ಉಡುಪಿ: ಮುಸ್ಲಿಂ ಅಭ್ಯರ್ಥಿಗಳಿಗೆ ಯಾರೂ ಮತ ಹಾಕುವುದಿಲ್ಲ ಹೇಳಿಕೆ ನೀಡಿಲ್ಲ : ವಿನಯ್ ಕುಮಾರ್ ಸೊರಕೆ

ಉಡುಪಿ: ಮುಸ್ಲಿಂ ಅಭ್ಯರ್ಥಿಗಳಿಗೆ ಯಾರೂ ಮತ ಹಾಕುವುದಿಲ್ಲ ಎಂದು ನನ್ನ ವಿರುದ್ದ ಮಾಡಿರುವ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

vinaykumarsorake-08-02-2016

ಕೆಲವೊಂದು ಮಾಧ್ಯಮಗಳಲ್ಲಿ ತಾನು ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷದ ಸಭೆಯಲ್ಲಿ ಹಗುರವಾಗಿ ಮಾತನಾಡಿದ್ದೇನೆ ಎಂದು ಪ್ರಕಟವಾಗಿದ್ದು ಈ ಕುರಿತು ಅವರು ಸೋಮವಾರ ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ 100% ಮತದಾರರು ಅವರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಕೆಲವು ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುತ್ತಿದ್ದಾರೆ. ಅಂತಹ ಹೇಳಿಕೆ ನೀಡಲು ನನಗೆ ತಲೆ ಕಟ್ಟಿಲ್ಲ, ನನ್ನ ವಿಧ್ಯಾರ್ಥಿ ಜೀವನದಿಂದಲೂ ಕೂಡ ತಾನು ಜಾತ್ಯಾತಿತ ನಿಲುವನ್ನು ಹೊಂದಿದವನಾಗಿದ್ದು, ಅದನ್ನೇ ನಂಬಿಕೊಂಡು ಬಂದವನು. ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ ಕೂಡ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ, ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ಹೋರಾಟ ನಡೆಸಿಕೊಂಡು ಬಂದವನು . ಪುತ್ತೂರಿನಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಬಾಬರಿ ಮಸೀದಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ನೋವುಂಟಾಗಿತ್ತು ಆ ಸಂದರ್ಭದಲ್ಲಿ ಕೂಡ ನನಗೆ ಅಲ್ಪಸಂಖ್ಯಾತರು 100% ಮತ ನೀಡಿ ಗೆಲ್ಲಿಸಿದ್ದಾರೆ. ಅದೇ ರೀತಿ ನಂತರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೋರ್ವರು ಮದನಿ ಗುರುಗಳನ್ನು ಕರೆತಂದರು ಸುಮಾರು 10000 ಜನ ಅವರ ಸಮಾವೇಶದಲ್ಲಿ ಸೇರಿದ್ದು, ಕಾಂಗ್ರೆಸಿಗೆ ವೋಟು ಹಾಕಬಾರದು ಎಂದು ಕೈಎತ್ತಲು ಹೇಳಿದಾಗ ಕೂಡ ಒಬ್ಬನೇ ಒಬ್ಬ ಅಲ್ಪಸಂಖ್ಯಾತ ಮುಸ್ಲಿಂ ಸಹೋದರ ಕೂಡ ಕೈ ಎತ್ತಿಲ್ಲ.

ಎನ್ ಎಸ್ ಯು ಐ ಅಧ್ಯಕ್ಷನಾಗಿದ್ದ ವೇಳಿ ನನ್ನ ಬಳಿಕ ಅದರ ಅಧ್ಯಕ್ಷ ಹುದ್ದೆಗೆ ನನ್ನ ರಾಜೀನಾಮೆ ಪತ್ರದಲ್ಲಿ ಸಲೀಂ ಮೊಹಮ್ಮದ್ ಅವರ ಹೆಸರನ್ನು ಉಲ್ಲೇಖೀಸಿದ್ದೆ. ನನ್ನ ಶಿಫಾರಸಿನಿಂದಾಗಿಯೇ ಸಲಿಂ ಮೊಹಮ್ಮದ್ ನಂತರ ಅಧ್ಯಕ್ಷರಾದರು. ಜಿಲ್ಲೆಯಲ್ಲಿ ಸರಕಾರ ಬಂದ ಮೇಲೆ ನಿಗಮದ ಅಧ್ಯಕ್ಷರಾಗುವ ಸಂದರ್ಭದಲ್ಲಿ ಎರಡು ಅಲ್ಪಸಂಖ್ಯಾತ ವ್ಯಕ್ತಿಗಳನ್ನು ನಾವು ಆಯ್ಕೆಮಾಡಿದ್ದೇವೆ ಅದರಂತೆ ವೆರೋನಿಕಾ ಕರ್ನೆಲಿಯೊ ಹಾಗೂ ಎಮ್ ಎ ಗಫೂರ್ ಅವರನ್ನು ಸರಕಾಕ್ಕೆ ಶಿಫಾರಸು ಮಾಡಿದ್ದೆ. ಆಗ ಬಹುಸಂಖ್ಯಾತರು ಕೂಡ ನನ್ನ ಬಗ್ಗೆ ಟೀಕೆ ಮಾಡಿದ್ದರು ಆದರೆ ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳದೆ ಎಲ್ಲಿ ಎಲ್ಲಾ ಅವಕಾಶ ಸಿಗುವುದೋ ಅಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ.

ಜಿಲ್ಲೆಯಲ್ಲಿ ತಾಪಂ ಜಿಪಂ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಯಾ ಕ್ಷೇತ್ರದ ಶಾಸಕರೇ ಆಯಾ ಕ್ಷೇತ್ರಕ್ಕೆ ಹೊಂದಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸ ಮಾಡಿದ್ದಾರೆ ನಾನು ಯಾವುದೇ ಕ್ಷೇತ್ರದಲ್ಲಿ ಹಸ್ತಕ್ಷೇಪವನ್ನು ಮಾಡಲು ಹೋಗಿಲ್ಲ. ನಮ್ಮ ಕ್ಷೇತ್ರದ ಆಯ್ಕೆ ಮಾಡುವ ಸಂದರ್ಭದಲ್ಲಿ ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಆಧಾರಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗಿದೆ ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಪರಿಪೂರ್ಣವಾಗಿ ಎಲ್ಲರಿಗೂ ಸಮಾಧಾನವಾಗಿದೆ ಎನ್ನಲು ಸಾಧ್ಯವಿಲ್ಲ. ಕಳೆದ ಜಿಪಂ ತಾಪಂ ಚುನಾವಣೆಯಲ್ಲಿ ಕೂಡ ಮುಸ್ಲಿಂ ಸಮುದಾಯಕ್ಕೆ ಅವಕಾಶ ಸಿಕ್ಕಿರಲಿಲ್ಲ ಈ ವರ್ಷ ಕೂಡ ಹಾಗೆ ಆಗಬಾರದು ಎನ್ನುವ ಉದ್ದೇಶದಿಂದ ಅವರು ಅರ್ಜಿ ಹಾಕದೆ ಹೋದರು ಕೂಡ ತಾವು ವೈಯುಕ್ತಿವಾಗಿ ಅಪೇಕ್ಷೆ ಪಟ್ಟು ನಮ್ಮ ಕ್ಷೇತ್ರದಲ್ಲಿ ಇಬ್ಬರು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದೇವೆ. ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ನಿಲ್ಲಿಸಿದೆ. ಗೆಲುವು ಕೂಡ ಮುಖ್ಯ ಎನ್ನುವ ನಿಟ್ಟಿನಲ್ಲಿ ಶಿರ್ವ 14 ಹಾಗೂ ಪಡುಬಿದ್ರಿಯಲ್ಲಿ 12 ಜನ ಅರ್ಜಿಯನ್ನು ಹಾಕಿದ್ದರು ಆದರೆ ಒಮ್ಮತದ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಗುಣವಾಗಿಯೇ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿದ್ದು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಸುಳ್ಳು ಅಭಿಪ್ರಾಯಗಳನ್ನು ಅಲ್ಪಸಂಖ್ಯಾತರಲ್ಲಿ ಹೇರುತ್ತಿದ್ದಾರೆ. ನನ್ನ ಮೇಲೆ ಇಂತಹ ಆರೋಪ ಮಾಡುವುದು ಪ್ರಥಮವಲ್ಲ ಈ ಮೊದಲು ವಕ್ಫ್ ಅಧ್ಯಕ್ಷರ ನೇಮಕ ಮಾಡುವ ಸಂದರ್ಭದಲ್ಲಿ ಕೂಡ ನನ್ನ ಮೇಲೆ ಆರೋಪ ಬಂದಿತ್ತು. ಏಕಾಎಕಿ ಬೇರೆ ಪಕ್ಷದ ವ್ಯಕ್ತಿಯನ್ನು ನಾನು ನೇಮಕ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು ಆದರೆ ನನಗೆ ಈ ವಿಷಯ ಗೊತ್ತೆ ಇರಲಿಲ್ಲ ಅದೇ ರೀತಿ ಕಾಪುವಿನಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಕೂಡ ಕೆಲವೊಂದು ಮಾಧ್ಯಮಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳು ವಿಘ್ನ ಸಂತೋಷಿಗಳು ಸುದ್ದಿ ಹಬ್ಬಿಸಿದ್ದರು. ಪಕ್ಷದ ಜವಾಬ್ದಾರಿ ಹುದ್ದೆಯಲ್ಲಿದವರು ಕೂಡ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಿಗೆ ದಾರಿ ತಪ್ಪಿಸುವುದು ಸರಿಯಲ್ಲ. ಇದರಿಂದ ಅವರು ಲಾಭ ಮಾಡಿಕೊಡುತ್ತಿರುವುದು ಬೇರೆ ಪಕ್ಷಗಳಿಗೆ ಎನ್ನುವುದು ಅವರು ತಿಳಿದುಕೊಳ್ಳಬೇಕು. ಅಲ್ಪಸಂಖ್ಯಾತರ ಬಗ್ಗೆ ಕಳೆದ 2 ವರ್ಷಗಳಿಂದ ಕಾಳಜಿಯನ್ನು ಮಾಡಿದ್ದು, ನಾನು ಮಾಡಿದ ಕೆಲಸ ಪ್ರತಿಯೊಂದು ಅಲ್ಪಸಂಖ್ಯಾತರಿಗೆ ತಿಳಿದಿದೆ. ನೆರೆಯ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಜರುಗಿದರೂ ಕೂಡ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರ ಸಹಕಾರದಿಂದ ಶಾಂತಿಯಿಂದ ಬದುಕಲು ಸಹಕಾರಿಯಾಗಿದೆ. ಇದೇ ವಾತಾವರಣ ಮುಂದುವರೆಯಬೇಕು ಎನ್ನುವುದು ನಮ್ಮ ಅಪೇಕ್ಷೇ ಕೇವಲ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶದಿಂದ ಕೆಲವೊಂದು ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿರುವುದು ನೂರಕ್ಕೆ ನೂರು ಸತ್ಯ. ನಾನು ಅಂತಹ ಯಾವುದೇ ಅಲ್ಪಸಂಖ್ಯಾತರ ವಿರೋಧಿಯಾದ ಹೇಳಿಕೆಯನ್ನು ನೀಡಿಲ್ಲ ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಒಳ್ಳೆಯ ವಾತಾವರಣ ಇದೆ ಕಳೆದ ಬಾರಿ ಜಿಪಂ ನಮ್ಮ ಆಡಳಿತದಿಂದ ಕೈ ತಪ್ಪಿತ್ತು ಈ ಬಾರಿ ಅದನ್ನು ಪಡೆಯುವಲ್ಲಿ ಸಫಲರಾಗಲಿದ್ದೇವೆ. ತಾಪಂ ನಲ್ಲಿ ಕೂಡ ನಮಗೆ ಅಧಿಕಾರ ಇರಲಿಲ್ಲ ಈ ಬಾರಿ ಜಿಲ್ಲೆಯ ಮೂರು ತಾಪಂನಲ್ಲಿ ಕೂಡ ಅಧಿಕಾರ ಪಡೆಯಲಿದ್ದೇವೆ. ಸಿದ್ದರಾಮಯ್ಯ ಸರಕಾರದ ಒಳ್ಳೆಯ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಮಾಜಿ ಸಂಸದ ಹಾಗೂ ಕಾಂಗ್ರೆಸ್ ಉಚ್ಚಾಟಿತ ನಾಯಕ ಜಯಪ್ರಕಾಶ್ ಹೆಗ್ಡೆಯವರ ಬೆಂಬಲಿಗರು ಚುನಾವಣೆಗೆ ನಿಂತರೂ ಕೂಡ ಯಾವುದೇ ಸಮಸ್ಯೆ ಆಗುವುದಿಲ್ಲ ಹೆಗ್ಡೆಯವರು ಪಕ್ಷೇತರ ಶಾಸಕರಾಗಿದ್ದ ವೇಳೆ ಕೂಡ ಕಾಂಗ್ರೆಸ್ 24 ಕ್ಷೇತ್ರಗಳನ್ನು ಗೆದ್ದಿದೆ ಕಾಂಗ್ರೆಸ್ ಪಕ್ಷದ ಶಕ್ತಿ ಎಲ್ಲರಿಗೂ ತಿಳಿದಿದೆ ಜಿಲ್ಲೆಯ ಸರ್ವತೋಮುಕ ಅಭಿವೃದ್ಧಿಗೆ ನಾವು ಕೆಲಸ ಮಾಡಿದ್ದೇವೆ ಇದನ್ನು ಜನರು ಗಮನಿಸಿದ್ದಾರೆ ಎಂದರು.

ವಿನಯ್ ಕುಮಾರ್ ಸೊರಕೆಯವರು ಕಾಪು ರಾಜೀವ್ ಭವನದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಜಿಪಂ ಚುನಾವಣೆಯ ಟೀಕೆಟ್ ನೀಡದೆ ಇರುವುದನ್ನು ಸಮರ್ಥಿಸಿ ಕೊಂಡು ಮುಸ್ಲಿಂ ಅಭ್ಯರ್ಥಿಗಳಿಗೆ ಯಾರೂ ಮತ ಹಾಕುವುದಿಲ್ಲ ಎಂಬ ಹಿನ್ನಲೆಯಲ್ಲಿ ಟಿಕೆಟ್ ನೀಡಿಲ್ಲ ಎಂಬುದಾಗಿ ಮಾತನಾಡಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಬೇಸರಗೊಂಡ ಕೆಲವೊಂದು ಮುಸ್ಲಿಂ ರಾಜಕೀಯ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಜಿಪಂನ 26 ಕ್ಷೇತ್ರಗಳಲ್ಲಿ 13 ಬಿಲ್ಲವ, ತಲಾ ಒರ್ವ ಕ್ರಿಶ್ಚಿಯನ್, ಮೊಗವೀರ, ಬಂಟ ಸಮುದಾಯದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಕಣಕ್ಕೆ ಇಳಿಸಿದ್ದು, ಆದರೆ ಒಂದು ಕ್ಷೇತ್ರದಲ್ಲಿಯೂ ಕೂಡ ಮಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಲ್ಲ ಎಂದು ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೂ ಕೂಡ ಮುಸ್ಲಿಂ ನಾಯಕರು ದೂರು ನೀಡಿದ್ದರು ಎಂದು ಮೂಲಗಳು ಹೇಳಿಕೊಂಡಿದ್ದರು.

Leave a Reply

Please enter your comment!
Please enter your name here