ಕುಂದಾಪುರ : ಸಾಲ ಭಾಧೆಯಿಂದ ತಾಲೂಕಿನಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ

ಕುಂದಾಪುರ : ಕೃಷಿ ಸಾಲದ ಚಿಂತೆಯಿಂದ ಕೆರಾಡಿಯಲ್ಲಿ ಬುಧವಾರ ಮತ್ತೂಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಕುಂದಾಪುರ ತಾಲೂಕಿನಲ್ಲಿ ಕಳೆದ 9 ತಿಂಗಳ ಅವಧಿಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕೆರಾಡಿ ಗ್ರಾಪಂ ವ್ಯಾಪ್ತಿಯ ಹೈಯಂಗಾರ್‌ ಎಂಬಲ್ಲಿನ ರೈತ ಹೆರಿಯ ನಾಯ್ಕ (50) ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯ ಸಮೀಪದ ಗೇರುತೋಪಿನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಹೆರಿಯ ನಾಯ್ಕ ತನ್ನ ಪಾಲಿನ 2.5 ಎಕರೆ ಜಮೀನಿನಲ್ಲಿ ರಬ್ಬರ್‌ ಹಾಗೂ ಅಡಿಕೆಯನ್ನು ಬೆಳೆದಿದ್ದರು. ಇದರೊಂದಿಗೆ ಅವರು ಮಿಶ್ರ ಕೃಷಿಯನ್ನೂ ಮಾಡಿದ್ದರು. ಅವರು ಬೆಳೆಸಿದ ರಬ್ಬರ್‌ ಮರಗಳು ಟ್ಯಾಪಿಂಗ್‌ ಗೆ ಸಿದ್ಧವಾಗಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದರು ಎನ್ನಲಾಗಿದೆ. ಅಲ್ಲದೇ ಅಡಿಕೆಗೆ ಕೊಳೆರೋಗ ಬಂದು ಅಪಾರ ನಷ್ಟವಾಗಿತ್ತು ಎಂದು ಹೇಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಅವರು ಹತಾಶರಾಗಿದ್ದರು ಎಂದು ಅವರ

ಸಮೀಪವರ್ತಿಗಳು ತಿಳಿಸಿದ್ದಾರೆ. ಹೆರಿಯ ನಾಯ್ಕ ಅವರು ವಂಡ್ಸೆಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನಲ್ಲಿ 30,000ರೂ. ಹಾಗೂ ವಂಡ್ಸೆಯ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 60,000 ರೂ. ಸಾಲವನ್ನು ಹೊಂದಿದ್ದರು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ. ಅಲ್ಲದೇ ಅವರು ಒಂದು ಲಕ್ಷ ರೂ.ಗಳಿಗೂ ಅಧಿಕ ಕೈಸಾಲವನ್ನು ಹೊಂದಿದ್ದರು ಎಂದು ಅವರ ಕುಟುಂಬಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply