ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

Spread the love

ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು :  ಜಿಲ್ಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಕೋಮು ಅಥವಾ ಧರ್ಮದ ಗುಂಪಿನ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಅಣ್ಣಾಮಲೈ ಹೇಳಿದರು.

ಸೋಮವಾರ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು, ಕಾನೂನನ್ನು ಮೀರಿ ಯಾರೂ ಸಹ ವರ್ತಿಸುವುದನ್ನು ಸಹಿಸಲಾಗುವುದಿಲ್ಲ. ಆ ರೀತಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಯಾವುದೇ ರೀತಿಯ ಅನುಕಂಪ ತೋರದೆ ಕ್ರಮ ಜರುಗಿಸುವುದು ಖಂಡಿತ ಎಂದು ತಿಳಿಸಿದರು.

sp-annamalai-udupi

ಗೋರಕ್ಷಣೆ ಮಾಡಲು ನೈಜ ಕಾಳಜಿ ಹೊಂದಿರುವವರು ಗೋವುಗಳ ಕಳ್ಳ ಸಾಗಣೆ ಮಾಹಿತಿ ಬಂದಾಕ್ಷಣ ಅದನ್ನು ಪೊಲೀಸ್‌ ಇಲಾಖೆಗೆ ತಿಳಿಸಿದಲ್ಲಿ ಪೊಲೀಸರು ತಡ ಮಾಡದೆ ಕ್ರಮ ಕೈಗೊಳ್ಳುತ್ತಾರೆ. ಇನ್ನು ತಾವೇ ಪೊಲೀಸರಂತೆ ವರ್ತಿಸಬೇಕೆಂಬ ಇಚ್ಛೆ ಹೊಂದಿರುವವರು ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸ್‌ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ ಕರೆ ಮಾಡಿದಾಗ ಅರ್ಜಿ ಸಲ್ಲಿಸಿ ಪೊಲೀಸರಾಗಬಹುದು ಅಥವಾ ಗೃಹರಕ್ಷಕ ದಳ ಸೇರಿ ಆ ಮೂಲಕವೂ ಕಾನೂನಿನ ಮೂಲಕವೇ ತಮ್ಮ ಉದ್ದೇಶವನ್ನು ಸಕರಾತ್ಮಕವಾಗಿ ಪೂರ್ಣಗೊಳಿಸಿಕೊಳ್ಳಬಹುದು ಎಂದರು.

ಯಾರದೋ ಮನೆಗೆ ನುಗ್ಗುವುದು, ಕಾಫಿ ತೋಟದಲ್ಲಿ ಕೆಲಸಕ್ಕೆ ಬಂದವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಪ್ರಶ್ನೆ ಮಾಡುವುದು, ಈ ರೀತಿಯ ಚಟುವಟಿಕೆಗಳು ಕಾನೂನು ವಿರೋಧಿ ಚಟುವಟಿಕೆಗಳು. ಈ ರೀತಿ ಕೃತ್ಯಗಳನ್ನು ತಾವು ಎಂದೂ ಸಹಿಸಿಲ್ಲ. ಇಲ್ಲೂ ಸಹ ಸಹಿಸುವುದಿಲ್ಲ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಅಥವಾ ಅನುಮಾನಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದೆ ತಾವೇ ಪೊಲೀಸರಂತೆ ವರ್ತಿಸಿ ಶಿಕ್ಷಿಸಲು ಮುಂದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕಾಫಿ ತೋಟಗಳಿಗೆ ಕೆಲಸಕ್ಕೆ ಬರುವ ಕಾರ್ಮಿಕರಲ್ಲಿ ಬಹುಪಾಲು ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವವರು ಅಧಿಕವಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಹಾಗೂ ಅವರು ಹೊಂದಿರುವ ಆಧಾರ್‌ ಕಾರ್ಡ್‌ ಮತ್ತು ಮತದಾರರ ಕಾರ್ಡ್‌ ನಕಲನ್ನು ಪಡೆಯುವಂತೆ ಕಾಫಿ ಬೆಳೆಗಾರರಿಗೆ ಸೂಚಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರ ಸಂಘಟನೆಗಳಾದ ಕೆ.ಜಿ.ಎಫ್‌ ಮತ್ತು ಕೆಪಿಎ ಪ್ರತಿನಿಧಿಗಳನ್ನು ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.

ಹಿಂದಿನ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಗಳು ಸರಿಯಾದ ಅನುಮತಿ ಇಲ್ಲದೆ ಅಥವಾ ಕಾನೂನಿಗೆ ತಕ್ಕಂತೆ ನಡೆಸದೆ ಇರುವ ಮನರಂಜನಾ ಕ್ಲಬ್‌ಗಳ ಪಟ್ಟಿಯನ್ನು ತಯಾರಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಕ್ರಮಕ್ಕೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ಈ ಕ್ಲಬ್‌ಗಳ ಬಗ್ಗೆ ಸಹ ಪರಿಶೀಲಿಸಿ ಕಾನೂನಿಗೆ ವಿರೋಧವಾಗಿದ್ದರೆ ತಕ್ಷಣ ಅವುಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಒಂದೊಮ್ಮೆ ಪೊಲೀಸ್‌ ಇಲಾಖೆ ಕಾರ್ಯವನ್ನು ವ್ಯವಸ್ಥಿತವಾಗಿಸಿದಲ್ಲಿ ನಗರದಲ್ಲಿ ತಲೆದೋರುತ್ತಿರುವ ವಾಹನ ದಟ್ಟಣೆ ಹಾಗೂ ವಾಹನಗಳನ್ನು ರಸ್ತೆಯಲ್ಲಿ ಇಷ್ಟಬಂದ ಕಡೆ ನಿಲ್ಲಿಸುವುದು ನಿಯಂತ್ರಣಕ್ಕೆ ಬರುತ್ತದೆ. ವಾಹನ ಸಂಚಾರ ವ್ಯವಸ್ಥಿತವಾಗಿಸಲು ನಗರಸಭೆಯ ಸಹಕಾರವೂ ಬೇಕಾಗಿದ್ದು, ಈ ಬಗ್ಗೆ ಸಹ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಮಲೆನಾಡು ಭಾಗಗಳಲ್ಲಿ ಪೊಲೀಸರು ಹಾಗೂ ಜನರ ನಡುವೆ ಸಣ್ಣ ಕಂದಕ ಏರ್ಪಟ್ಟಂತೆ ಕಾಣುತ್ತದೆ. ಮೊದಲು ಈ ಭಾಗದಲ್ಲಿ ಪ್ರತಿ ತಿಂಗಳು ಜನಸಂಪರ್ಕ ಸಭೆ ನಡೆಸಿ ಜನರಲ್ಲಿ ಪೊಲೀಸ್‌ ಇಲಾಖೆ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಕೈಗೊಳ್ಳಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ಪರಿಣಾಮ ಸೇರಿದಂತೆ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸುವ ಬಗ್ಗೆ ಸಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಆಲೋಚಿಸುವುದಾಗಿ ತಿಳಿಸಿದರು.


Spread the love