ಉಡುಪಿ :ಸೆಟ್‌ಟಾಪ್ ಅಳವಡಿಕೆ ದಿನಾಂಕ ವಿಸ್ತರಣೆಗೆ ಆಗ್ರಹ

ಉಡುಪಿ : ನಗರಪ್ರದೇಶಗಳಿಗೆ ಮೂರನೆ ಹಂತದ ಸೆಟ್‌ಟಾಪ್ ಬಾಕ್ಸ್ ಅಳವಡಿಸಲು ಡಿ.31 ಕೊನೆಯ ದಿನವಾಗಿದ್ದು, ಇದೀಗ ಸೆಟ್‌ಟಾಪ್ ಬಾಕ್ಸ್‌ಗಳ ಕೊರತೆಯ ಹಿನ್ನೆಲೆಯಲ್ಲಿ ಆ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಬೇಕು ಎಂದು ಉಡುಪಿಯ ಡೆನ್ ಯುಸಿಎನ್ ನೆಟ್‌ವರ್ಕ್‌ನ ಪಾಲುದಾರ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಎಂಎಸ್‌ಓನಲ್ಲಿ ಕೇವಲ ಉಡುಪಿ, ಸಾಲಿಗ್ರಾಮ, ಕುಂದಾಪುರ, ಮುಲ್ಕಿ, ಸುರತ್ಕಲ್ ಮಾತ್ರ ಸರಕಾರದ ಆದೇಶದಂತೆ ಪಟ್ಟಣ ಪ್ರದೇಶವಾಗಿದ್ದು, ಉಳಿದೆಲ್ಲ ಪ್ರದೇಶಗಳು ಗ್ರಾಮಾಂತರ ವ್ಯಾಪ್ತಿಗೆ ಬರುತ್ತವೆ. ಈಗಾಗಲೇ ಪಟ್ಟಣ ಪ್ರದೇಶದಲ್ಲಿ ಶೇ.80ರಷ್ಟು ಹಾಗೂ ಗ್ರಾಮಾಂತರದಲ್ಲಿ ಶೇ.20ರಷ್ಟು ಸೆಟ್‌ಟಾಪ್ ಬಾಕ್ಸ್ ಅಳವಡಿಸಲಾಗಿದೆ ಎಂದರು.
ಸರಕಾರದ ಆದೇಶದಂತೆ ಗ್ರಾಮಾಂತರ ಪ್ರದೇಶಗಳಿಗೆ ಸೆಟ್‌ಟಾಪ್ ಬಾಕ್ಸ್ ಅಳವಡಿಸಲು ಇನ್ನು ಒಂದು ವರ್ಷ ಕಾಲಾವಕಾಶ ಇದೆ. ಆದರೆ ಎಂಎಸ್‌ಓ ಪಟ್ಟಣ ಪ್ರದೇಶದಲ್ಲಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಸೆಟ್‌ಟಾಪ್ ಬಾಕ್ಸ್ ಅಳವಡಿಸುವುದು ಅನಿವಾರ್ಯವಾಗಿದೆ. ಆರ್ಥಿಕ ಸಮಸ್ಯೆ, ಸೆಟ್‌ಟಾಪ್ ಬಾಕ್ಸ್‌ಗಳ ಕೊರತೆಯಿಂದ ಸೆಟ್‌ಟಾಪ್ ಅಳವಡಿಸಲು ಅಡಚಣೆಯಾಗಿದೆ ಎಂದು ಅವರು ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಿ ಅವಧಿ ವಿಸ್ತರಿಸಲು ಕೋರಲಾಗಿದೆ. ಡಿ.31ರ ನಂತರ ಜಿಲ್ಲೆಯ ಬಹಳಷ್ಟು ಮನೆಗಳು ಕೇಬಲ್ ಟಿವಿಯಿಂದ ವಂಚಿತವಾಗಲಿವೆ. ಆದುದರಿಂದ ಕೇಬಲ್ ಗ್ರಾಹಕರು ಸಾಧ್ಯವಾದಷ್ಟು ಸೆಟ್‌ಟಾಪ್ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸುದಿಗೋಷ್ಠಿಯಲ್ಲಿ ಯುಸಿಎನ್ ಪಾಲುದಾರರಾದ ಜಯಲಕ್ಷ್ಮೀ ಅಮೀನ್, ಎರಿಕ್ ಸಲ್ದಾನ, ಯುಜ್ಞೇಶ್ ಐತಾಳ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here