ಉಡುಪಿ : ಪ.ಜಾತಿ ಪಂಗಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಗುರಿ ಪಡೆಯಿರಿ- ಜಿಲ್ಲಾಧಿಕಾರಿ

ಉಡುಪಿ:- ಜಿಲ್ಲೆಯ ಪರಿಶಿಷ್ಟ ಜಾತಿ ಪಂಗಡಗಳ ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳು ಜಿಲ್ಲಾ ಕೇಂದ್ರಗಳಿಗೆ ಹಂಚಿಕೆ ಮಾಡುವ ಗುರಿಯ ಸಂದರ್ಭದಲ್ಲಿ , ಜಿಲ್ಲೆಯ ಎಲ್ಲಾ ಇಲಾಖೆಗಳು ತಮ್ಮ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಹೆಚ್ಚಿನ ಗುರಿಯನ್ನು ಕೇಳಿ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಹೇಳಿದ್ದಾರೆ.
ಅವರು ಗುರುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಪಂಗಡದ ಜನರ ಹಿತರಕ್ಷಣಾ ಸಮಿತಿ ಹಾಗೂ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮರಳುಗಾರಿಕೆ ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಪ.ಜಾತಿ ಪಂಗಡದ ವ್ಯಕ್ತಿಗಳಿಗೂ ಸಹ ಮೀಸಲಾತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯರ ಬದಲು ಹೊರ ರಾಜ್ಯದ ಜನರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಚತಾ ಕೆಲಸ ಮಾಡುವ ನೌಕರರಿಗೆ ಕಡ್ಡಾಯವಾಗಿ ಹೆಪಟಿಟೈಸ್ ಬಿ ಇಂಜೆಕ್ಷನ್ ನೀಡುವಂತೆ ಹಾಗೂ ಅವರ ಕುಟುಂಬ ವರ್ಗದವರಿಗೂ ಸಹ ಈ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು, ಉಡುಪಿ ನಗರಸಭೆಯಲ್ಲಿ ಪೌರಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರೂ ಸೇರಿದಂತೆ 392 ಮಂದಿಗೆ , ಕಾರ್ಕಳದಲ್ಲಿ 31, ಸಾಲಿಗ್ರಾಮದಲ್ಲಿ 15 , ಕುಂದಾಪುರದಲ್ಲಿ 55 ಮಂದಿಗೆ ಇಂಜೆಕ್ಷನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಮಿಕರಿಗೆ ಕೆಲಸ ಮಾಡಲು ಸುರಕ್ಷಾ ಉಪಕರಣಗಳನ್ನು ನೀಡುವಂತೆ ಹಾಗೂ ಗ್ರಾಮ ಪಂಚಾಯತ್ ನಲ್ಲೂ ಸಹ ಪೌರಕಾರ್ಮಿಕರಿಗೆ ಇಂಜೆಕ್ಷನ್ ನೀಡಲು ಹಾಗೂ ಸುರಕ್ಷಾ ಉಪಕರಣಗಳನ್ನು ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಎಲ್ಲಾ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯ ಸಂಪೂರ್ಣ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆಯುವಂತೆ ಹಾಗೂ ದಲಿತರ ಭೂ ಸಮಸ್ಯೆಗಳ ಕುರಿತಂತೆ ಪ್ರತ್ಯೇಕ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಸಂಘಟನೆಯ ಮುಖಂಡರಿಗೆ ತಿಳಿಸಿದರು.
ಮದೂರು ನಲ್ಲಿ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ರಬ್ಬರ್ ತೋಟ ಆಗಿದೆ ಈ ಬಗ್ಗೆ ಪರಿಶೀಲಿಸುವಂತೆ ಬಂದ ಕೋರಿಕೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕುಂದಾಪುರ ಉಪ ವಿಭಾಗಾಧಿಕಾರಿಗಳು, ಕುಂದಾಪುರ ಡಿವೈಎಸ್ಪಿ , ತಹಸೀಲ್ದಾರ್, ಸರ್ವೇಯರ್ ಹಾಗೂ ಸಂಘಟನೆಗಳ ಮುಖಂಡರು ಸಭೆ ನಡಸಿ ಜನವರಿ ಅಂತ್ಯದೊಳಗೆ ವರದಿಯನ್ನು ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಎಸ್ಸಿಪಿ-ಟಿಎಎಸ್ಪಿ ಯೋಜನೆಯಡಿ ನಿರ್ಮಾಣವಾಗುವ ರಸ್ತೆಗಳಿಗೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೋರಿದ ಸಂಘಟನೆಗಳ ಮುಖ್ಯಸ್ಥರಿಗೆ ಈ ಕುರಿತು ಮನವಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯ ಕೆಲವು ಪಂಚಾಯತ್ ಗಳಲ್ಲಿ ಪ.ಜಾತಿ ಪಂಗಡದ ಜನ ವಾಸವಿಲ್ಲದೇ ಇದ್ದರೂ ಸಹ , ಯೋಜನೆಯ ಹೆಸರಿನಲ್ಲಿ ರಸ್ತೆ ಮಾಡಲಾಗಿದೆ ಹಾಗೂ ಮೀಸಲಿಟ್ಟಿರುವ ಮನೆ ನಿವೇಶನ ಹಂಚಿಕೆ ಸಮಯದಲ್ಲಿ ಯಾರೂ ಇಲ್ಲ ಎಂದು ದಾಖಲಿಸಿ, ಮನೆ ನಿವೇಶನಗಳನ್ನು ಇತರೆ ವರ್ಗದ ಜನರಿಗೆ ಹಂಚಿಕೆ ಮಾಡಿದ್ದಾರೆ ಎಂದ ಸಂಘಟನೆಯ ಮುಖ್ಯಸ್ಥರ ದೂರು ಕುರಿತಂತೆ , ಈ ಕುರಿತು ಸಂಬಂದಪಟ್ಟ ಗ್ರಾಮ ಪಂಚಾಯತ್ ಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಅಂಬೇಡ್ಕರ್ ಭವನ ಪುನರ್ ನಿರ್ಮಾಣಕ್ಕಾಗಿ, ನಗರಸಭೆ ವತಿಯಿಂದ 24.10 ಅನುದಾನದಲ್ಲಿ 21 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಕಾಮಗಾರಿಯನ್ನು ಏಪ್ರಿಲ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ಸುಂದರ ಮಾಸ್ತರ್, ಉದಯ ಕುಮಾರ್ ತಲ್ಲೂರು, ಮಂಜುನಾಥ ಗಿಳಿಯಾರು, ರಮೇಶ್ ಕೋಟ್ಯಾನ್, ಗಣೇಶ ಕೊರಗ, ವಾಸುದೇವ, ಸುಂದರ ಕಪ್ಪೆಟ್ಟು, ವಕೀಲ ಮಹಾಬಲ,ಗಣೇಶ್ ರಾಣೆ, ಮೋಹನ್ ಚಂದ್ರ ಕಾಳವರ್ಕರ್, ಗೀತಾ ಪಡುಬಿದ್ರೆ, ವಿಶ್ವನಾಥ ಪೇತ್ರಿ ಮತ್ತು ಇತರೆ ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!
Please enter your name here