ಕುಂದಾಪುರ: ಕಂಡ್ಲೂರು ಶಾರದೋತ್ಸವದ ಕಟೌಟ್‌ನಲ್ಲಿ ಎಸ್ಪಿ ಭಾವಚಿತ್ರ : ಕಟೌಟ್ ತೆರವಿಗೆ ಎಸ್ಪಿ ಸೂಚನೆ

ಕುಂದಾಪುರ: ಕಂಡ್ಲೂರಿನಲ್ಲಿ ಶಾರದಾ ಮಹೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಕಟೌಟ್‌ಗಳಲ್ಲಿ ತನ್ನ ಭಾವಚಿತ್ರ ಹಾಕಿರುವುದನ್ನು ಆಕ್ಷೇಪಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಕೂಡಲೇ ಅಂತಹ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಸಂಘಟಕರಿಗೆ ಸೂಚನೆ ನೀಡಿದ ಘಟನೆ ಇಂದು ನಡೆಯಿತು.

1

ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಂಡ್ಲೂರಿ ನಲ್ಲಿ ಅ.18ರಿಂದ 23ರ ವರೆಗೆ ನಡೆಯುವ ಶಾರದೋತ್ಸವ ಸಮಾರಂಭದಲ್ಲಿ ಎಸ್ಪಿ ಅಣ್ಣಾಮಲೈ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಡ್ಲೂರು ಪರಿಸರದಲ್ಲಿ ಸುಮಾರು 5 ಕಟೌಟ್‌ಗಳಲ್ಲಿ ಎಸ್ಪಿ ಭಾವಚಿತ್ರಗಳನ್ನು ಹಾಕಲಾಗಿತ್ತು. ಅ.14ರಂದು ರಾತ್ರಿ ಬಜರಂಗದಳದ ಕಾರ್ಯಕರ್ತರಿಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಂಡ್ಲೂರಿಗೆ ಇಂದು ಭೇಟಿ ನೀಡಿದ ಎಸ್ಪಿ ಅಣ್ಣಾಮಲೈ ಈ ಕಟೌಟ್‌ಗಳನ್ನು ಗಮನಿಸಿದರು.

2

ಇದರಿಂದ ಕೆಂಡಾ ಮಂಡಲರಾದ ಅವರು ಸಂಘಟಕರನ್ನು ಕರೆದು ಅರ್ಧ ಗಂಟೆಯೊಳಗೆ ತನ್ನ ಭಾವಚಿತ್ರ ಇರುವ ಕಟೌಟ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.ಇಲ್ಲದಿದ್ದರೆ ಸಮಾರಂಭದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ತಾನು ಎಲ್ಲ ಜಾತಿ, ಧರ್ಮ ಗಳಿಗೆ ಎಸ್ಪಿಯೇ ಹೊರತು ಒಂದು ಕೋಮು ಅಥವಾ ಜಾತಿಗಲ್ಲ ಎಂದು ಖಡಕ್ ಆಗಿ ಹೇಳಿದರು. ‘ಇವುಗಳು ನಿಮ್ಮ ಮೇಲಿನ ಅಭಿಮಾನಕ್ಕೆ ಕಾರ್ಯಕರ್ತರು ತಾವೇ ಸ್ವತಃ ಹಾಕಿದ ಬ್ಯಾನರ್‌ಗಳು’ಎಂದು ಕೆಲವರು ಸ್ಪಷ್ಟನೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಮೊದಲು ನೀವು ಕಂಡ್ಲೂರಿನಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಿ. ಅದರ ನಂತರ ನನ್ನ ಮೇಲೆ ಅಭಿಮಾನ ವ್ಯಕ್ತಪಡಿಸಿ’ ಎಂದು ಹೇಳಿದರು.

ಪದೇ ಪದೇ ಕೋಮುಗಲಭೆ ನಡೆಯುವ ಕುರಿತು ಕಂಡ್ಲೂರಿನ ಜನತೆಗೆ ಬುದ್ದಿಮಾತು ಹೇಳಿದ ಎಸ್ಪಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಸ್ಪಿಯವರ ಭಾವಚಿತ್ರ ಇರುವ ಐದು ಕಟೌಟ್‌ಗಳಲ್ಲಿ ಸಂಜೆ ವೇಳೆ ನಾಲ್ಕು ಕಟೌಟ್‌ಗಳನ್ನು ತೆರವುಗೊಳಿಸಲಾಯಿತು.

Leave a Reply

Please enter your comment!
Please enter your name here