ಕುಂದಾಪುರ : ಕಾಲೇಜು ವಿದ್ಯಾರ್ಥಿನಿಯ ನಿಗೂಢ ಸಾವು : ವಿದ್ಯಾರ್ಥಿಗಳಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಕುಂದಾಪುರ: ಬೈಂದೂರಿನ ಒತ್ತಿನೆಣೆ ಸಮೀಪದ ಹೇನ್‍ಬೇರು ಎಂಬಲ್ಲಿಯ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಪ್ಲಾಂಟೇಶನ್ನಿನಲ್ಲಿ ಶವವಾಗಿ ಪತ್ತೆಯಾದ ಅಕ್ಷತಾಳ ಸಾವು ಆಕಸ್ಮಿಕವಲ್ಲ. ಅದೊಂದು ವ್ಯವಸ್ಥಿತ ಕೊಲೆ ಈ ಬಗ್ಗೆ ಕೂಲಂಕುಶ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕುಂದಾಫುರದ ಭಂಡಾರ್‍ಕಾರ್ಸ್ ಕಾಲೇಜುನ ಎಬಿವಿಪಿ ವಿದ್ಯಾರ್ಥಿಗಳು ಹಾಗೂ ಬಿಬಿಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಮೆರವಣಿಗೆಯಲ್ಲಿ ಸಾಗಿ ಕುಂದಾಪುರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

KND_JUNE.18_1(3) KND_JUNE.18_1(5)

ಬುಧವಾರ ಸಂಜೆ ಕಾಲೇಜಿನಿಂದ ತೆರಳುತ್ತಿದ್ದ ವಿದ್ಯಾರ್ಥಿನಿ ಅಕ್ಷತಾ ಮನೆ ಸಮೀಪದ ಅಕೇಶಿಯಾ ಪ್ಲಾಂಟೇಶನ್ನಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಕಳೆದ ವರ್ಷ ಜುಲೈ 12ರಂದು ಶಿರೂರಿನ ರತ್ನಾ ಕೊಠಾರಿಯ ಸಾವೂ ಇದೇ ರೀತಿ ನಡೆದಿತ್ತು. ರತ್ನಾ ಕೊಠಾರಿ ಕೊಲೆ ನಡೆದು ವರ್ಷವಾಗುತ್ತಾ ಬಂದರೂ ಆಕೆಯ ಸಾವಿಗೆ ನ್ಯಾಯ ದೊರಕಿಲ್ಲ. ಇದೀಗ ಇನ್ನೊಂದು ಕೊಲೆ ನಡೆದಿದ್ದು, ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದಿದೆ ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಆರೋಪಿಸಿದರು.

ಈ ಸಂದರ್ಭ ಎಬಿವಿಪಿ ಪ್ರಧಾನ ಕಾರ್ಯದರ್ಶಿ ಚೈತ್ರ ಮಾತನಾಡಿ, ಗಾಂಧಿ ಕಂಡ ರಾಮ ರಾಜ್ಯ ಬರಿ ಕನಸಾಗಿಯೇ ಉಳಿದಿದೆ. ಪ್ರತೀ ದಿನವೂ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ನಿಗೂಢ ಸಾವುಗಳು ಸಂಭವಿಸಿದರೂ ಇದುವರೆಗೂ ಪೊಲೀಸ್ ಇಲಾಖೆಗೆ ಸತ್ಯ ಹೊರಗೆಡಹಲು ಸಾಧ್ಯವಾಗಿಲ್ಲ. ಮೃತ ರತ್ನಾ ಕೊಠಾರಿ ಹಾಗೂ ಅಕ್ಷತಾಳ ಸಾವಿಗೆ ನ್ಯಾಯ ಒದಗಿಸುವವರೆಗೆ ಹೋರಾಟ ನಡೆಯುತ್ತದೆ ಎಂದರು.

ಎಬಿವಿಪಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಇಂದು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯುವುದು ಅಸಾಧ್ಯವಾಗಿ ತೋರುತ್ತಿದ್ದು, ಹಾಡಹಗಲೇ ಈ ರೀತಿಯ ಸಾವು ಸಂಭವಿಸುತ್ತಿದೆ. ಮುಂದೆ ಇನ್ನೆಷ್ಟು ಜೀವಗಳು ಇಂತಹಾ ಕ್ರೌರ್ಯಕ್ಕೆ ಬಲಿಯಾಗಬೇಕೋ ಇಲಾಖೆ ಹಾಗೂ ಸರ್ಕಾರ ಉತ್ತರಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಎಬಿವಿಪಿ ವಿದ್ಯಾರ್ಥಿಗಳು ತಹಸೀಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಹಾಗೂ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ಅವರಿಗೆ ಪ್ರಕರಣದ ನ್ಯಾಯಯುತ ತನಿಖೆಗೆ ಮನವಿ ಮಾಡಿದರು.

ಇದೇ ಸಂದರ್ಭ ಬಿಬಿಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಬಂದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರರಿಗೆ ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಗಾಯತ್ರಿ ನಾಯಕ್, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಕರಣದ ತನಿಖೆ ನಡೆಸಲಾಗುತ್ತದೆ. ಅಕ್ಷಾ ಸಾವಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಈ ಸಂದರ್ಭ ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಹಿಂದೂ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಹಾಗೂ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ರತ್ನಾ ಕೊಠಾರಿ ಸಾವಿನ ಬೆಂಕಿ ಆರುವ ಮೊದಲೇ ಅಕ್ಷತಾಳ ಸಾವು ಕರಾವಳಿಯನ್ನು ದಂಗುಬಡಿಸಿದೆ. 2014ರ ಜುಲೈ 12ರಂದು ನಿಗೂಢವಾಗಿ ಸಾವನ್ನಪ್ಪಿದ ರತ್ನಾ ಕೊಠಾರಿ ಮೃತದೇಹವು ಜಡಿಮಳೆಯಲ್ಲಿ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಆ ಸಂದರ್ಭವೂ ಆಕೆಯ ಬ್ಯಾಗ್ ಹಾಗೂ ಇತರ ವಸ್ತುಗಳು ಜೋಡಿಸಿಟ್ಟ ರೀತಿಯಲ್ಲಿ ಪತ್ತೆಯಾಗಿದ್ದವು. ಆ ಸಂದರ್ಭದಲ್ಲಿಯೂ ಮೇಲ್ಮುಖವಾದ ಸ್ಥಿತಿಯಲ್ಲಿಯೇ ಇದ್ದ ರತ್ನಾ ಕೊಠಾರಿಯ ದೇಹಕ್ಕೂ ಬುಧವಾರ ಶವವಾಗಿ ಪತ್ತೆಯಾದ ಅಕ್ಷತಾ ದೇವಾಡಿಗಳ ಮೃತದೇಹ ಇದ್ದ ಸ್ಥಿತಿಗೂ ಸಾಮ್ಯತೆ ಇದ್ದು, ಇದು ಒಂದೇ ರಞÂತಿಯಲ್ಲಿ ಕೊಲೆಯಾಗಿರಬಹುದು ಎಂಬುದಾಗಿ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರತ್ನಾ ಕೊಠಾರಿ ಸಾವಿನ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆದಿದ್ದರೂ ಆಕೆಯ ಸಾವಿನ ರಹಸ್ಯ ಬಯಲಾಗಿರಲಿಲ್ಲ. ಇದೀಗ ವರ್ಷ ತುಂಬುವ ಮೊದಲೇ ಇನ್ನೊಂದು ಪ್ರಕರಣ ನಡೆದಿದ್ದು, ಈಕೆಯ ಸಾವಿಗಾದರೂ ನ್ಯಾ ಸಿಗಬಹುದೇ ಎನ್ನುವ ಆತಂಕ, ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ. ಅಲ್ಲದೇ ಸರ್ಕಾರ ರತ್ನಾ ಕೊಠಾರಿ ಸಾವಿಗೆ ಪರಿಹಾರ ವಾಗಿ ಘೋಷಿಸಿದ್ದ ಮೂರು ಲಕ್ಷ ರೂಪಾಯಿ ವರ್ಷ ಸಂದರೂ ಮನೆಯವರ ಕೈಸೇರಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ಒದಗಿಸುವ ಮೂಲಕ ಜನರ ಸಂಶಯ ಬಗೆಹರಿಸಬೇಕಾಗಿದೆ ಎನ್ನುವ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ.

Leave a Reply

Please enter your comment!
Please enter your name here