ಗೋ ಸಾಗಟದ ಆರೋಪ ; ಗೋರಕ್ಷಕರಿಂದ ಬಿಜೆಪಿ ಕಾರ್ಯಕರ್ತನ ಕೊಲೆ; ಬೆಚ್ಚಿ ಬಿದ್ದ ಕರಾವಳಿ

ಗೋ ಸಾಗಟದ ಆರೋಪ ; ಗೋರಕ್ಷಕರಿಂದ ಬಿಜೆಪಿ ಕಾರ್ಯಕರ್ತನ ಕೊಲೆ; ಬೆಚ್ಚಿ ಬಿದ್ದ ಕರಾವಳಿ

ಉಡುಪಿ: ಗೋ ಸಾಗಾಟದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಯುವಕನೊಬ್ಬನನ್ನು ಅಮಾನುಷವಾಗಿ ಹತ್ಯೆಗೈದ ಘಟನೆ ಆ.17ರಂದು ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಕೆಂಜೂರು ಎಂಬಲ್ಲಿ ನಡೆದಿದೆ.

go-rakshak-killed-bjp-activist-20160818

ಮೃತನನ್ನು ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಕೆಂಜೂರು ಪಾದೆಮಠ ನಿವಾಸಿ ವಾಸು ಪೂಜಾರಿ ಹಾಗೂ ಬೇಬಿ ದಂಪತಿಯ ಪುತ್ರ ಪ್ರವೀಣ್‌ ಪೂಜಾರಿ(29) ಎಂದು ಗುರುತಿಸಲಾಗಿದೆ.ಇವರೊಂದಿಗೆ ಇದ್ದ ನೆರೆಮನೆಯ ಭಾಸ್ಕರ್‌ ದೇವಾಡಿಗ ಎಂಬವರ ಮಗ ಅಕ್ಷಯ್‌ ದೇವಾಡಿಗ(25) ಎಂಬವರು ತೀವ್ರ ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಜಾಗರಣಾ ವೇದಿಕೆ ಮುಖಂಡ ಸಂತೆಕಟ್ಟೆಯ ಪೆಟ್ರೋಲ್‌ ಬಂಕ್‌ನ ಮಾಲಕ ಅರವಿಂದ ಕೋಟೇಶ್ವರ, ಕಳತ್ತೂರಿನ ಶ್ರೀಕಾಂತ್‌ ಕುಲಾಲ್‌, ಮೊಗವೀರಪೇಟೆಯ ಗಣೇಶ್‌, ಕಡಂಗೋಡಿನ ಉಮೇಶ್‌ ನಾಯ್ಕ, ಸುಕೇಶ್‌, ರಾಜೇಶ್‌, ಪ್ರಕಾಶ್‌ ಸೇರಿಗಾರ್‌, ಸಂತೆ ಕಟ್ಟೆಯ ಪ್ರದೀಪ್‌, ಹೊಯ್ಗೆಬೆಳಾರಿನ ರಾಜಾ, ಸುದೀಪ್‌ ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದು, ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಹಲವು ಮಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಆ.17ರಂದು ಸಂಜೆ ಕೊಕ್ಕರ್ಣೆ ಸಮೀಪದ ವಡ್ಡಂಬೆಟ್ಟು ನಿವಾಸಿ ರಮೇಶ್‌ ಪೂಜಾರಿ ಎಂಬವರು ನೀಡಿದ ಮಾಹಿತಿಯಂತೆ ಅವರಿಬ್ಬರು ದನಕ್ಕಾಗಿ ಮುದ್ದೂರಿಗೆ ಟಾಟಾ ಏಸ್‌ ವಾಹನದಲ್ಲಿ ತೆರಳಿದ್ದರು. ಅಲ್ಲಿ ನರಸಿಂಹ ನಾಯಕ್‌ ಎಂಬವರಿಂದ ಖರೀದಿಸಿದ ಮೂರು ಕರುಗಳನ್ನು ವಾಹನದಲ್ಲಿ ಕೆಂಜೂರಿಗೆ ತರುತ್ತಿದ್ದಾಗ ಹೆಬ್ರಿ ಸಮೀಪದ ಸಂತೆಕಟ್ಟೆಯ ಕಜಿಕೆ ಎಂಬಲ್ಲಿ ರಾತ್ರಿ7:30ರ ಸುಮಾರಿಗೆ ಸುಮಾರು 25-30ಮಂದಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತಡೆದರು. ಈ ಸಂದರ್ಭದಲ್ಲಿ ರಮೇಶ್‌ ಪೂಜಾರಿ ತಪ್ಪಿಸಿಕೊಂಡು ಪರಾರಿಯಾದರು. ವಾಹನದಲ್ಲಿದ್ದ ಪ್ರವೀಣ್‌ ಹಾಗೂ ಅಕ್ಷಯ್‌ಗೆ ಕಾರ್ಯಕರ್ತರ ತಂಡ ಮಾರಣಾಂತಿಕ ಹಲ್ಲೆ ನಡೆಸಿತು. ಅಲ್ಲದೆ ಇವರ ವಾಹನವನ್ನು ಪುಡಿಗೈಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ವಾಹನ ಸಮೇತ ಕೆಂಜೂರಿಗೆ ಕರೆದೊಯ್ದ ದುಷ್ಕರ್ಮಿಗಳು, ಪೊಲೀಸರಿಗೆ ದೂರವಾಣಿ ಕರೆ ಮಾಡಿ ದನ ಸಾಗಾಟಗಾರ ರನ್ನು ಹಿಡಿದಿದ್ದೇವೆ ಬನ್ನಿ ಅಂತ ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಇವರಿಬ್ಬರನ್ನು ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸಿ ದರು. ಆದರೆ, ಅವರಲ್ಲಿ ಪ್ರವೀಣ್‌ ಪೂಜಾರಿ ರಾತ್ರಿ 11:55 ರ ಸುಮಾರಿಗೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟರು.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿಯ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಯಿತು. ಮೃತರ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಜಿಪಂ ಸದಸ್ಯ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್‌ ಮೊದಲಾದವರು ಭೇಟಿ ನೀಡಿದರು. ಶವಾಗಾರಕ್ಕೆ ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಭೇಟಿ ನೀಡಿದರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ ಪ್ರಕರಣ ದಾಖಲಾಗಿದೆ.

Leave a Reply