ಕುಮಟಾ: ಮದುವೆ ಹಣಕ್ಕಾಗಿ ದರೋಡೆಗಿಳಿದ ವರ!

Spread the love

ಕುಮಟಾ: ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯೇ ಇದೆ. ಆದರೆ, ಇಲ್ಲೊಬ್ಬ ತನ್ನ ಮದುವೆಗೆಂದು ದರೋಡೆ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಹಸೆಮಣೆ ಏರಬೇಕಾಗಿದ್ದ ವರ ಇದೀಗ ಕಂಬಿ ಎಣಿಸುವಂತಾಗಿದೆ.

1471717

ತಾಲೂಕಿನ ದೀವಗಿ ನಿವಾಸಿ ಪ್ರಶಾಂತ ಅಂಬಿಗ (27) ತನ್ನ ಮದುವೆಯ ಆಮಂತ್ರಣ ಕೊಡುವ ನೆಪದಲ್ಲಿ ಹೆಗಡೆ ಗ್ರಾಮದ ದೇವಿ ಮಡಿವಾಳ (75) ಎಂಬ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಆಕೆಯ ಮೇಲೆ ಹಲ್ಲೆ ನಡೆಸಿ ಆಭರಣ ಕಿತ್ತುಕೊಳ್ಳಲು ಯತ್ನಿಸಿ ಪರಾರಿಯಾಗಿದ್ದ. ವಿವೇಕ ಅಂಬಿಗ (25) ಎಂಬಾತ ಈತನಿಗೆ ಸಾಥ್ ನೀಡಿದ್ದ. ಹಲ್ಲೆಗೊಳಗಾಗಿ ಗಾಯಗೊಂಡಿದ್ದ ದೇವಿ ಮಡಿವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ, ಟಾಟಾ ಏಸ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ಆರೋಪಿ ಪ್ರಶಾಂತನ ಮದುವೆ ಜೂ. 4ಕ್ಕೆ ನಿಗದಿಯಾಗಿತ್ತು. ಜವಳಿ ಖರೀದಿಗೆ 60,000 ರೂ. ಬೇಕಾಗಿತ್ತು. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಈತನಿಗೆ ಬೇರೆ ಆದಾಯವಿರಲಿಲ್ಲ. ಈತನ ತಂದೆ-ತಾಯಿ ಕೂಲಿ ಮಾಡಿಕೊಂಡು ದಿನದೂಡುತ್ತಿದ್ದರು. ಮದುವೆಗೆ ಖರ್ಚಿಗೆ ಹಣ ಜೋಡಿಸಲು ವಿಫಲವಾದಾಗ ಪ್ರಶಾಂತ ದರೋಡೆ ನಡೆಸುವ ಯೋಜನೆ ಹಾಕಿದ್ದ ಎಂದು ತಿಳಿದುಬಂದಿದೆ.

ಭಾನುವಾರ ಸಂಜೆ 7ಕ್ಕೆ ತಾಲೂಕಿನ ಹೆಗಡೆ ಗ್ರಾಮಕ್ಕೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಪ್ರಶಾಂತ ತೆರಳಿದ್ದ. ಸ್ನೇಹಿತ ವಿವೇಕ ಜೊತೆಗೆ ಹೋಗಿದ್ದ ಈತ ಪರಿಚಯಸ್ಥೆ ಶೋಭಾ ಎಂಬುವವರ ಮನೆಗೆ ಹೋಗಿದ್ದಾಗ ಅವರು ಅಲ್ಲಿರಲಿಲ್ಲ. ಪಕ್ಕದಲ್ಲಿಯೇ ಇದ್ದ ವೃದ್ಧೆಯ ಮನೆಗೆ ಹೋದ ಇವರು ತಮ್ಮನ್ನು ಪರಿಚಯಿಸಿಕೊಂಡು ಬಂದ ಉದ್ದೇಶ ತಿಳಿಸಿದ್ದಾರೆ. ವರ ಬಂದಿದ್ದಾನೆಂದು ವೃದ್ಧೆ ಚಹಾ ಕೂಡ ಮಾಡಿಕೊಟ್ಟಿದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ವೃದ್ಧೆಯೊಂದಿಗೆ ಇಬ್ಬರೂ ಹರಟೆ ಹೊಡೆದಿದ್ದಾರೆ.

ನಂತರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ವೃದ್ಧೆಯ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆಕೆ ವಿರೋಧಿಸಿದಾಗ ಅಲ್ಲಿಯೇ ಇದ್ದ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ. ಈ ಆಕಸ್ಮಿಕ ಘಟನೆಯಿಂದ ಹೌಹಾರಿದ ವೃದ್ಧೆ ಕಿರುಚಿದಾಗ ಗಾಬರಿಯಿಂದ ಇಬ್ಬರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವೃದ್ಧೆಯ ಕಿರುಚಾಟದಿಂದ ಜಮಾಯಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ, ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದರು.

ಆಮಂತ್ರಣ ಪತ್ರಿಕೆ ಸುಳಿವು: ಪ್ರಶಾಂತ ನೀಡಿದ್ದ ಆಮಂತ್ರಣ ಪತ್ರಿಕೆ ಆರೋಪಿ ಗಳನ್ನು ಗುರುತಿಸಲು ಪೊಲೀಸರಿಗೆ ನೆರವಾಯಿತು. ಪ್ರಶಾಂತ್ ಬಂಧಿಸಿದ ನಂತರ ಆತ ನೀಡಿದ ಸುಳಿವಿನ ಮೇರೆಗೆ ವಿವೇಕ ಕೂಡ ಬಂಧನಕ್ಕೊಳಗಾಗಿದ್ದಾನೆ.


Spread the love