ಉಡುಪಿ: ತಾಲೂಕು ಕೇಂದ್ರವಾಗಿ ಕಾಪು ಅಭಿವೃದ್ಧಿ- ವಿನಯ ಕುಮಾರ್ ಸೊರಕೆ

ಉಡುಪಿ: ಕಾಪು ಪುರಸಭೆಯನ್ನು ಮಾದರಿ ಪಟ್ಟಣ ಪಂಚಾಯತ್ ರೀತಿಯಲ್ಲಿ ಅಭಿವೃದ್ದಿಪಡಿಸಿ, ತಾಲೂಕು ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಶನಿವಾರ ಕಾಪು ಪುರಸಭಾ ವ್ಯಾಪ್ತಿಯಲ್ಲಿ 12.95 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೋದಲ ಹಂತದಲ್ಲಿ ಕಾಪು ಪುರಸಭೆಯಲ್ಲಿ 81 ಲಕ್ಷ ರೂ ವೆಚ್ಚದಲ್ಲಿ ಪ್ರತಿ ವಾರ್ಡ್ ನಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು, 25 ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರು ವ್ಯವಸ್ಥೆ ಸರಿಪಡಿಸಲಾಗುವುದು, ಬೀದಿದೀಪ ವ್ಯವಸ್ಥೆ ಸರಿಪಡಿಸಲು ಸಹ ಕ್ರಮ ಕೈಗೊಳ್ಳಲಾಗುವುದು, ಕೊಳಚೆ ನೀರು ನಿರ್ವಹಣೆ ಕುರಿತಂತೆ ಒಳಚರಂಡಿ ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, 24 ಗಂಟೆಗಳ ಶುದ್ಧ ಕುಡಿಯುವ ನೀರು ವ್ಯವಸ್ಥೆ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲು ಈಗಾಗಲೇ 10 ಎಕರೆ ಸ್ಥಳ ನಿಗದಿಪಡಿಸಿದ್ದು, ಎಲ್ಲಾ ರೀತಿಯಲ್ಲಿ ಕಾಪು ಪ್ರದೇಶವನ್ನು ಸರ್ವತೋಮುಖವಾಗಿ ಅಭಿವೃದ್ದಿಪಡಿಸಲಾಗುವುದು ಮತ್ತು ಎಸ್ ಎಫ್ ಸಿ ಯೋಜನೆಯ ಮೂಲಕ 2 ನೇ ಹಂತದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕಾಪು ವ್ಯಾಪ್ತಿಯಲ್ಲಿ ಈಗಾಗಲೇ 5 ಬಾರಿ ಪ್ರತಿ ಪಂಚಾಯತ್‍ಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ ಹಾಗೂ ಸಾರ್ವಜನಿಕರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗಿದೆ ಎಂದ ಸಚಿವರು ಪುರಸಭೆಯ ಅಭಿವೃದ್ಧಿಗೆ ಎಲ್ಲಾ ಜನತೆ ಪಕ್ಷಭೇದ ಮರೆತು ಸಹಕರಿಸುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ 1770 ಮಂದಿಗೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ಸಚಿವರು ವಿತರಿಸಿದರು.

ಕಾಪು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಐಡಾ ಗಿಬ್ಬಾ ಡಿಸೋಜಾ, ಜಿ.ಪಂ ಮಾಜಿ ಅಧ್ಯಕ್ಷೆ ಸರಸು ಬಂಗೇರಾ, ಕಾಪು ಸಹಕಾರ ಬ್ಯಾಂಕ್‍ನ ಅಧ್ಯಕ್ಷ ದಿವಾಕರ ಶೆಟ್ಟಿ, ಉಡುಪಿ ಜಿಲ್ಲಾ ಗ್ರಾಮ ಪಂಚಾಯತ್ ಒಕ್ಕೂಟಗಳ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಉದ್ಯಮಿ ಮನೋಹರ ಪ್ರಸಾದ್, ಕಾಪು ಪುರಸಭೆಯ ಆಡಳಿತಾಧಿಕಾರಿ ಚಾರುಲತಾ ಸೋಮಲ್, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಇಂಜಿನಿಯರ್ ರಂಗಧಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ಸ್ವಾಗತಿಸಿದರು. ಕುದಿ ವಸಂತ ಶೆಟ್ಟಿ ನಿರೂಪಿಸಿದರು.

Leave a Reply