ಉಡುಪಿ: ಧಾರ್ಮಿಕ ಸಾಮಾಜಿಕ ಯೋಜನೆಗಳ ಅನುಷ್ಠಾನದೊಂದಿಗೆ; ಧರ್ಮ ಸಾಮರಸ್ಯಕ್ಕೆ ಒತ್ತು ; ಪೇಜಾವರ ಸ್ವಾಮೀಜಿ

ಉಡುಪಿ: ಧಾರ್ಮಿಕ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ದೇಶದಾದ್ಯಂತ ಪರಸ್ಪರ ವಿವಿಧ ಧರ್ಮಗಳ ಅನುಯಾಯಿಗಳೊಂದಿಗೆ ಸಾಮರಸ್ಯವನ್ನು ಬೆಸೆಯುವ ಸಲುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮಟ್ಟದ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಿ ಹೊಸ ಪರಂಪರೆಗೆ ನಾಂದಿ ಹಾಡಲು ಚಿಂತಿಸಲಾಗಿದೆ ಎಂದು ದಾಖಲೆಯ ಐದನೇ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪೇಜಾವರ ಮಟದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅವರು ತಮ್ಮ ಪರ್ಯಾಯಕ್ಕೆ ಪೂರ್ವಭಾವಿಯಾಗಿ ತಮ್ಮ ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಹಾಕಿಕೊಂಡ ಯೋಜನೆಗಳು ಹಾಗೂ ಪರ್ಯಾಯದ ವ್ಯವಸ್ಥೆಯ ಕುರಿತಾಗಿ ಮ್ಯಾಂಗಲೋರಿಯನ್ ಡಾಟ್ ಕಾಮ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಎಲ್ಲಾ ರೀತಿಯ ಅಪೇಕ್ಷೆಗಳನ್ನು ಮತ್ತು ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಜನವರಿ 4 ರಂದು ಪುರಪ್ರವೇಶ ಮಾಡಿದ ಶ್ರೀಗಳು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಮನೆ ಮನೆಗೆ ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ತಮ್ಮ ವಾಹನದಲ್ಲಿ ಮ್ಯಾಂಗಲೋರಿಯನ್ ಪ್ರತಿನೀಧಿಗೆ ನೀಡಿದ ವಿಶೇಷ ಸಂದರ್ಶನದ ಪೂರ್ಣ ಪಾಠ ಇಂತಿದೆ.

paryaya_spciel_int 08-01-2016 13-39-56

05PR PEJ 1 pejawar_interview-udupi 08-01-2016 07-15-44 pejawar_interview-udupi 08-01-2016 16-57-07

ತಾವು 5 ನೇ ಬಾರಿ ಪರ್ಯಾಯ ಪೀಠವನ್ನು ಏರುತ್ತಿರುವುದು ದೇವರ ಇಚ್ಛೆ, ದೇವರ ಅನುಗ್ರಹದಿಂದ ಈ ವರೆಗೆ ತಾನು ಆರೋಗ್ಯದಿಂದ ಇದ್ದು ಎರಡು ವರ್ಷಗಳ ಅವಧಿಯಲ್ಲಿ ಕೃಷ್ಣ ಮಠದ ಸರ್ವತೋಮುಕ ಅಭಿವೃದ್ದಿಯನ್ನು ಮಾಡುವುದರೊಂದಿಗೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ದಿಯತ್ತ ಕೂಡ ಗಮನ ಹರಿಸಲಾಗುವುದು. ತಮ್ಮ ಪರ್ಯಾಯದಲ್ಲಿ ಮೊದಲನೆಯದಾಗಿ ಶೈಕ್ಷಣಿಕ ಕ್ರಾಂತಿಯನ್ನು ನಡೆಸುವ ಸಲುವಾಗಿ ಪಾಜಕದಲ್ಲಿ ಆನಂದತೀರ್ಥರ 40 ಎಕರೆ ವಿಶಾಲ ಪ್ರದೇಶದಲ್ಲಿ ಎಲ್ಲಾ ಜಾತಿಯ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ವಸತಿ ವಿದ್ಯಾಲಯವನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಶ್ರೀಕೃಷ್ಣ ಮಠಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಯಾತ್ರಿಕರು ದೇಶವಿದೇಶಗಳಿಂದ ಆಗಮಿಸುತ್ತಿದ್ದು, ಅವರಿಗೆ ವ್ಯವಸ್ಥಿವಾದ ಸೌಕರ್ಯ ಮಾಡಿಕೊಡುವುದು ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ, ಹೆಚ್ಚಿನ ವಸತಿ ನಿಲಯಗಳ ಸ್ಥಾಪನೆ, ಕೃಷ್ಣ ಮಠದ ಸುತ್ತಮುತ್ತಲಿನಲ್ಲಿ ಶೌಚಾಲಯಗಳ ನಿರ್ಮಾಣದೊಂದಿಗೆ ಶುಚಿತ್ವಕ್ಕೆ ಗಮನ ನೀಡಲಾಗುತ್ತದೆ ಎಂದರು.

ರಾಷ್ಟ್ರೀಯ ವಿಚಾರಗಳು, ಪ್ರಚಲಿತ ವಿದ್ಯಮಾನಗಳು ಹಾಗೂ ಇತರ ಸಮಸ್ಯೆಗಳು ದೇಶವನ್ನು ಅಥವಾ ಸಮಾಜವನ್ನು ಕಾಡುತ್ತಾ ಇರುತ್ತವೆ ಈ ವೇಳೆ ತಾನು ಮೊದಲಿನಿಂದಲೂ ಯಾವುದೇ ರೀತಿಯ ಅಳುಕು ಅಂಜಿಕೆಗಳಿಗೆ ಬೆದರದೆ ನೇರವಾಗಿ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದೇನೆ. ತಪ್ಪನ್ನು ತಪ್ಪು ಎಂದು ನೇರವಾಗಿ ಹೇಳುವ ಜಾಯಮಾನ ನನ್ನದು ಅಲ್ಲದೆ ನನ್ನ ಅಗತ್ಯ ಬಿದ್ದಲ್ಲಿ ಅಂತಹ ಸ್ಥಳಕ್ಕೆ ಸ್ವತಃ ಹೋಗಿ ನನ್ನ ವಿಚಾರವನ್ನು ಸಂಬಧಪಟ್ಟವರ ಬಳಿ ಚರ್ಚಿಸುತ್ತಿದ್ದೆ. ಪರ್ಯಾಯದ ಎರಡು ವರ್ಷಗಳ ಅವಧಿ ಉಡುಪಿಯಲ್ಲಿ ಇರಬೇಕಾದ ಪರಿಸ್ಥಿತಿ ಇದ್ದರೂ ಕೂಡ ಮಾಧ್ಯಮಗಳನ್ನು ಬಳಿಸಿಕೊಂಡು ನನ್ನ ಪ್ರತಿಕ್ರಿಯೆಯನ್ನು ನೀಡಲು ನಾನು ವ್ಯವಸ್ಥೆಯನ್ನು ಮಾಡಿಕೊಂಡಿರುತ್ತೇನೆ.

ಸಹಪಂಕ್ತಿ ಬೋಜನದ ವಿಚಾರವಾಗಿ ಸದಾ ಚರ್ಚೆಗಳು ನಡೆಯುತ್ತಾ ಇರುತ್ತವೆ ಅಂತಹ ಚರ್ಚೆಗಳು ನಡೆದಾಗ ಸಾಮಾನ್ಯವಾಗಿ ತಮ್ಮ ಹೆಸರು ಅದಕ್ಕೆ ತಳುಕು ಹಾಕುವುದು ಸರ್ವೆಸಾಮಾನ್ಯವಾಗಿದೆ. ಸಹಪಂಕ್ತಿಭೋಜನದ ವಿಚಾರವಾಗಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೃಷ್ಣ ಮಠದಲ್ಲಿ ಎಲ್ಲರಿಗೂ ಒಂದೇ ರೀತಿಯ ಭೋಜನಕ್ಕೆ ಅವಕಾಶ ಈಗಾಗಲೇ ಇದೆ ಅದರಲ್ಲಿ ದಲಿತರು ಮೇಲ್ವರ್ಗ ಕೆಳವರ್ಗ ಎಂಬ ಭೇಧವನ್ನು ನಾವು ಮಾಡಿಲ್ಲ ಎಲ್ಲರೂ ಜೊತೆಯಾಗಿ ಊಟ ಮಾಡಲು ಅವಕಾಶವಿದೆ. ಕೆಲವೊಮ್ಮೆ ಕೆಲವು ವ್ಯಕ್ತಿಗಳಿಗೆ ಸಹಪಂಕ್ತಿ ಭೋಜನಕ್ಕೆ ಒಲವು ಇಲ್ಲದೆ ಇದ್ದರೆ ಅಂತಹವರಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಇದೆ ಅಂತಹವರನ್ನು ನಾವು ವಿರೋಧ ಮಾಡಲು ಸಾಧ್ಯವಿಲ್ಲ ಆದರೆ ತಾವು ಸಹಪಂಕ್ತಿ ಭೋಜನಕ್ಕೆ ಬೆಂಬಲ ನೀಡುತ್ತೇವೆ. ಅಲ್ಲದೆ ಈ ಬಾರಿಯ ಪರ್ಯಾಯಕ್ಕೆ ತಾವು ದಲಿತರನ್ನು ಮಠಕ್ಕೆ ಆಹ್ವಾನ ನೀಡಿದ್ದೇವೆ. ಒಂದು ವೇಳೆ ದಲಿತರು ಅಪೇಕ್ಷೆ ಪಟ್ಟಲ್ಲಿ ಅಂತಹವರಿಗೆ ಭಕ್ತಿ ದೀಕ್ಷೇ ನೀಡಲು ಕೂಡ ತಾವು ಸಿದ್ದರಿದ್ದೇವೆ. ಭಕ್ತಿ ದೀಕ್ಷೆ ಎನ್ನುವುದು ವೀರಶೈವ ಮಠಾಧಿಪತಿಗಳು ನೀಡುವ ಲಿಂಗದೀಕ್ಷೆಯಂತೆಯೇ ಆಗಿದ್ದು, ಮದ್ಯ ಮಾಂಸವನ್ನು ವರ್ಜಿಸಿದವರಿಗೆ ಮಂತ್ರ ದೀಕ್ಷೇಯನ್ನು ನೀಡುಲು ಸಾಧ್ಯವಿದೆ. ಭಕ್ತಿ ದೀಕ್ಷೆಯನ್ನು ನೀಡುವಲ್ಲಿ ಯಾರಿಗೂ ಕೂಡ ಒತ್ತಾಯವನ್ನು ಹೇರುವುದಿಲ್ಲ ಬದಲಾಗಿ ಯಾರಾದರೂ ಅಪೇಕ್ಷೆ ಪಟ್ಟರೆ ಮಾತ್ರ ಈ ದೀಕ್ಷೆಯನ್ನು ಪಡೆಯಲು ಅವಕಾಶವಿದೆ ಎಂದರು. ಭಕ್ತಿ ದೀಕ್ಷೆಯನ್ನು ನೀಡುವುದರಿಂದ ಸಮಾಜದಲ್ಲಿ ಮತಾಂತರದಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿ ದಲಿತ ಸಮುದಾಯದಲ್ಲಿ ಇನ್ನಷ್ಟು ಧರ್ಮಾಭಿಮಾನವನ್ನು ಜಾಗೃತಗೊಳಿಸಲು ಸಹಕಾರಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಚರ್ಚೆಯಲ್ಲಿರುವ ಇನ್ನೊಂದು ವಿಚಾರವಾದ ಮಡೆ ಮಡೆ ಸ್ನಾನದ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ ಅವರು ಮಡೆ ಮಡೆ ಸ್ನಾನಕ್ಕೆ ತನ್ನ ಸ್ಪಷ್ಟ ವಿರೋಧವಿದ್ದು, ನನ್ನ ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠ ಹಾಗೂ ಅದರ ಅಧೀನದ ಇತರ ಮಠಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮಡೆ ಮಡೆ ಸ್ನಾನಕ್ಕೆ ಅವಕಾಶವನ್ನು ನೀಡುವುದಿಲ್ಲ ಅದಕ್ಕೆ ಬದಲಾಗಿ ಎಡೆ ಸ್ನಾನಕ್ಕೆ ಅವಕಾಶನೀಡಲಾಗುವುದು ಎಂದುರು.

paryaya_spciel_int 07-01-2016 11-20-03 paryaya_spciel_int 07-01-2016 11-20-10 paryaya_spciel_int 07-01-2016 11-20-40 paryaya_spciel_int 07-01-2016 11-21-43

ತಮ್ಮ ಪರ್ಯಾಯದ ಅವಧಿಯಲ್ಲಿ ಎಲ್ಲಾ ಧರ್ಮದ ಜನರುಗಳಿಗೆ ಮಠಕ್ಕೆ ಮುಕ್ತ ಅವಕಾಶವಿದ್ದು, ಪರಸ್ಪರ ಧರ್ಮಸಾಮರಸ್ಯವನ್ನು ಬೆಳೆಸುವ ಕೆಲಸಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ನಾಯಕರನ್ನು ಜೊತೆಗೂಡಿಸಿಕೊಂಡು ಬೃಹತ್ ಮಟ್ಟದ ಸೌಹರ್ದ ಸಭೆಯನ್ನು ಆಯೋಜಿಸಲು ಕೂಡ ಚಿಂತನೆ ನಡೆಸಲಾಗಿದೆ. ಇದರಿಂದ ಎಲ್ಲಾ ಧರ್ಮದ ಜನರು ಅನೋನ್ಯವಾಗಿ ಬದುಕಬೇಕು ಎನ್ನುವುದು ನಮ್ಮ ಅಪೇಕ್ಷೇ. ಇದರೊಂದಿಗೆ ದೇಶದಲ್ಲಿ ಕೂಡ ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನುರು ಶಾಂತಿ ಸೌಹಾರ್ದತೆಯಿಂದ ಬಾಳ್ವೆಯನ್ನು ನಡೆಸಬೇಕು, ಯಾವುದೇ ಕಾರಣಕ್ಕೆ ಸರಕಾರಗಳು ತುಷ್ಟಿಕರಣಕ್ಕೆ ಅಸ್ಪದೆ ನೀಡದೆ ಅಲ್ಪಸಂಖ್ಯತರು ಹಾಗೂ ಬಹುಸಂಖ್ಯಾತರು ಕೂಡ ಸಮಾನರಾಗಿ ಬಾಳವೆ ನಡೆಸುವುದನ್ನು ನಾವು ಬೆಂಬಲಿಸುತ್ತೇವೆ ಎಂದರು.

ನಮ್ಮ ಪರ್ಯಾಯದಲ್ಲಿ ಹಿಂದಿನ ನಮ್ಮ ಯೋಜನೆಗಳಾದ ನಕ್ಷಲ್ ಪೀಡಿತ ಪ್ರದೇಶಗಳ ಅಭಿವೃದ್ದಿ, ದಲಿತರ ಕೇರಿಗಳ ಉದ್ದಾರ ಇನ್ನಿತರ ಕಾರ್ಯಕ್ರಮಗಳನ್ನು ಮರೆಯದೆ ಅದಕ್ಕೂ ಸಹ ಸಹಕಾರವನ್ನು ನೀಡುವುದರೊಂದಿಗೆ, ಅನೇಕ ಧಾರ್ಮಿಕ ಪುಸ್ತಕಗಳ ಪ್ರಕಟಣೆ, ಉಪನ್ಯಾಸ ಮಾಲಿಕೆಗಳು, ದೇವಾಲಯಗಳ ಅಭಿವೃದ್ದಿಗೆ ಸಹಕಾರ, ಬಡಮಕ್ಕಳಿಗೆ ಬಿಸಿಯೂಟ ಯೋಜನೆ, ರೋಗಿಗಳಿಗೆ ಸಹಾಯವನ್ನು ನೀಡುವುದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು. ತಮ್ಮ ಪರ್ಯಾಯದಲ್ಲಿ ಅಷ್ಟ ಮಠದ ಸ್ವಾಮೀಜಿಗಳಿಗೂ ಕೂಡ ಆಹ್ವಾನವನ್ನು ನೀಡಿದ್ದು, ಎಲ್ಲರೂ ಕೂಡ ಪರ್ಯಾಯದ ಮೆರವಣಿಗೆ ಹಾಗೂ ದರ್ಬಾರ್‍ನಲ್ಲಿ ಭಾಗವಹಿಸುವ ವಿಶ್ವಾಸ ತಮಗಿದೆ ಎಂದರು. ಪರ್ಯಾಯ ಸ್ವಾಮೀಜಿಗೆ ಧೀರ್ಘವಾದ ಪೂಜಾ ವಿಧಿಗಳು ಇರುವುದರಿಂದ ತಮಗೆ ತಮ್ಮ ಶಿಷ್ಯರಾದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಸಹಾಯವನ್ನು ಮಾಡಲಿದ್ದಾರೆ ಎಂದರು.

ದೇಶದಲ್ಲಿ ಪರಸ್ಪರ ವೈಷಮ್ಯಗಳನ್ನು ಮರೆತು ಶಾಂತಿ ಸಾಮರಸ್ಯದೊಂದಿಗೆ ಪ್ರತಿಯೊಬ್ಬರು ಬಾಳಬೇಕು ಎನ್ನುವುದು ನಮ್ಮ ಅಪೇಕ್ಷೆ. ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾದ ಭೃಷ್ಟಾಚಾರ, ಅತ್ಯಾಚಾರದಂತಹ ಸಮಸ್ಯೆಗಳಿಗೆ ಆದಷ್ಟು ಬೇಗ ಕಡಿವಾಣ ಬೀಳಬೇಕು ಇದರಿಂದ ಇಡೀ ದೇಶ ಸುಭೀಕ್ಷೆಯಿಂದ ಇರಲು ಸಾಧ್ಯವಾಗಲಿದೆ. ತಮ್ಮ ಪರ್ಯಾಯದ ಅವಧಿಯಲ್ಲಿ ಇಂತಹ ವಿಚಾರಗಳಿಗೆ ನಾನು ಹೆಚ್ಚು ಗಮನ ನೀಡಿ ಸಂಬಂಧಪಟ್ಟವರಿಗೆ ಈ ಕುರಿತು ಮಾರ್ಗದರ್ಶನ ನೀಡುತ್ತೇನೆ ಎಂದರು.

Leave a Reply

Please enter your comment!
Please enter your name here