ಉಡುಪಿ: ಪುರಾತನ ಮೂರ್ತಿಗಳ ವಾರಸುದಾರರಿಗಾಗಿ ಪೋಲಿಸರ ಹುಡುಕಾಟ

ಉಡುಪಿ: ಸುಮಾರು ಒಂದು ವರ್ಷದ ಹಿಂದೆ ಉಡುಪಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಪದ್ಮಾವತಿ ಮತ್ತು ಶ್ರೀನಿವಾಸನ ಮೂರ್ತಿಗಳು ಬಹುಮೂಲ್ಯ ಪುರಾತನ ದೇವರ ಮೂರ್ತಿಗಳೆಂದು ಸಾಬೀತಾಗಿದ್ದು, ಈಗ ಅವುಗಳ ವಾರಸುದಾರರ ಪತ್ತೆ ಪೊಲೀಸರಿಗೆ ಕಗ್ಗಂಟಾಗಿದೆ.
ಈ ಮೂರ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದ ನಾಲ್ವರು ಆರೋಪಿಗಳಿಗೆ ಮೂರ್ತಿಯ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಪುರಾತತ್ವ ತಜ್ಞರ ಪರೀಕ್ಷೆಯಿಂದ ಈ ಮೂರ್ತಿಗಳು ಪುರಾತನ ಮೂರ್ತಿಗಳೆಂದು ಖಚಿತವಾಗಿದ್ದರೂ, ಇವುಗಳ ವಾರಸುದಾರರು ಯಾರೂ ಇದುವರೆಗೆ ಬಂದಿಲ್ಲ ಎಂದು ಉಡುಪಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಕುಮಾರ್ ತಿಳಿಸಿದ್ದಾರೆ.
2014ರ ಅ.27ರಂದು ತಮಗೆ ಬಂದ ಖಚಿತ ಮಾಹಿತಿಯಂತೆ ಉಡುಪಿ ವೃತ್ತ ನಿರೀಕ್ಷಕರಾಗಿದ್ದ ಶ್ರೀಕಾಂತ ಕೆ. ತಮ್ಮ ಸಿಬ್ಬಂದಿ ಯೊಂದಿಗೆ ಉಡುಪಿ ಡಯಾನಾ ಸರ್ಕಲ್ ಬಳಿ ಇರುವ ಕಲ್ಪನಾ ಲಾಡ್ಜ್‌ನ ರೂಮ್ ನಂ. 401ಕ್ಕೆ ದಾಳಿ ಮಾಡಿ ಪುರಾತನ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿ ಅವರ ವಶದಲ್ಲಿದ್ದ ಎರಡು ದೇವರ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಮುಟ್ಟಳ್ಳಿ ಗ್ರಾಮದ ಮಹಾದೇವ ನಾಯ್ಕಾ(41), ಗದಗ ಜಿಲ್ಲೆ ಪಂಚಾಕ್ಷರಿ ನಗರದ ಈಶ್ವರ ರೆಡ್ಡಿ (44), ದ.ಕ.ಜಿಲ್ಲೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಸದಾಶಿವ ಗೌಡ ಹಾಗೂ ಮಲ್ಪೆ ಕೊಡವೂರಿನ ಶೇಖರ ಮೆಂಡನ್ (48), ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದ ವೆಂಕಟರಮಣ ಜಟ್ಟಪ್ಪನಾಯ್ಕೆ(27) ಹಾಗೂ ಹಾವೇರಿ ಜಿಲ್ಲೆ ಕರ್ಜಗಿ ಗ್ರಾಮದ ಬಸವರಾಜ್ ಎಸ್ ಹನಗೋಡಿಮಠ (40) ಎಂಬವರನ್ನು ಬಂಧಿಸಲಾಗಿತ್ತು. ಬಂಧಿತರಿಂದ ಅಂದಾಜು 5 ಲಕ್ಷ ರೂ. ವೌಲ್ಯದ ಬೆಲೆಬಾಳುವ ಪುರಾತನ ತಾಮ್ರದ ಶ್ರೀನಿವಾಸ ಹಾಗೂ ಪದ್ಮಾವತಿ ವಿಗ್ರಹಗಳನ್ನು, 7 ಮೊಬೈಲ್ ಪೋನ್‌ಗಳನ್ನು ಹಾಗೂ ಆರೋಪಿಗಳು ಉಪಯೋಗಿಸಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕಲಂ 379 ಐಪಿಸಿ ಹಾಗೂ 3.25 ಪುರಾತನ ವಸ್ತು ಕಲಾನಿಧಿ ಅಧಿನಿಯಮ 1972ರಂತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದವರು ಹೇಳಿದರು. ಪ್ರಕರಣದಲ್ಲಿ ಕಳವಾದ ಮೂರ್ತಿಯ ವಾರಸುದಾರರು ಈವರೆಗೆ ಪತ್ತೆಯಾಗದೇ ಇರುವುದರಿಂದ, ಪ್ರಕರಣದಲ್ಲಿ ಸ್ವಾಧೀನಪಡಿಸಿಕೊಂಡ ವಿಗ್ರಹಗಳು ಕಳವಾದ ಬಗ್ಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ಪೊಲೀಸ್ ಉಪನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಉಡುಪಿ ನಗರ ಠಾಣೆ- 0820-2520444, ಪೊಲೀಸ್ ವೃತ್ತನಿರೀಕ್ಷಕರು-0820-2520329ನ್ನು ಸಂಪರ್ಕಿಸಬಹುದು.

Leave a Reply

Please enter your comment!
Please enter your name here