ಉಡುಪಿ: ಮೀನುಗಾರಿಕೆ ನಿಷೇಧ: ಲಂಗರು ಹಾಕಿದ 2 ಸಾವಿರ ಬೋಟ್‌ಗಳು

ಉಡುಪಿ: ಮೀನುಗಾರಿಕೆಯನ್ನು ನಿಷೇಧಿಸಿರುವುದರಿಂದ ಸುಮಾರು 2 ಸಾವಿರಕ್ಕೂ ಅಧಿಕ ಬೋಟ್‌ಗಳು ಜಿಲ್ಲೆಯ ವಿವಿಧ ಬಂದರುಗಳಲ್ಲಿ ಲಂಗರು ಹಾಕಿವೆ. ಜಿಲ್ಲೆಯ ಪ್ರಮುಖ ಮಲ್ಪೆ ಬಂದರಿನಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲ ಬೋಟ್‌ಗಳು ಕಾಣಸಿಗುತ್ತವೆ.

20140610_Malpe_Port_abhayachandrajain1

10 ಅಶ್ವಶಕ್ತಿಯ ಬೋಟ್‌ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬೋಟ್‌ಗಳು ಈ ಅವಧಿಯಲ್ಲಿ ಸಮುದ್ರಕ್ಕಿಳಿಯುವುದಿಲ್ಲ. ಮಳೆ ಬಿರುಗಾಳಿ ತೀವ್ರವಾಗಿರುವುದರಿಂದ ಸಾಮಾನ್ಯವಾಗಿ ಸಣ್ಣ ಬೋಟ್‌ಗಳೂ ಮೀನುಗಾರಿಕೆಗೆ ತೆರಳುವುದು ವಿರಳ. ಆದ್ದರಿಂದ ಸುಮಾರು 61 ದಿನಗಳ ಮೀನುಗಾರಿಕೆಗೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

‘ನಿಷೇಧ ಇರುವುದರಿಂದ ಎಲ್ಲ ಬೋಟ್‌ಗಳು ಈಗಾಗಲೇ ಬಂದರುಗಳಿಗೆ ಮರಳಿವೆ. ಲಂಗರು ಹಾಕಲು ಸ್ಥಳಾವಾಕಾಶದ ಕೊರತೆ ಇದೆ. ಮಲ್ಪೆ ಬಂದರು, ಹಂಗಾರಕಟ್ಟೆ, ಗಂಗೊಳ್ಳಿಗಳಲ್ಲಿ ಬೋಟ್‌ಗಳು ಲಂಗರು ಹಾಕಿವೆ. ಬಂದರುಗಳಲ್ಲಿ ಜಾಗ ಸಿಗದಿರುವ ಕಾರಣ ಹೊಳೆ ಬದಿಗಳಲ್ಲಿಯೂ ಕೆಲವು ಬೋಟ್‌ಗಳು ಲಂಗರು ಹಾಕಿವೆ’ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ ಕಿದಿಯೂರು.

ಮೀನುಗಾರಿಕೆಗೆ ರಜೆ ಇದ್ದರೂ ಮೀನುಗಾರರಿಗೆ ಸಂಪೂರ್ಣ ರಜೆ ಇರುವುದಿಲ್ಲ. ಬೋಟ್‌ ಕಟ್ಟುವುದು, ಬೋಟ್‌ ನಿರ್ವಹಣೆ, ರಿಪೇರಿ ಹಾಗೂ ಬಲೆ ಹೊಂದಿಸಿಕೊಳ್ಳುವ ಕೆಲಸವನ್ನು ಮೀನುಗಾರರು ಮಾಡುತ್ತಾರೆ. ಆ ಮೂಲಕ ನಿಷೇಧದ ನಂತರ ಮತ್ತೆ ಮೀನುಗಾರಿಕೆಗೆ ಮರಳಲು  ಸಿದ್ಧತೆ ಮಾಡಿಕೊಳ್ಳುತ್ತಾರೆ.

ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಏಕರೂಪವಾಗಿ ನಿಷೇಧ ಹೇರಿರುವುದಕ್ಕೆ ಮೀನುಗಾರರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತಾನೋತ್ಪತ್ತಿ ಸಮಯದಲ್ಲಿ ಏಕರೂಪವಾಗಿ ನಿಷೇಧ ಜಾರಿ ಮಾಡಿರುವುದು ಒಳ್ಳೆಯದು. ಮತ್ಸ್ಯ ಸಂಪತ್ತು ಹೆಚ್ಚಿದರೆ ಮೀನುಗಾರಿಕೆ ಪ್ರಮಾಣವೂ ಜಾಸ್ತಿಯಾಗುತ್ತದೆ. ಆದಾಯವೂ ಹೆಚ್ಚಾಗುತ್ತದೆ ಎನ್ನುತ್ತಾರೆ ಮೀನುಗಾರರು.

Leave a Reply