ಉಡುಪಿ: ಮಾಜಿ ಸಚಿವ ವಸಂತ್ ವಿ ಸಾಲ್ಯಾನ್ ನಿಧನ ; ಗಣ್ಯರ ಕಂಬನಿ

ಉಡುಪಿ :  ರಾಜ್ಯದ ಮಾಜಿ ಸಚಿವ ವಸಂತ ವಿ. ಸಾಲ್ಯಾನ್ (75) ಅವರು ಶನಿವಾರ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ಪತ್ನಿ ಮತ್ತು 2 ಹೆಣ್ಣುಮಕ್ಕಳನ್ನು ಆಗಲಿದ್ದಾರೆ.

salian_250715-1

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಸ್ಪರ್ಧಿಸಿ, 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಗೆದ್ದವ ಸಾಲ್ಯಾನರು 1992 – 1994ರವರೆಗೆ ಎಂ. ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮತ್ತು 1999 – 2004ರವರೆಗೆ ಎಸ್.ಎಂ.ಕ?ಷ್ಣ ಸರ್ಕಾರದಲ್ಲಿ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿಯೂ ಕೆಲಸ ಮಾಡಿದ್ದರು.

ಕರಾವಳಿಯ ಜ್ವಲಂತ ಸಮಸ್ಯೆ ಕಡಲುಕೊರೆತಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದಕ್ಕಾಗಿ ಅವರು ಪ್ರಾನ್ಸ್ ಪ್ರವಾಸ ಮಾಡಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲಿನ ಮಾದರಿಯನ್ನು ರಾಜ್ಯದ ಕರಾವಳಿ ತೀರದಲ್ಲಿ ಅಳವಡಿಸಲು ಬಹಳ ಹೋರಾಟ ನಡೆಸಿದ್ದರು. ಆದರೇ ಅದು ಇನ್ನೂವರೆಗೆ ಜಾರಿಗೆ ಬಂದಿಲ್ಲ. ಈ ನೋವು ಅವರಿಗೆ ಕೊನೆಯತನಕವೂ ಕಾಡುತ್ತಿತ್ತು.

ಕೊನೆಯ ಒಂದೆರಡು ವರ್ಷಗಳಲ್ಲಿ ಅವರ ರಾಜಕೀಯ ಜೀವನ ತೀವ್ರವಾಗಿ ಏರುಪೇರುಗಳಿಂದ ಕೂಡಿತ್ತು. 6 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ, ಸಾಲ್ಯಾನ್ ಅವರಿಗೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟು ನಿರಾಕರಿಸಿದ್ದರಿಂದ ಬೇಸರಗೊಂಡು ಜೆಡಿಎಸ್ ಪಕ್ಷ ಸೇರಿ ವಿಧಾನಸಭೆಗೆ ಸ್ಪರ್ಧಿಸಿದ್ದರು ಮತ್ತು ಸೋತಿದ್ದರು.

ನಂತರ ಜೆಡಿಎಸ್ ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಪಕ್ಷ ತೋರೆದು 2014ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಲ್ಲಿ ಬಿ.ಜೆ.ಪಿ.ಯನ್ನೂ ಸೇರಿದ್ದರು. ಆದರೆ ಚುನಾವಣೆಯ ನಂತರ ಅಲ್ಲಿಯೂ ಅವರಿಗೆ ವಿಶೇಷ ಸ್ಥಾನಮಾನಗಳು ದೊರೆತಿರಲಿಲ್ಲ. ಇತ್ತೀಚೆಗೆ ಮಾನಸಿಕವಾಗಿ ತೀವ್ರವಾಸಿ ಕುಸಿದಿದ್ದ ಅವರು ಅನಾರೋಗ್ಯವನ್ನು ಎದುರಿಸುತ್ತಿದ್ದರು.

ಅವರ ಒಬ್ಬನೇ ಮಗ ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾನೆ. ಇತ್ತೀಚೆಗೆ ತಮ್ಮ ಮಗಳನ್ನು ರಾಜಕೀಯ ಪರಿಚಯಿಸುವಲ್ಲಿ ಬಹಳ ಶ್ರಮಿಸುತ್ತಿದ್ದರು.

ಹೃದಯಾಘಾತದಿಂದ ಇಂದು ಮೃತಪಟ್ಟ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ವಸಂತ ವಿ ಸಾಲಿಯಾನ್ ರವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನವನ್ನು ಸಚಿವರು ಪಡೆದರು.

1978 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ ಸಾಲಿಯಾನ್ ರವರು 1983 ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು , ಎಂ. ವೀರಪ್ಪ ಮೊಯಿಲಿ ಮತ್ತು ಎಸ್.ಎಂ ಕೃಷ್ಣ ರವರ ಸರ್ಕಾರದಲ್ಲಿ ಬಂದರು ಮತ್ತು  ಮೀನುಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿ, ಸಮುದ್ರ ಕೊರೆತ ತಡೆಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯಲು  ಪ್ರಯತ್ನಿಸಿದ್ದರು.

5 ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಕಾಪು ವಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು , ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸಹ ಅವರು ಕಾರ್ಯ ನಿರ್ವಹಿಸಿದ್ದರು.

ದಿವಂಗತರ ಆತ್ಮಕ್ಕೆ  ಭಗವಂತನು  ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ತಮ್ಮ ಸಂತಾಪ ಸಂದೇಶದಲ್ಲಿ  ತಿಳಿಸಿದ್ದಾರೆ.

 

ಅಲ್ಲದೇ ಸಾಲ್ಯಾನ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡೀಸ್, ಎಂ.ಎ.ಗಫೂರ್, ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಪ್ರಮೋದ್ ಮಧ್ವರಾಜ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಜಿಲ್ಲಾ ಅದ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಂಸದೆ ಶೋಭಾ ಕರಂದ್ಲಾಜೆ, ಬಿ ಎಸ್ ಯಡ್ಯೂರಪ್ಪ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

Leave a Reply

Please enter your comment!
Please enter your name here