ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ ಕಯ್ಯಾರ ಕಿಞ್ಞಣ್ಣ ರೈ ಇನ್ನಿಲ್ಲ

Spread the love

ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ಬಹುಭಾಷಾ ವಿದ್ವಾಂಸ ಕಯ್ಯಾರ ಕಿಞ್ಞಣ್ಣ ರೈ ಬಡಿಯಡ್ಕದ ತಮ್ಮ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ನಾಡೋಜ ಬಿರುದಾಂಕಿತರಾಗಿದ್ದ ಅವರಿಗೆ 101 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿತ್ತು.

1578288

ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ, ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸಾಕಷ್ಟು ಶ್ರಮಿಸಿದ್ದರು. ಅಲ್ಲದೆ, ಮಂಗಳೂರಿನಲ್ಲಿ ನಡೆದಿದ್ದ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಹಿನ್ನೆಲೆ:

ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915ರ ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ಯಾರ ಕಞ್ಞಣ್ಣ ರೈ ಅವರು ಉಞ್ಞಕ್ಕ ಅವರೊಂದಿಗೆ ಸಪ್ತಪದಿ ತುಳಿದು, ಬದಿಯಡ್ಕ ಪೆರಡಾಲ ಕವಿತಾ ಕುಟೀರದಲ್ಲಿ 6 ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳ ತುಂಬು ಸಂಸಾರ ತೂಗಿಸಿದರು.

ಮನೆಮಾತು ತುಳು ಆಗಿದ್ದರೂ, ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಹಿತ್ಯ ಕೃಷಿಗೆ ಮುಂದಾಗಿದ್ದರು. ತುಳುವಿನಲ್ಲಿ ಅವರು ಹಲವಾರು ಕವನಗಳು ಹಾಗೂ ಲೇಖನಗಳನ್ನು ಬರೆದಿದ್ದಾರೆ. ’ಪರಿವು ಕಟ್ಟುಜಿ, ರಡ್ಡ್ ಕಣ್ಣ್​ಡ್’ ’ಸಾರೊ ಎಸಳ್ದ ತಾಮರೆ’ ’ಲೆಪ್ಪುನ್ಯೇರ್?’ ’ಬತ್ತನೊ ಈ ಬರ್ಪನೊ’ – ರೈಗಳ ಕೆಲವು ತುಳು ಕವನಗಳು. ಅವರ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಸ್ಪರ್ಶ ತುಳು ಕವನಗಳಲ್ಲಿ ಅರಳಿಕೊಳ್ಳುತ್ತದೆ. ’ಕನ್ನಡಾಂತರ್ಗತವಾದ ತುಳು ಬದುಕ’ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ ವ್ಯಥೆಪಡುತ್ತಿದ್ದರು.

ಶಿಕ್ಷಣ: ಕಯ್ಯಾರರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಹೊಂದಿದ್ದರು. ಆನಂತರ ಎಂ.ಎ. ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿ, ಕಾಸರಗೋಡು ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸಾಮಾಜಿಕ ಬದುಕು:

ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ ಕಯ್ಯಾರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಹರಿಜನ ಸೇವಕ ಸಂಘಟನೆಗಳಲ್ಲಿ ದುಡಿದಿದ್ದರು. ಸ್ಥಳೀಯ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರಾಗಿದ್ದರು.

ಸಾಹಿತ್ಯ ಕೃಷಿ:

ಕಯ್ಯಾರ ಕಿಞ್ಞಣ್ಣ ರೈ ಅವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು, ಒಂದು ತುಳು ಕವನ ಸಂಕಲನವನ್ನು ಹೊರತಂದ್ದಿರು. ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಅವರ ಬಗ್ಗೆ ಕಯ್ಯಾರರು 3 ಗ್ರಂಥಗಳನ್ನು ಬರೆದಿದ್ದರು. ಪಂಚಮಿ ಮತ್ತು ಆಶಾನ್​ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳು ಅವರ ಲೇಖನಿಯಲ್ಲಿ ಮೂಡಿ ಬಂದಿವೆ.

ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ’ಪರಶುರಾಮ’ ಕಥೆಯನ್ನು ಬರೆದುಕೊಟ್ಟಿದ್ದರು. ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದರು.

ವಿರಾಗಿಣಿ ಇವರು ಬರೆದಿರುವ ನಾಟಕ. ದುಡಿತವೇ ನನ್ನ ದೇವರು ಎಂಬ ಆತ್ಮಕಥೆಯನ್ನು ರಚಿಸಿದ್ದರು.

ಪತ್ರಕರ್ತರಾಗಿ ದುಡಿದಿದ್ದರು: ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ೆ.

ಜನ್ಮ ಶತಮಾನೋತ್ಸವ: 2014 ರ, ಜೂನ್ 8ರಂದು ಕಯ್ಯಾರರು ಜನ್ಮ ಶತಮಾನೋತ್ಸವ ಆಚರಿಸಿಕೊಂಡಿದ್ದರು. ಅಂದೇ ಬದಿಯಡ್ಕದ ಅವರ ಮನೆಗೆ ತೆರಳಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು 2013ನೇ ಸಾಲಿನ ಪಂಪ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದ್ದರು.

***

ಗೌರವಪ್ರಶಸ್ತಿ/ಪುರಸ್ಕಾರಗಳು

*1969ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ

*1969ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

*1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

*2005 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ

*2006 ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ

*ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ


Spread the love