳದಲ್ಲಿ ಮಕ್ಕಳಿಗಾಗಿ ಆಟವಾಡಲು ವಿವಿಧ ಆಟಿಕೆಗಳನ್ನು ಇಡಲಾಗಿದೆ.

ಅಲ್ಲದೇ ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಸಖಿ ಸೆಲ್ಫಿ ಸೆಂಟರ್ ಇದ್ದು, ಇಲ್ಲಿರುವ ಕೊಡೆಯ ಜೊತೆ ಮಹಿಳಾ ಮತದಾರರು ಸೆಲ್ಫಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ.

ಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ನಿರ್ದೇಶನದಲ್ಲಿ , ಉಡುಪಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮತ್ತು ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕಿ ನಯನಾ ಅವರು ಈ ಸಖಿ ಮತಗಟ್ಟೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದಾರೆ.


Spread the love