ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಗಂಭೀರ ಚಿಂತನೆ; ಪ್ರಮೋದ್ ಮಧ್ವರಾಜ್

Spread the love

ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಗಂಭೀರ ಚಿಂತನೆ; ಪ್ರಮೋದ್ ಮಧ್ವರಾಜ್

ಕಲಬುರಗಿ: ಎಲ್ಲ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆಯೂ ರಾಜ್ಯ ಕ್ರೀಡಾ ನೀತಿಯಲ್ಲಿ ಪ್ರಸ್ತಾಪಿಸಲಾಗುವುದೆಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.

ಅವರು ಮಂಗಳವಾರ ಕಲಬುರಗಿಯಲ್ಲಿ ರಾಜ್ಯ ಕ್ರೀಡಾ ನೀತಿ ರಚಿಸುವ ಸಂಬಂಧ ವಿಭಾಗಮಟ್ಟದ ಭಾಗೀದಾರರ ಅಭಿಪ್ರಾಯ ಸಂಗ್ರಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲೇ ಈ ಕ್ರೀಡಾ ವಿಶ್ವವಿದ್ಯಾಲಯ ಪ್ರಾರಂಭಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದರು.

pramod-kalburgi-visit-00

ಕ್ರೀಡಾ ವಸತಿ ಶಾಲೆಗಳಲ್ಲಿ 10ನೇ ತರಗತಿ ಅಥವಾ ಪಿ.ಯು.ಸಿ. ವರೆಗೆ ಅವಕಾಶ ನೀಡುವ ಬಗ್ಗೆ ಅಭಿಪ್ರಾಯಕ್ಕೆ ಉತ್ತರಿಸಿದ ಸಚಿವರು ರಾಜ್ಯದಲ್ಲಿರುವ ಎಲ್ಲ ಕ್ರೀಡಾ ವಸತಿ ಶಾಲೆಗಳನ್ನು ಈಗಾಗಲೇ 10ನೇ ತರಗತಿವರೆಗೆ ಮೇಲ್ದರ್ಜೆಗೇರಿಸಲಾಗಿದೆ. ಎಲ್ಲ ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳ ಹಾಗೂ ಕ್ರೀಡಾ ಇಲಾಖೆ ಎಲ್ಲ ಉಪಕರಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಸದ್ಬಳಕೆ ಹಾಗೂ ಕ್ರೀಡಾ ವಸತಿ ಶಾಲೆಗಳಲ್ಲಿ ನೀಡಲಾಗುವ ಆಹಾರ ನಿಗದಿಪಡಿಸುವ ಬಗ್ಗೆ ನುರಿತ ಆಹಾರ ತಜ್ಞರಿಂದ ವರದಿ ಪಡೆಯಲಾಗುವುದು ಎಂದು ತಿಳಿಸಿದರು.

ರಾಜ್ಯದ ಕ್ರೀಡಾ ಭವಿಷ್ಯಕ್ಕೆ ಪೂರಕವಾಗುವ ಹಾಗೂ ಕ್ರೀಡಾಪಟುಗಳ ಜೀವನಕ್ಕೂ ಉಪಯೋಗವಾಗುವಂತಹ ಸಮಗ್ರ ಕ್ರೀಡಾ ನೀತಿ ರಚಿಸಲು ಕಲಬುರಗಿ, ಬೆಳಗಾವಿ, ಮೈಸೂರು, ಬೆಂಗಳೂರು, ಉಡುಪಿಗಳಲ್ಲಿಯೂ ಇಂತಹ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಲಾಗುವುದು. ಮೊದಲನೇ ಸಭೆಯನ್ನು ಕಲಬರಗಿಯಲ್ಲಿ ಆಯೋಜಿಸಲಾಗಿದೆ ಎಂದರು.

ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳೊಂದಿಗೆ ಪಾಲಕರಿಗೂ ಅವಕಾಶ ನೀಡುವ, ಕ್ರೀಡೆಗಳನ್ನು ಮುಂದುವರೆಸುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಮಂಜೂರಾತಿ, ಕರಾಟೆ ಪ್ರೋತ್ಸಾಹಕ್ಕಾಗಿ ವಿವಿಧ ವಸತಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರ ನೇಮಕಾತಿ, ಹಗ್ಗದ ಆಟ ದೇಸಿ ಕ್ರೀಡೆಗೆ ಉತ್ತೇಜನ, ಎಂಎಲ್‍ಎ., ಎಂಎಲ್‍ಸಿ ಅವರ ಅನುದಾನದಲ್ಲಿ ಕ್ರೀಡೆಗಾಗಿ ಹಣ ಮೀಸಲಾತಿ, ಕ್ರೀಡಾರತ್ನ ಪ್ರಶಸ್ತಿ, ಪ್ರಾಥಮಿಕ ಶಾಲಾ ಹಂತದಿಂದಲೇ ಕ್ರೀಡೆ ಕಡ್ಡಾಯಗೊಳಿಸುವ, ಗ್ರಾಮ ಪಂಚಾಯಿತಿ ಹಂತದಲ್ಲಿ ಕ್ರೀಡಾ ಮೈದಾನ ನಿರ್ಮಾಣ, ಹೈದ್ರಾಬಾದ್ ಕರ್ನಾಟಕದ ಭಾಗಕ್ಕೆ ಹೆಚ್ಚಿನ ಅನುದಾನ ನಿಗದಿಪಡಿಸುವ, ಪ್ರತಿ ಜಿಲ್ಲೆಗೆ ಡೈಟಿಶಿಯನ್ ಮತ್ತು ಫಿಜಿಯೋಥೆರಪಿಸ್ಟ್ ಹಾಗೂ ಪ್ರತಿ ತಾಲೂಕಿಗೆ ಥೆರಪಿಸ್ಟ್ ಒದಗಿಸುವ, ಕ್ರೀಡಾ ತರಬೇತುದಾರರನ್ನು ಬಿ ಗ್ರೇಡ್ ಶ್ರೇಣಿ ವೇತನ ನಿಗದಿಪಡಿಸಿ ಶಾಶ್ವತ ತರಬೇತಿದಾರರನ್ನು ನೇಮಕಾತಿ ಮುಂತಾದ ಹಲವಾರು ವಿಷಯಗಳನ್ನು ರಾಜ್ಯ ಕ್ರೀಡಾ ನೀತಿಯಲ್ಲಿ ಅಳವಡಿಸಲು ಸಭೆಯಲ್ಲಿ ಬೀದರ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಿಂದ ಆಗಮಿಸಿದ ಭಾಗೀದಾರರು (ಸ್ಟೇಕ್ ಹೋಲ್ಡರ್ಸ್) ಪ್ರಾಸ್ತಾಪಿಸಿದರು.

ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ ಅಗರವಾಲ ಮತ್ತಿತರರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


Spread the love