ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ದಿಢೀರ್ ಭೇಟಿ

ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅಲ್ಲಿನ ಆಡಳಿತ ವರ್ಗ ಹಾಗೂ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಸಚಿವ ಖಾದರ್ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅವಲೋಕನ ಮಾಡಲು ದಿಢೀರಾಗಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿದ್ದ ವಿವಿಧ ಕುಂದುಕೊರತೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದಾಗ ಕೆಲ ನರ್ಸ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದು, ಹಾಜರಾತಿ ಹಾಕದೇ ಲೋಪವೆಸಗಿರುವುದು ಕಂಡುಬಂತು. ಮಳೆಗಾಲ ಆರಂಭವಾಗಿದೆ. ಅಲ್ಲದೇ ಸಾಂಕ್ರಾಮಿಕ ರೋಗಗಳೂ ಹೆಚ್ಚಾಗಿ ಕಾಣಿಸಿಕೊಂಡಿದ್ದರೂ ಇಲ್ಲಿನ 6 ನರ್ಸ್‌ಗಳು ಬೇಕಾಬಿಟ್ಟಿಯಾಗಿ ಒಂದೇ ಬಾರಿ ರಜಾದಲ್ಲಿ ತೆರಳಿದರು. ಇದಕ್ಕೆ ಸಚಿವ ಅಸಮಾಧಾನ ವ್ಯಕ್ತಪಡಿಸಿ ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಇಂತಹ ಘಟನೆ ಪುನರಾವರ್ತಿಸಿದಲ್ಲಿ ಸೂಕ್ತ ಕಾನೂನು ಕ್ರಮವನ್ನು ಎದುರಿಸಬೇಕಾದೀತೆಂದು ಎಚ್ಚರಿಕೆ ನೀಡಿದರು. ಆಸ್ಪತ್ರೆಯ ಒಳಾಂಗಣದಲ್ಲಿ ಕಾದು ಕುಳಿತ್ತಿದ್ದ ರೋಗಿಗಳ ಕುಶಲೋಪರಿಯನ್ನು ವಿಚಾರಿಸಿದ ಸಚಿವರು, ವಿವಿಧ ನರ್ಸಿಂಗ್ ಕಾಲೇಜಿನಿಂದ ತರಬೇತಿಗಾಗಿ ಬಂದಿದ್ದ ನರ್ಸಿಂಗ್
ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ಬರುವಂತಹ ಬಡ ರೋಗಿಗಳೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಕಿವಿಮಾತು ಹೇಳಿದರು.

ಮುಖ್ಯವೈದ್ಯಾಧಿಕಾರಿ ಡಾ. ಜ್ಞಾನೇಶ್ ಕಾಮತ್ ಅವರಲ್ಲಿ ಆಸ್ಪತ್ರೆಯ ಕುಂದುಕೊರತೆ ಹಾಗೂ ಮೂಲಭೂತಸೌಕರ್ಯಗಳ ಬಗ್ಗೆ ವಿವರ ಕೇಳಿದರು. ಮುಖ್ಯವಾಗಿ ಆಸ್ಪತ್ರೆಯಲ್ಲಿ ನರ್ಸ್ ಗಳು, ವೈದ್ಯರು, ವೈದ್ಯಕೀಯ ಉಪಕರಣ, ಔಷಧ, ಕೊಠಡಿಗಳ ಕೊರತೆ ಇಲ್ಲ. ಸೂಕ್ತ ನಿರ್ವಹಣೆ, ಆಡಳಿತಾತ್ಮಕ ಅನುಭವ ಹಾಗೂ ಕಚೇರಿ ನಿರ್ವಹಣೆಯ ಹೊಣೆಗಾರಿಕೆ ಸರಿ ಇಲ್ಲದ ಕಾರಣದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಇದೇ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಆಡಳಿತಾಧಿಕಾರಿ, ವೈದ್ಯರನ್ನು, ನರ್ಸ್‌ಗಳನ್ನು ತರಾಟೆಗೆ ತೆಗೆದುಕೊಂಡು ಬಿಸಿಮುಟ್ಟಿಸಿದ ನಂತರ ಇದೇ ಮೊದಲ ಬಾರಿಗೆ ಅಂತಹ ಕಾರ್ಯವೈಖರಿಯನ್ನು ಸಚಿವ ಯು.ಟಿ.ಖಾದರ್ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೇ ಸಂದಭರ್ದಲ್ಲಿ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಪುರಸಭಾ ಅಧ್ಯಕ್ಷೆ ರಹ್ಮತ್ ಎನ್.ಶೇಖ್. ಪುರ ಸಭಾ ಮುಖ್ಯಾಧಿಕಾರಿ ರಾಯಪ್ಪ, ಪುರಸಭಾ ಸದಸ್ಯರಾದ ಸುಭೀತ್ ಎನ್.ಆರ್. ವಿವೇಕಾನಂದ ಶೆಣೈ, ಶುಭದ ರಾವ್, ಮುಹಮ್ಮದ್ ಶರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply