ಉಡುಪಿ: ಸೆಪ್ಟಂಬರ್ 11 ರಂದು ಜಿಲ್ಲೆಗೆ ರೈತ ಚೈತನ್ಯ ರಥಯಾತ್ರೆ

ಉಡುಪಿ: ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆ, ಬರ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯ ಇತ್ಯಾದಿ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಈಗಾಗಲೇ ಆರಂಭಗೊಂಡಿರುವ ಬಿಜೆಪಿ ರೈತ ಚೈತನ್ಯ ರಥ ಯಾತ್ರೆ ಈ ತಿಂಗಳ 11ರಂದು ಉಡುಪಿಗಾಗಮಿಸಲಿದೆ. ಇಲ್ಲಿನ ಶ್ಯಾಮಿಲಿ ಸಭಾಂಗಣದೆದುರಿನ ಮೈದಾನಿನಲ್ಲಿ ಸಮಾವೇಶಗೊಳ್ಳಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ರೈತರ ಸಮಸ್ಯೆಗಳಾದ ಪಹಣಿಪತ್ರ ವಿತರಣೆ ಗೊಂದಲ, ಸಕಾಲಕ್ಕೆ ಬೆಂಬಲ ಬೆಲೆ ನೀಡದಿರುವುದು, ಕುಂಮ್ಕಿ ಭೂಮಿ ಹಕ್ಕು, 94 ಸಿ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು. ವಿವಾದಿತ ಆದಾನಿ ಯುಪಿಸಿಎಲ್ ವಿಸ್ತರಣೆ ಬಗ್ಗೆ ಸ್ಥಳೀಯರ ವಿರೋಧ ಬಗ್ಗೆ ಸಹಮತ ವ್ಯಕ್ತಪಡಿಸಲಾಗುವುದು.

ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಗುಜರಾತ್ ಸಂಸದ ದಿನೇಶ ಗಾಂಧಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸುವರು ಎಂದರು.
ರಥಯಾತ್ರೆ ಸಂಚಾಲಕ ಉದಯಕುಮಾರ್ ಶೆಟ್ಟಿ, ಪಕ್ಷ ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಕುತ್ಯಾರು ನವೀನ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್, ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಶ್ಯಾಮಲಾ ಕುಂದರ್, ಶೀಲಾ ಶೆಟ್ಟಿ, ರಾಘವೇಂದ್ರ ಕಿಣಿ, ರಾಘವೇಂದ್ರ ಉಪ್ಪೂರು, ಸಂಧ್ಯಾ ರಮೇಶ್ ಮೊದಲಾದವರಿದ್ದರು.

Leave a Reply