ಎಂಡೋಸಲ್ಫಾನ್: ಸುಪ್ರೀಂ ಆದೇಶದಂತೆ ಕರ್ನಾಟಕದಲ್ಲೂ ಪರಿಹಾರಕ್ಕೆ ಡಿವೈಎಫ್‍ಐ ಒತ್ತಾಯ

ಎಂಡೋಸಲ್ಫಾನ್: ಸುಪ್ರೀಂ ಆದೇಶದಂತೆ ಕರ್ನಾಟಕದಲ್ಲೂ ಪರಿಹಾರಕ್ಕೆ ಡಿವೈಎಫ್‍ಐ ಒತ್ತಾಯ
ಕೇರಳ ರಾಜ್ಯದ ಎಂಡೋ ಸಂತ್ರಸ್ತರಿಗೆ ಪರಿಹಾರಕ್ಕೆ ಒತ್ತಾಯಿಸಿ ಡಿವೈಎಫ್‍ಐ ರಾಜ್ಯ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಡಿವೈಎಫ್‍ಐ ಕರ್ನಾಟಕ ರಾಜ್ಯ ಸಮಿತಿ ಹರ್ಷ ವ್ಯಕ್ತಪಡಿಸಿದೆ. ಹಾಗೆಯೇ ಕೇರಳದ ಸಂತ್ರಸ್ತರಿಗೆ ನೀಡಲು ಆದೇಶಿಸಿರುವ 5 ಲಕ್ಷ ಪರಿಹಾರ, ಪುನರ್ವಸತಿ ಪ್ಯಾಕೇಜ್ ಕರ್ನಾಟಕದ ಕರಾವಳಿ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಿಗುವಂತಾಗಬೇಕು. ಅದಕ್ಕಾಗಿ ಕರ್ನಾಟಕ ಸರಕಾರದ ದೃಢ ನಿರ್ಧಾರವನ್ನು ಕೈಗೊಳ್ಳಬೇಕು. ಎಂಡೋ ಕಂಪೆನಿ ಮತ್ತು ಕೇಂದ್ರ ಸರಕಾರದ ಮೇಲೆ ಇದಕ್ಕಾಗಿ ಒತ್ತಡವನ್ನು ಹೇರಬೇಕು ಎಂದು ಡಿವೈಎಫ್‍ಐ ಒತ್ತಾಯಿಸಿದೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಎಂಡೋ ಸಲ್ಫಾನ್ ಪೀಡಿತರ ಸಂಖ್ಯೆ ಕೇರಳಕ್ಕಿಂತ ಅಧಿಕವಿದೆ. ಕರ್ನಾಟಕ ಸರಕಾರ ಈ ಕುರಿತು ಸರಿಯಾದ ಸಮೀಕ್ಷೆಗಳನ್ನು ಮಾಡಿಲ್ಲ. ಸಂತ್ರಸ್ತರ ಗುರುತಿಸುವಿಕೆಯಲ್ಲಿ ವ್ಯತ್ಯಾಸಗಳಾಗಿವೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ಕೇರಳ ಮಾದರಿಯಲ್ಲಿ ಸಂತ್ರಸ್ತರ ಪಟ್ಟಿ ತಯಾರಿಸಬೇಕು. ಎಂಡೋ ಸಲ್ಫಾನ್ ಯಾವುದೇ ರೂಪದಲ್ಲಿಯೂ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಸುಪ್ರೀಂ ಕೋರ್ಟ್ ಕೇರಳಕ್ಕೆ ನೀಡಿದ ಆದೇಶವನ್ನು ಕರ್ನಾಟಕದಲ್ಲೂ ಸ್ವಯಂಪ್ರೇರಣೆಯಿಂದ ಸರಕಾರ ಪಾಲಿಸಲು ಡಿವೈಎಫ್‍ಐ ಆಗ್ರಹಿಸುತ್ತದೆ ಎಂದು ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply