ಉಡುಪಿ: ಪರಿಷತ್ ಚುನಾವಣೆಗೆ ಸ್ಪರ್ಧಿಸದೆ ಇರಲು ನಾನೆನು ತಪ್ಪು ಮಾಡಿಲ್ಲ ; ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿ

ಉಡುಪಿ: ನಾನು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯನಾಗಿ ಪ್ರಾಮಾಣಿಕವಾಗಿಯೇ ಸೇವೆ ಸಲ್ಲಿಸಿದ್ದೇನೆ ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸೇವೆ ಪರಿಗಣಿಸಿ ಪಕ್ಷ ಚುನಾವಣೆಗೆ ಮತ್ತೆ ನಿಲ್ಲಲು ಅವಕಾಶ ನೀಡಿದೆ ಅದರಲ್ಲಿ ತಪ್ಪೇನು ಎಂದು ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿ ಪ್ರಶ್ನಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ 6 ವರ್ಷಗಳ ಹಿಂದೆ ವಿಧಾನಪರಿಷತ್ ಚುನಾವಣೆಯ ಅಭಿನಂದನಾ ಸಭೆಯ ವೇಳೆಯಲ್ಲಿ ಮುಂದಿನ ಚುನಾವಣೆಗೆ ತಾನು ಸ್ಪರ್ಧೆ ಮಾಡುವುದಿಲ್ಲ ನನ್ನಂತೆ ಇತರ ಕಾರ್ಯಕರ್ತರಿಗೆ ಪಕ್ಷದಲ್ಲಿ ಕೆಲಸ ಮಾಡಿದ ಹಿರಿಯ ಕಾರ್ಯಕರ್ತರಿಗೆ ಅವಕಾಶ ಲಭಿಸಬೇಕು ಎನ್ನುವ ಉದ್ದೇಶದಿಂದ ಈ ಮಾತನ್ನು ತಾನು ಹೇಳಿದ್ದೆ. ಅಲ್ಲದೆ ಚುನಾವಣೆ ಘೋಷಣೆಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಯ ಮತದಾರರಿಗೆ ಶುಭಾಶಯ ಸಲ್ಲಿಸಿ ಪತ್ರ ಬರೆದಿದ್ದೆ. ಅದರಲ್ಲಿ ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದು, ತಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎನ್ನುವುದನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದೆ. ಅದರ ಬಳಿಕ ನನ್ನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ತನ್ನ ಮನೆಯ ಬಳಿ ಬಂದು ಸಾವಿರಾರು ಸಂಖ್ಯೆಯಲ್ಲಿ ಸೇರಿ ಮತ್ತೆ ಚುನಾವಣೆಗೆ ಸ್ಪರ್ಧಿಸಲಬೇಕು ಎಂಬ ಒತ್ತಾಯ ಕೇಳಿ ಬಂದಾಗ ನನ್ನ ನಿರ್ಧಾರವನ್ನು ಪರಿಶೀಲನೆ ಮಾಡುವುದಾಗಿ ಹೇಳಿದ್ದೆ.

ಬಳಿಕ ವಿಪರೀತ ಗೊಂದಲಕ್ಕೆ ಸಿಲುಕಿದ ತಾನು ಈ ವಿಷಯವನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಬಳಿ ತನ್ನ ಸಮಸ್ಯೆಯನ್ನು ತಿಳಿಸಿದ್ದೆ ಅವರು ಜಿಲ್ಲೆಯ ಅವರು ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಳಿ ವಿಷಯದ ಬಗ್ಗೆ ಅಭಿಪ್ರಾಯವನ್ನು ಪಡೆದು ಕೆಪಿಸಿಸಿಗೆ ಮಾಹಿತಿ ನೀಡಿದ್ದಾರೆ. ಆದರೆ ಕಾರ್ಯಕರ್ತರ ಒತ್ತಡ ಹಾಗೂ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ತಾನೇ ಸ್ಪರ್ಧಿಸುವಂತೆ ಮತ್ತೆ ನನಗೆ ಸೂಚನೆ ನೀಡಿದ್ದು, ಪಕ್ಷದ ನಿರ್ಧಾರವನ್ನು ಗೌರವಿಸುವುದು ನನ್ನ ಕರ್ತವ್ಯ. ಇದರಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರದ್ದಾಗಲಿ ತನ್ನದಾಗಲಿ ವೈಯುಕ್ತಿಕ ಹಿತಾಸಕ್ತಿ ಅಡಗಿಲ್ಲ. ಪಕ್ಷದ ನಿರ್ಧಾರದಂತೆ ಎರಡೂ ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಇತರ ಹಿರಿಯ ನಾಯಕರ ಜೊತೆಯಲ್ಲಿ ಸೇರಿಕೊಂಡು ತಾನು ನಾಮಪತ್ರವನ್ನು ಸಲ್ಲಿಸಿದ್ದು, ತಾನು ಸಂಪೂರ್ಣ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದರು.

ತನ್ನ 6 ವರ್ಷದ ಶಾಸಕತ್ವದ ಅವಧಿಯಲ್ಲಿ ಎರಡು ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ಸತತವಾಗಿ ಭೇಟಿ ನೀಡಿದ್ದು, ಬಂದ ಅನುದಾನವನ್ನು ಎರಡು ಜಿಲ್ಲೆಗಳಿಗೂ ಸಮಾನವಾಗಿ ಹಂಚಿರುತ್ತೇನೆ. ನನ್ನ ವಿರುದ್ದ ಅಪಪ್ರಚಾರ ಮಾಡುವವರು ಬೇಕಾದರೆ ಅದಕ್ಕೆ ಬೇಕಾದ ದಾಖಲೆಗಳನ್ನು ಪರಿಶೀಲಸಬಹುದು ಎಂದರು. ನನ್ನ 6 ವರ್ಷದ ಅವಧಿಯಲ್ಲಿ ತಾನು ಪ್ರಾಮಾಣಿಕವಾಗಿ ಜನರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂಬ ಪೂರ್ಣ ಸಮಾಧಾನ ತನಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ್ ಪೂಜಾರಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಮುಂದಿನ ಅವಧಿಗೆ ಮುಂದುವರೆಸಬೇಕೆಂಬ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ ಮತ್ತು ಭುಜಂಗ ಶೆಟ್ಟಿಯವರು ಕೂಡ ಇದ್ದು, ಸಭೆಯ ನಿರ್ಧಾರವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಆಸಕ್ತರು ಕೂಡ ಅರ್ಜಿ ಸಲ್ಲಿಸಲು ಕೂಡ ಸಭೆ ಅವಕಾಶ ನೀಡಿತ್ತು ಅದರಂತೆ 9 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿಗಳನ್ನು ಆಸ್ಕರ್ ಫೆರ್ನಾಂಡಿಸ್ ಮತ್ತು ಕೆಪಿಸಿಸಿಗೆ ಕಳುಹಿಸಿಕೊಡಲಾಗಿತ್ತು. ಬಳಿಕವಷ್ಟೇ ಪ್ರತಾಪ್ ಚಂದ್ರ ಶೆಟ್ಟಿಯವರ ಆಯ್ಕೆಯನ್ನು ಹೈಕಮಾಂಡ್ ಮಾಡಿದ್ದು, ಯಾವುದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ ಎಂದರು.

ಜಯಪ್ರಕಾಶ್ ಹೆಗ್ಡೆಯವರಿಗೆ ಸಂಸದರಾಗಿರುವ ಅವಕಾಶ ನೀಡುವ ವೇಳೆ ವಿನಯ್ ಕುಮಾರ್ ಸೊರಕೆ ಕೂಡ ಆಕಾಂಕ್ಷಿಗಳಾಗಿದ್ದರು ಆದರೆ ಜಿಲ್ಲಾ ಕಾಂಗ್ರೆಸ್ ಮತ್ತು ಆಸ್ಕರ್ ಅವರು ಜಯಪ್ರಕಾಶ್ ಹೆಗ್ಡೆಯವರಿಗೆ ಅವಕಾಶ ನೀಡಿತ್ತು ಎನ್ನುವುದನ್ನು ಹೆಗ್ಡೆಯವರು ಮರೆಯಬಾರದು. ಜಯಪ್ರಕಾಶ್ ಹೆಗ್ಡೆಯವರ ಬಳಿ ಈಗಾಗಲೇ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಮಾತನಾಡಿದ್ದು, ಹೆಗ್ಡೆಯವರು ತಮ್ಮ ನಾಮಪತ್ರವನ್ನು ವಾಪಾಸು ಪಡೆಯುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಅಲ್ಲದೆ ಪಕ್ಷದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಇದ್ದು ಪ್ರತಾಪ್ ಚಂದ್ರ ಶೆಟ್ಟಿಯವರು ಗೆಲ್ಲುವ ವಿಶ್ವಾಸ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಆಸ್ಕರ್ ಹಾಗೂ ಜಿಲ್ಲೆಯ ಎಲ್ಲಾ ನಾಯಕರು ಸೇರಿ ಚರ್ಚೆ ನಡೆಸಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪುನರಪಿ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ಯಾವುದೆ ಗೊಂದಲಗಳಿಲ್ಲ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡುವ ಮತಯಾಚನೆ ಮಾಡಲಾಗುವುದು. ಪಕ್ಷದಲ್ಲಿನ ಗೊಂದಲಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು ಆರ್ ಸಭಾಪತಿ, ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್ ಇತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here