ಉಡುಪಿ: ಪರಿಷತ್ ಚುನಾವಣೆ : ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯಲು ಹೆಗ್ಡೆ ನಿರ್ಧಾರ

ಉಡುಪಿ: ಡಿಸೆಂಬರ್ 27ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯುವ ತಮ್ಮ ನಿರ್ಧಾರಕ್ಕೆ ಬದಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

photo

ಡಿಸೆಂಬರ್ 10 ರಂದು ತಮ್ಮನ್ನು ಸಂಪರ್ಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ.ಕೆ.ಪರಮೇಶ್ವರ್‌ ಅವರಿಗೂ ಈ ಸಂಗತಿಯನ್ನು ಸ್ಪಷ್ಟಪಡಿಸಿರುವುದಾಗಿ ಹೆಗ್ಡೆ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ನಾಮಪತ್ರವನ್ನು ಹಿಂಪಡೆಯುವಂತೆ ಇಬ್ಬರೂ ನಾಯಕರು ಸೂಚಿಸಿದ್ದು, ಪ್ರತಾಪ್‌ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ ಮೇಲೆಯೇ ನಾವು ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದೆವು. ಆದರೆ ಅರ್ಜಿಯನ್ನೇ ಹಾಕದ ಅವರನ್ನು ಮತ್ತೆ ನಿಲ್ಲುವಂತೆ ಮಾಡಿರುವ ಕುರಿತು ಕಾರ್ಯಕರ್ತರಲ್ಲಿರುವ ಅಸಮಾಧಾನವನ್ನು ಅವರಿಗೆ ತಿಳಿಸಿದ್ದಾಗಿ ಹೆಗ್ಡೆ ಹೇಳಿದ್ದಾರೆ.

ಈಗಲೂ ಪಕ್ಷ ಪ್ರತಾಪ್‌ ಮತ್ತು ಬೇಕಿದ್ದರೆ ನನ್ನ ಬದಲು ಬೇರೆಯೇ ಆಕಾಂಕ್ಷಿಗಳಿಗೆ ಸ್ಪರ್ಧಿಸಲು ಟಿಕೆಟ್‌ ನೀಡಲಿ, ನಾನು ನಾಮಪತ್ರ ವಾಪಸ್‌ ಪಡೆಯುತ್ತೇನೆಎಂದು ಪರಮೇಶ್ವರ್‌ ಬಳಿ ಹೇಳಿರುವೆನು ಎಂದು ಹೆಗ್ಡೆ ತಿಳಿಸಿದ್ದಾರೆ. ಅದಕ್ಕೆ ಈಗ ತುಂಬಾ ತಡವಾಯಿತು ಎಂದು ಪರಮೇಶ್ವರ್‌ ಹೇಳಿದಾಗ, ನಾವು ಮೊದಲಿನಿಂದಲೂ ಇದೇ ಮಾತನ್ನು ಹೇಳುತ್ತಾ ಬಂದಿದ್ದೇವೆ. “ಈ ಬಾರಿ ನಾನು ಸ್ಪರ್ಧಿಸಿ ಗೆದ್ದು ಬರುತ್ತೇನೆ’ ಎಂದು ಅವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಹಿಂದೆಗೆತಕ್ಕೆ ಶನಿವಾರ ಕೊನೆಯ ದಿನವಾಗಿದ್ದು, ನಮ್ಮ ನಾಲ್ವರಲ್ಲಿ ಒಬ್ಬರು ಸ್ಪರ್ಧಾಕಣದಲ್ಲಿ ಇರುತ್ತೇವೆ. ಈಗಾಗಲೇ ಬಿ.ಭುಜಂಗ ಶೆಟ್ಟಿ ಹಾಗೂ ಶಂಕರ ಕುಂದರ್‌ ಅವರು ನಾಮಪತ್ರ ಹಿಂದಕ್ಕೆ ಪಡೆಯಲು ಒಪ್ಪಿದ್ದು, ಹರಿಕೃಷ್ಣ ಬಂಟ್ವಾಳರೊಂದಿಗೆ ಮಾತುಕತೆ ನಡೆಸುವುದಾಗಿ ಹೆಗ್ಡೆ ತಿಳಿಸಿದರು.

ಚುನಾವಣೆಗಾಗಿ ಮತದಾರನ್ನು ಸಂಪರ್ಕಿಸುವ ಕಾರ್ಯವನ್ನು ತಾನು ಈಗಾಗಲೇ ಆರಂಭಿಸಿದ್ದಾಗಿ ಹೇಳಿದ ಹೆಗ್ಡೆ, ಕ್ಷೇತ್ರದ “ಎಲ್ಲಾ ಮತದಾರರನ್ನು’ ಸಂಪರ್ಕಿಸಿ ಮತ ಯಾಚಿಸುವುದಾಗಿ ತಿಳಿಸಿದರು. ಈ ನಡುವೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಗೋಪಾಲ ಪೂಜಾರಿ ಅವರು ಭುಜಂಗ ಶೆಟ್ಟಿ ಮತ್ತು ಶಂಕರ್‌ ಕುಂದರ್‌ರೊಂದಿಗೆ ಮಾತನಾಡಿ ಸ್ಪರ್ಧೆಯ ತಮ್ಮ ತೀರ್ಮಾನವನ್ನು ಹಿಂಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Please enter your comment!
Please enter your name here