ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದ ಹಾಗೆ : ಸ್ಟೀವನ್ ಕುಲಾಸೊ

278

ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದ ಹಾಗೆ : ಸ್ಟೀವನ್ ಕುಲಾಸೊ

ಉಡುಪಿ: ದೇಶವನ್ನು ಪ್ರೀತಿಸುವಷ್ಟೇ ಕ್ಷೇತ್ರವನ್ನೂ ಪ್ರೀತಿಸುವ ಪ್ರಮೋದ್ ಮಧ್ವರಾಜ್ ನಮ್ಮೆಲ್ಲರ ಆಯ್ಕೆಯಾಗಬೇಕು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಮ್ಮದೇ ಭಾಗದ ಸಂಸದರು ಆಯ್ಕೆಯಾಗಬೇಕೆ ಹೊರತು, ಬೇರೆ ಕಡೆಯಿಂದ ಬಂದು ಇಲ್ಲಿ ಸಂಸದರಾಗಿ ಆಯ್ಕೆಯಾದರೆ ಈ ಭಾಗದ ಜನರ ಸಮಸ್ಯೆಗಳಿಗೆ ದನಿಯಾಗುವ ಮನಸ್ಸು ಅವರು ಮಾಡುವುದಿಲ್ಲ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಹೇಳಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಆಯ್ಕೆಯಾದ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಮೀಸಲಿಟ್ಟದ್ದು ಕೇವಲ 35 ದಿನಗಳು ಮಾತ್ರ. ಕ್ಷೇತ್ರದ ಜನತೆಗೆ ಮಾತ್ರವಲ್ಲದೆ ಅವರದೇ ಪಕ್ಷದ ಕಾರ್ಯಕರ್ತರಿಗೆ ಸಹ ಸಿಗದ ಶೋಭಾ ಅವರು ಈ ಕ್ಷೇತ್ರದ ಅಭಿವೃದ್ದಿಯನ್ನು ಮಾಡುವುದಾದರೂ ಹೇಗೆ?? ಆದರೆ ಪ್ರಮೋದ್ ಮಧ್ವರಾಜ್ ಅವರು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಪ್ರಥಮ ಅವಧಿಯಲ್ಲೇ 2000 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಲ್ಲದೆ ಪ್ರಮೋದ್ ಅವರು ಸ್ವತಃ ಕ್ಷೇತ್ರದಲ್ಲೇ ಇದ್ದು ಪಕ್ಷಾತೀತವಾಗಿ, ಧರ್ಮಾತೀತವಾಗಿ ಕೆಲಸ ಮಾಡಿ ಜನಮೆಚ್ಚುಗೆ ಪಡೆದವರಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನಗೆ ಸೋಲುಂಟಾದರೂ ಕೂಡ, ಜನರಿಂದ ದೂರ ಹೋಗದೆ ಅವರ ಅವಧಿಯಲ್ಲಿ ಬಾಕಿ ಉಳಿದ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾದವರಾಗಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಪಕ್ಷಾತೀತವಾಗಿ ಅದನ್ನು ಬಗೆಹರಿಸಿದ ಕೀರ್ತಿ ಪ್ರಮೋದ್ ಅವರದ್ದು. ರಾಜ್ಯದ ಕ್ರೀಡಾ ಸಚಿವರಾಗಿದ್ದ ವೇಳೆ ಎಲ್ಲಾ ಸಮುದಾಯದ ಹಾಗೂ ಪಕ್ಷದ ಯುವಜನರಿಗೆ ಕ್ರೀಡಾ ಕಿಟ್ ನೀಡಿದ್ದು ಅವರು ಸೇವೆಯ ಪರಿಯನ್ನು ತೋರಿಸುತ್ತದೆ.

ಪ್ರಮೋದ್ ಅವರು ಯಾವುದೇ ರೀತಿಯ ಜಾತಿ ಮತ ಭೇದವಿಲ್ಲದೆ ಎಲ್ಲಾ ಸಂಘಸಂಸ್ಥೆಗಳಿಗೆ ರಾಜ್ಯ ಸರಕಾರದ ಅನುದಾನ ತಂದು ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ತನ್ನ ಸ್ವಂತ ದುಡಿಮೆಯಿಂದ ಸಮಾಜಕ್ಕೆ ಸಹಾಯ ಮಾಡುವ ಉತ್ತಮ ಗುಣ ಹೊಂದಿರುವ ನಾಯಕ ಪ್ರಮೋದ್ ಮಧ್ವರಾಜ್. ಶಾಸಕನಾಗುವ ಮೊದಲು ಮತ್ತು ಬಳಿಕವೂ ನೊಂದ ಕುಟುಂಬಗಳಿಗೆ ಆಸರೆಯಾಗಿದ್ದು, ಶಾಸಕತ್ವದ ಬಳಿಕವೂ ಅದನ್ನು ಅವರು ಮುಂದುವರೆಸಿಕೊಂಡು ಹೋಗಿದ್ದಾರೆ.

ಕಳಂಕರಹಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಹೆಸರುವಾಸಿಯಾದ ಪ್ರಮೋದ್ ಈ ಕ್ಷೇತ್ರದ ಸಂಸದರಾದರೆ, ದೇಶದಲ್ಲಿ ನಂಬರ್ ವನ್ ಕ್ಷೇತ್ರವಾಗಿ ಅಭಿವೃದ್ಧಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಾವೆಲ್ಲರೂ ದೇಶವನ್ನು ಎಷ್ಟು ಪ್ರಿತೀಸುತ್ತೇವೆಯೊ, ಅದೇ ರೀತಿಯಲ್ಲಿ ಮೋದಿ ದೇಶದ ಪ್ರಧಾನಿಯಾಗಬೇಕು ಎಂಬ ಆಸೆಯನ್ನು ಹೊಂದಿರುತ್ತೆವೆಯೋ, ಅಂತೆಯೇ ನಮಗೆ ಕ್ಷೇತ್ರದ ಬಗ್ಗೆ ಕೂಡ ಪ್ರೀತಿ ಇರಬೇಕು. ಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿಗೆ ಅದು ಪೂರಕವಾಗುತ್ತದೆ.

ಈಗಾಗಲೇ ಐದು ವರ್ಷ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ನೀಡಿ ನೋಡಿದ್ದೇವೆ ಈ ಬಾರಿ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ನೀಡಿ ನೋಡೋಣ. ಅವರು ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿಯ ಪರ ಕೆಲಸ ಮಾಡುವುದರಲ್ಲಿ ಯಾವುದೇ ರೀತಿಯ ಸಂಶವಿಲ್ಲ. ಭಾರತ ದೇಶದ ಪ್ರಜಾಪ್ರಭುತ್ವದ ಪ್ರಕಾರ ಸಂಸದರನ್ನು ಆಯ್ಕೆ ಮಾಡುವುದು ಆ ಕ್ಷೇತ್ರದ ಮತದಾರ ಪ್ರಭುಗಳು. ಆಯ್ಕೆಯಾದ ಸಂಸದರು ಯೋಗ್ಯ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ದೇಶಕ್ಕೆ ಯೋಗ್ಯ ಪ್ರಧಾನಿ ಆಯ್ಕೆಯಾಗಬೇಕೆಂಬ ಪ್ರೀತಿ ಇರುವ ನಾವು, ಕ್ಷೇತ್ರಕ್ಕೂ ಯೋಗ್ಯ, ಅಭಿವೃದ್ಧಿ ಮಾಡುವ ಮತ್ತು ನಮ್ಮೂರ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಜಾತಿ ಮತ ಭೇದವಿಲ್ಲದೇ ಸದಾ ಜನ ಸೇವೆಯಲ್ಲಿ ತೊಡಗಿರುವ ಪ್ರಮೋದ್ ಮಧ್ವರಾಜ್ ಅವರನ್ನು ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆ ಮಾಡಬೇಕಾಗಿ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ಮತದಾರರಲ್ಲಿ ವಿನಂತಿ ಮಾಡಿದ್ದಾರೆ.