ಉಡುಪಿ, : ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿಸಿ- ವಿನಯ ಕುಮಾರ್ ಸೊರಕೆ

ಉಡುಪಿ: ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್  ವಿತರಣೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿ ಆದಷ್ಟು ಶೀಘ್ರದಲ್ಲಿ ಕಾರ್ಡ್ ಗಳನ್ನು ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.

ಅವರು ಮಂಗಳವಾರ ಉಡುಪಿ ತಾ.ಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

TP UDUPI KDP TP UDUPI KDP1

 ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವ ವಿವಿಧ ಗ್ರಾಮಗಳ ಸುಮಾರು 1566 ಮಂದಿಗೆ ಇದುವರೆಗೂ ಬಿ.ಪಿ.ಎಲ್   ಕಾರ್ಡ್ ಗಳು ದೊರೆತಿಲ್ಲ, ಇದರಿಂದಾಗಿ ಫಲಾನುವಿಗಳು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ, ಕೆಲ ಕಾರ್ಡ್ ಗಳು  ದೋಷಪೂರಿತವಾಗಿ ಮುದ್ರಣಗೊಂಡಿದ್ದು ಇವುಗಳನ್ನು ಆದಷ್ಟು ಶೀಘ್ರದಲ್ಲಿ ಪರಿಹರಿಸುವಂತೆ ಸೂಚಿಸಿದ ಸಚಿವರು ಬಿಪಿಎಲ್ ಕಾರ್ಡ್ ಗಳಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸುವ ಕುರಿತಂತೆ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು, ಎನ್.ಐ.ಸಿ ಅಧಿಕಾರಿಗಳು, ಪಿಡಿಓ ಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಹಾಗೂ ಅದಾಲತ್ ಗಳನ್ನು ನಡೆಸುವುದರ ಮೂಲಕ ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ 94 ಸಿ ಪ್ರಕರಣಗಳನ್ನೂ ಸಹ ಶೀಘ್ರದಲ್ಲಿ ಇತ್ಯರ್ಥಪಡಿಸುವಂತೆ  ಉಡುಪಿ ತಹಸೀಲ್ದಾರ್ ಗುರುಪ್ರಸಾದ್ ರವರಿಗೆ ಸೂಚಿಸಿದರು.

ಮತ್ಯ್ಸಾಶ್ರಯ ಯೋಜನೆಯ ಅನುಷ್ಠಾನದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಇದುವರೆವಿಗೂ ವಾಡಿಕೆ ಮಳೆ 948 ಮಿಮಿ ಆಗಿದ್ದು, ಇದುವರೆವಿಗೂ 643 ಮಿಮಿ ಮಳೆ ಆಗಿದೆ,  ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ದಾಸ್ತಾನು ಲಭ್ಯವಿದೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ ವಸತಿ ರಹಿತರಿಗೆ ನಿವೇಶನ ನೀಡುವ ಕುರಿತಂತೆ ಸಂಬಂದಪಟ್ಟ ಎಲ್ಲಾ ಇಲಾಖೆಗಳು 15 ದಿನಗಳ ಒಳಗೆ ಸಭೆ ನಡೆಸಿ, ಪರಸ್ಪರ ಸಮನ್ವಯದೊಂದಿಗೆ ಕೆಲಸ ನಿರ್ವಹಿಸುವಂತೆ ಸೂಚಿಸಿದ ಸಚಿವರು,2010-11 ರಿಂದ ಮನೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ಪ್ರಕರಣಗಳ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ, ಸಂತ್ರಸ್ಥರಿಗೆ ತಕ್ಷಣವೇ ತಾತ್ಕಾಲಿಕ ಪರಿಹಾರ ವಿತರಿಸುವಂತೆ ಮತ್ತು ಮನೆ ಹಾನಿ, ಜೀವ ಹಾನಿ, ಕೃಷಿ ಹಾನಿ, ಜಾನುವಾರು ಹಾನಿ ಕುರಿತು ಆದಷ್ಟು ಶೀಘ್ರದಲ್ಲಿ ಹಾನಿಯ ಕುರಿತು ವರದಿ ಸಿದ್ದಪಡಿಸಿ ಸಂಪೂರ್ಣ ಪರಿಹಾರ ವಿತರಣೇಗೆ ಕ್ರಮ ಕೈಗೊಳ್ಮ್ಳವಂತೆ ಮತ್ತು ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ರಸ್ತೆಗಳನ್ನು ದುರಸ್ತಿಪಡಿಸಿ, ಮಳೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ಹೇಳಿದರು.

 ತಾಲೂಕಿನ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಕುರಿತಂತೆ, ಭರ್ತಿ ಆದ ಹಾಸ್ಟೆಲ್ ಗಳಲ್ಲಿ  ಹೆಚ್ಚುವರಿಯಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಖಾಲಿ ಇರುವ ಬೇರೆ ಹಾಸ್ಟೆಲ್ ಗಳಲ್ಲಿ ಸೇರ್ಪಡೆಗೆ ಅವಕಾಶ ನೀಡುವಂತೆ ಹೇಳಿದ ಸಚಿವರು, ಹಿರೇಬೆಟ್ಟು ನಲ್ಲಿ  1.5 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ಹಾಸ್ಟೆಲ್ ನಿರ್ಮಾಣಕ್ಕೆ  ಮಂಜೂರಾತಿ ದೊರೆತಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಶೇ.95 ಪುಸ್ತಕ ಸರಬರಜು ಆಗಿದ್ದು, ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು, ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು,  ಶಿಕ್ಷಕರನ್ನು, ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು  ಸಚಿವರು ಅಭಿನಂದಿಸಿದರು.

 ಸಭೆಯಲ್ಲಿ ತಾ.ಪಂ. ಅಧ್ಯಕ್ಷರಾದ ಸುನೀತಾ ನಾಯಕ್, ಉಪಾಧ್ಯಕ್ಷ ಗಣೇಶ್ ಕುಮಾರ್, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೊಲಿಯೋ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್ , ಜಿ.ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ, ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here