‘ಚಲೋ ಉಡುಪಿ’ ಮತ್ತು ನಂತರ ಸಾರ್ವಜನಿಕ ಚರ್ಚೆಗೆ ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕರೆ

‘ಚಲೋ ಉಡುಪಿ’ ಮತ್ತು ನಂತರ… ಸಾರ್ವಜನಿಕ ಚರ್ಚೆಗೆ ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕರೆ

ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ, ಪುಣ್ಯಭೂಮಿ ಎಂದು ಕರೆಯಲ್ಪಡುವ ಭಾರತದ ಬುದ್ದಿವಂತರ ನಾಡೆಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಲ್ಲಿ ‘ಅಸ್ಪøಶ್ಯ’ನಾಗಿ ಹುಟ್ಟಿ ಹಿಂದೂ ಧರ್ಮದ ಅನುಯಾಯಿ ಆಗಿ ಪಡಬಾರದ ನೋವು-ಅಪಮಾನ ಅನುಭವಿಸುತ್ತಾ ಬೆಳೆದ ನಾನು, ಓರ್ವ ಸಾಮಾಜಿಕ ಕಾರ್ಯಕರ್ತನಾಗಿ, ‘ಚಲೋ ಉಡುಪಿ’ ಕಾರ್ಯಕ್ರಮ ಮತ್ತು ಆನಂತರದ ಬೆಳವಣಿಗೆಗಳನ್ನು ಆತಂಕದಿಂದ ಗಮನಿಸುತ್ತಿದ್ದೇನೆ. ಈ ಕುರಿತ ನನ್ನ ಅನಿಸಿಕೆಗಳನ್ನು ಈ ಕೆಳಗಿನಂತೆ ಮಂಡಿಸುತ್ತಿದ್ದೇನೆ. ಕಲುಷಿತಗೊಂಡಿರುವ ನಮ್ಮ ಸಮಾಜದಲ್ಲಿ ಒಂದು ಆರೋಗ್ಯಪೂರ್ಣ ಚರ್ಚೆಗೆ ಇದು ಕಾರಣವಾಗಲಿ, ನಾವೆಲ್ಲಿ ತಪ್ಪಿದ್ದೇವೆ ಎಂದು ಸಂಬಂಧಪಟ್ಟ ಎಲ್ಲರೂ ಆತ್ಮಾವಲೋಕನ ಮಾಡಲು ಇದು ಪ್ರೇರಣೆಯಾಗಲಿ ಎಂಬುದು ನನ್ನ ಆಶಯ.

image004chalo-udupi-pressmeet-20161018-004

‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ ಸಂಘಟಿಸಿದ ಸ್ವಾಭಿಮಾನಿ ಸಂಘರ್ಷ ಜಾಥಾ ‘ಚಲೋ ಉಡುಪಿ’ ಕಾರ್ಯಕ್ರಮದ ಘೋಷ ವಾಕ್ಯ ‘ಆಹಾರ ನಮ್ಮ ಆಯ್ಕೆ ಭೂಮಿ ನಮ್ಮ ಹಕ್ಕು’. ಈ ಘೋಷವಾಕ್ಯದಲ್ಲಿರುವ ಎರಡು ವಿಷಯಗಳಿಗೂ ಯಾರ ತಕರಾರು ಇರಲು ಸಾಧ್ಯವಿಲ್ಲ. ಆದರೆ ಈ ಘೋಷವಾಕ್ಯ ಯಾವ ವಿಷಯಕ್ಕೆ ಮೊದಲ ಆದ್ಯತೆ ನೀಡಿದೆ, ಮತ್ತು ಈ ಕಾರ್ಯಕ್ರಮ ಯಾವ ಕಡೆ ಮುಖಮಾಡಿತ್ತು ಎಂಬುದನು ವಿಶ್ಲೇಷಿಸಿದರೆ, ಈ ಕಾರ್ಯಕ್ರಮ ಸಂಘಟಿಸಿದ ದಲಿತ ನೇತಾರರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ಗ್ರಹಿಸಿರುವ ಬಗೆ ಹಾಗೂ ಅದನ್ನು ನಿರ್ವಹಿಸಿರುವ ರೀತಿ ನಮಗೆ ಅರ್ಥವಾಗುತ್ತದೆ. ಭೂಮಿ ದಲಿತರ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಅತ್ಯಂತ ಪ್ರಮುಖ ವಿಷಯ. ಈ ವಿಷಯದ ನಿರ್ವಹಣೆಗೆ ಸಹಜವಾಗಿ ಇಲ್ಲಿ ಪ್ರಾಧಾನ್ಯತೆ ಇರಬೇಕಿತ್ತು. ಆದರೆ ಅದು ಎರಡನೇ ಸ್ಥಾನ ಪಡೆದು ‘ಆಹಾರದ ಆಯ್ಕೆ’ ಮೊದಲ ಆದ್ಯತೆ ಪಡೆದು, ಜಾಥಾ ಉಡುಪಿ ಕಡೆ ಹೊರಡುವಂತಾಯಿತು!

ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವದ ಹೆಸರಿನಲ್ಲಿ, ‘ಹರಿಜನ-ಗಿರಿಜನ ಉದ್ಧಾರ’ದ ಮುಖವಾಡ ತೊಟ್ಟು, ಈ ದೇಶವನ್ನು, ಈ ರಾಜ್ಯವನ್ನು ಸುದೀರ್ಘಕಾಲ ಆಳಿದವರು ಪ್ರಭುತ್ವದ ಮೂರು ಅಂಗಗಳನ್ನು ಅವು ಸಂವಿಧಾನದ ಆಶಯಗಳಿಗನುಗುಣವಾಗಿ ಕಾರ್ಯನಿರ್ವಹಿಸದಂತೆ ಮಾಡಿದ ಪರಿಣಾಮ, ದಲಿತರು ಇಂದಿಗೂ ಈ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಕಠೋರ ಸತ್ಯವನ್ನು ಮುಚ್ಚಿಟ್ಟು, ದನ ಸಾಗಾಟಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಲ್ಲೊಂದು-ಇಲ್ಲೊಂದು ನಡೆದ ಹಲ್ಲೆ-ಕೊಲೆ ಪ್ರಕರಣಗಳನ್ನೇ (ಅದೂ ದಲಿತರ ಮೇಲೆ ಅಲ್ಲ!) ದಲಿತರ ಆಹಾರ ಹಕ್ಕಿನ ಮೇಲಿನ ಬೃಹತ್ ದಾಳಿ ಎಂಬಂತೆ ಬಿಂಬಿಸಲು ದಲಿತರನ್ನು ಸಜ್ಜುಗೊಳಿಸಿ ಉಡುಪಿಗೆ ಜಾಥಾ ಸಂಘಟಿಸಿರುವುದು ಸಂಘಟಕರ ಆದ್ಯತೆ ಏನು ಎಂಬುದನ್ನು ತಿಳಿಸುತ್ತದೆ. ‘ದನದ ಮಾಂಸ ಸೇವನೆ’ಯ ಪ್ರಶ್ನೆ ಖಂಡಿತವಾಗಿಯೂ ಕರ್ನಾಟಕ ದಲಿತರ ಜ್ವಲಂತ ಸಮಸ್ಯೆ ಅಲ್ಲವೇ ಅಲ್ಲ. ಆ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಲು ಸಾಕಷ್ಟು ಅವಕಾಶಗಳಿವೆ. ಆ ದಿಕ್ಕಿನಲ್ಲಿ ಯೋಚಿಸಿ, ಕ್ರಮಕೈಗೊಳ್ಳಬಹುದಾಗಿತ್ತು. ಆದರೆ ಹಾಗಗಲಿಲ್ಲ.
ಕರ್ನಾಟಕದಲ್ಲಿ ದಲಿತರ ಭೂಮಿ ಹಕ್ಕಿನ ಪ್ರಶ್ನೆಗೆ ಸಂಬಂಧಿಸಿಯೂ ಈ ಸಮಾವೇಶ ಮಹತ್ವಪೂರ್ಣವಾದ ಮಾಹಿತಿಯನ್ನು ಹೊರ ಹಾಕುವಲ್ಲಿ ಹಾಗೂ ವಿವಿಧ ಸರಕಾರಗಳು ದಲಿತರಿಗೆ ನಡೆಸಿದ ವಂಚನೆಗಳನ್ನು ಬಯಲುಗೊಳಿಸುವಲ್ಲಿ ವಿಫಲವಾಯಿತು.

ಆದರೆ, ದುರಂತವೆಂದರೆ, ದಲಿತರ ಹಕ್ಕಿಗೆ ನೇರ ಸಂಬಂಧ ಇಲ್ಲದ, ಅನಗತ್ಯ ವಿಚಾರವೊಂದರ ಪ್ರಸ್ತಾಪದಿಂದ ವಿವಾದಕ್ಕೆ ಕಾರಣವಾಯಿತು. ಆದರೆ, ಇಷ್ಟಾಗಿಯೂ ಈ ಜಾಥಾವನ್ನು ಅಚ್ಚುಕಟ್ಟಾಗಿ ಸಂಘಟಿಸಿರುವ ದಲಿತ ಕಾರ್ಯಕರ್ತರ ದಲಿತಪರ ಕಾಳಜಿ ಮತ್ತು ಬದ್ಧತೆಯನ್ನು ನಾನು ಅತ್ಯಂತ ಗೌರವದಿಂದ ಶ್ಲಾಘಿಸುತ್ತೇನೆ. ಈ ವಿವಾದದ ಬಗ್ಗೆ ಹೆಚ್ಚಿನ ಗಮನ ನೀಡದೆ ದಲಿತರ ಭೂಮಿಗಾಗಿ ಹೋರಾಟ ಹೊಸ ರೀತಿಯಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಈ ಜಾಥಾದ ಸಮಾರೋಪ ಸಮಾರಂಭದಲ್ಲಿ ‘ಉಡುಪಿ ಮಠದಲ್ಲಿರುವ ಪಂಕ್ತಿ ಬೇಧವನ್ನು ಎರಡು ತಿಂಗಳಲ್ಲಿ ನಿಲ್ಲಿಸದೇ ಇದ್ದರೆ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಗುಜರಾತ್‍ನ ಉನಾದ ದಲಿತ್ ಅತ್ಯಾಚಾರ್ ಲಡ್ತಾ ಸಮಿತಿಯ ಸಂಚಾಲಕ ಜಿಗ್ನೇಶ್ ಮೆವಾನಿ ಎಚ್ಚರಿಕೆ ನೀಡಿರುವಂತಾಗಿರುವುದು ಹೋರಾಟದ ದಿಕ್ಕಿನ ಬಗ್ಗೆ ಅಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ತೋರಿಸುತ್ತದೆ.

ಜಿಗ್ನೇಶ್ ನೀಡಿರುವ ಹೇಳಿಕೆ, ಉಡುಪಿ ಕೃಷ್ಣ ದೇಗುಲ ನಿರ್ವಹಿಸುವ ಮಠದ ಆಡಳಿತ ಮಂಡಳಿಯ ಮೂಲಭೂತ ಹಕ್ಕುಗಳ ಮೇಲಿನ ಅತಿಕ್ರಮಣದ ಬೆದರಿಕೆಯಾಗಿದೆ. ಇದು ಅತ್ಯಂತ ಅನಪೇಕ್ಷಿತ ಹಾಗೂ ಸಾಂವಿಧಾನಿಕ ವಿಧಿವಿಧಾನಗಳಿಗೆ ವ್ಯತಿರಿಕ್ತವಾಗಿದೆ.

ಈ ಅನಪೇಕ್ಷಿತ ಹೇಳಿಕೆಗೆ ಹಾಗೂ ಕೆಲವರಿಂದ ಅದರ ಸಮರ್ಥನೆಗೆ, ದಲಿತರ ಹಕ್ಕುಗಳ ಬಗ್ಗೆ ಈ ಜನರಲ್ಲಿರುವ ಅಪಕಲ್ಪನೆ ಹಾಗೂ ಹಿಂದೂ ಧಾರ್ಮಿಕ ಕೇಂದ್ರಗಳಲ್ಲೂ ಸರ್ವರಿಗೂ ಸಮಾನತೆ ಖಾತರಿಯಾಗಬೇಕೆಂಬ ಸದಾಶಯ ಕಾರಣವಾಗಿರಬಹುದು. ಆದ್ದರಿಂದ, ಈ ಹೇಳಿಕೆಯನ್ನು ಶತ-ಶತಮಾನಗಳಿಂದ ದೇವರು-ಧರ್ಮ-ಸಂಸ್ಕøತಿ-ಸಂಪ್ರದಾಯದ ಹೆಸರಲ್ಲಿ ಅಕ್ಷರ-ಅವಕಾಶ-ಅಧಿಕಾರಿಗಳಿಂದ ವಂಚಿತರಾಗಿ, ಅಮಾನವೀಯ ಅಸ್ಪøಶ್ಯತೆಯ ನೋವು-ಅಪಮಾನ ಅನುಭವಿಸಿದ ಸಮುದಾಯಗಳ ಯುವ ಜನತೆಯ ಸಹಜ ಅಭಿವ್ಯಕ್ತಿ ಎಂದು ಪರಿಗಣಿಸಬೇಕೇ ಹೊರತು, ಯಾವುದೇ ಧಾರ್ಮಿಕ ಸಂಸ್ಥೆ ಅಥವಾ ಮುಖಂಡರ ವಿರುದ್ಧದ ದುರುದ್ಧೇಶಿತ ಹೇಳಿಕೆ, ಬೆದರಿಕೆ ಎಂದು ಪರಿಗಣಿಸಬಾರದು.

ಇಂತಹ ಸನ್ನಿವೇಶಗಳು ಹಿಂದೂ ಧರ್ಮದಲ್ಲಿ ಆಚರಣೆಯಲ್ಲಿರುವ ತಾರತಮ್ಯದ ಸ್ವರೂಪಗಳನ್ನು ಅರ್ಥೈಸಿಕೊಳ್ಳಲು, ನಾವೆಲ್ಲಿ ತಪ್ಪಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಣೆಯಾಗಬೇಕೇ ಹೊರತು, ಶತಮಾನಗಳಿಂದ ಶೋಷಣೆಗೆ ಒಳಗಾದ ದಲಿತ ಸಮುದಾಯಗಳ ವಿರುದ್ಧ ಕತ್ತಿ ಮಸೆಯಲು ಕಾರಣವಾಗಬಾರದು, ಅವರನ್ನು ಮತ್ತಷ್ಟು ಅವಮಾನ ಮಾಡಲು ಅವಕಾಶವಾಗಬಾರದು.

‘ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಸ್ವಾಸ್ಥ್ಯಕ್ಕೆ ಧಕ್ಕೆಯಾಗದಂತೆ ಧಾರ್ಮಿಕ ಮತ್ತು ದತ್ತಿ ಉದ್ದೇಶಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು, ಆಸ್ತಿಪಾಸ್ತಿಗಳನ್ನು ಹೊಂದುವುದು ಮತ್ತು ಕಾನೂನಿನಂತೆ ಅವುಗಳನ್ನು ನಿರ್ವಹಿಸುವುದನ್ನು ಭಾರತದ ಸಂವಿಧಾನದ ವಿಧಿ 26(ಎ), (ಬಿ), (ಸಿ) ಮತ್ತು (ಡಿ)ಯಲ್ಲಿ ಪ್ರತಿಯೊಂದು ಧಾರ್ಮಿಕ ಪಂಗಡ/ಗುಂಪುಗಳಿಗೆ ಖಾತರಿಪಡಿಸಲಾಗಿದೆ. ಇದೊಂದು ಮೂಲಭೂತ ಹಕ್ಕು. ಆದ್ದರಿಂದ ಮಧ್ವಾಚಾರ್ಯರ ಧಾರ್ಮಿಕ ಆಗುಹೋಗುಗಳಲ್ಲಿ ಪಂಕ್ತಿಬೇಧ ನಿವಾರಣೆಯ ಹೆಸರಿನಲ್ಲಿ ಹಸ್ತಕ್ಷೇಪ ಮಾಡಲು ದಲಿತ-ದಮನಿತರಿಗಾಗಲೀ ಅಥವಾ ಇತರ ಯಾವುದೇ ಗುಂಪಿಗೇ ಆಗಲಿ ಯಾವುದೇ ಹಕ್ಕು ಇರುವುದಿಲ್ಲ. ಆದ್ದರಿಂದ ಜಿಗ್ನೇಶ್ ಹೇಳಿಕೆ ತೀರಾ ಅನಪೇಕ್ಷಿತ-ಸಂವಿಧಾನ ವಿರೋಧಿ.

ಆದರೆ, ಈ ಹೇಳಿಕೆಗಾಗಿ ‘ಚಲೋ ಉಡುಪಿ’ ಕಾರ್ಯಕ್ರಮವನ್ನೇ ಉಡುಪಿ ಮಠದ ವಿರೋಧಿ ಕಾರ್ಯವೆಂದು ಚಿತ್ರಿಸುವುದಾಗಲೀ, ಬ್ರಾಹ್ಮಣ ವಿರೋಧಿ ಎಂದು ಕರೆಯುವುದಾಗಲೀ ತಪ್ಪು. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಸಾಧ್ಯವಾದ ಎಲ್ಲ ಪ್ರಯತ್ನ ನಡೆಸುತ್ತಿವೆ ಎಂಬುದೂ ಸತ್ಯ. ಇದನ್ನು ಸ್ವಸ್ಥ ಮನಸ್ಸಿನ ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ.

ಪ್ರತಿ ಧಾರ್ಮಿಕ ಪಂಗಡ/ಗುಂಪು ತಮ್ಮ ಧರ್ಮದ ವಿಧಿ ವಿಧಾನಗಳಿಗೆ ಅನುಗುಣವಾಗಿ ಧಾರ್ಮಿಕ-ದತ್ತಿ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ಸಂವಿಧಾನ ವಿಧಿ 26ರಲ್ಲಿ ಖಾತರಿಪಡಿಸಿದೆಯಾದರೂ, ಧಾರ್ಮಿಕ ಆಚರಣೆಯ ಜತೆಯಲ್ಲಿ ಸಂಯೋಜನೆಗೊಂಡಿರುವ ಆರ್ಥಿಕ, ಹಣಕಾಸಿನ, ರಾಜಕೀಯ ಅಥವಾ ಇತರೆ ಸೆಕ್ಯುಲರ್ ಚಟುವಟಿಕೆಗಳನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಹಾಗೂ ಸಾರ್ವಜನಿಕ ಸ್ವರೂಪದ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಸಮಾಜ ಕಲ್ಯಾಣ ಹಾಗೂ ಸುಧಾರಣೆಗೆ ಅವಕಾಶ ಕಲ್ಪಿಸಲು ಅಥವಾ ಈ ಸಂಸ್ಥೆಗಳನ್ನು ಹಿಂದೂ ಧರ್ಮದ ಎಲ್ಲಾ ವರ್ಗಗಳಿಗೆ ಮುಕ್ತವಾಗಿ ತೆರೆದಿಡಲು ಅಗತ್ಯವಾದ ಕಾನೂನುಗಳನ್ನು ರೂಪಿಸಲು ಅಥವಾ ಇರುವ ಕಾನೂನುಗಳನ್ನು ಜಾರಿಗೊಳಿಸಲು ಸಂವಿಧಾನ ವಿಧಿ 25(2)(ಎ) ಮತ್ತು (ಬಿ)ರಲ್ಲಿ ಪ್ರಭುತ್ವಕ್ಕೆ ಪರಮಾಧಿಕಾರ ನೀಡಲಾಗಿದೆ ಎಂಬುದನ್ನು ಮತ್ತು ಪ್ರಭುತ್ವಕ್ಕೆ ನೀಡಲಾಗಿರುವ ಈ ಪರಮಾಧಿಕಾರವು ವಿಧಿ 26(ಬಿ)ರಲ್ಲಿ ಧಾರ್ಮಿಕ ಪಂಗಡ/ಗುಂಪುಗಳಿಗೆ ನೀಡಿರುವ ಹಕ್ಕುಗಳ ಮೇಲೆ ಪ್ರಭುತ್ವ ಸಾಧಿಸಬಹುದಾಗಿದೆ ಎಂದು ಸುಪ್ರೀಂಕೋರ್ಟು ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದನ್ನು ನಾವು ಮರೆಯಬಾರದು.

ಆದ್ದರಿಂದ, ಉಡುಪಿಯ ಕೃಷ್ಣ ದೇಗುಲ ಇರಲಿ ಅಥವಾ ಪೇಜಾವರ ಶ್ರೀಗಳು ಪಂಕ್ತಿ ಬೇಧ ಆಚರಣೆಗೆ ಸಂಬಂಧಿಸಿ ಉಲ್ಲೇಖಿಸಿರುವ ಧರ್ಮಸ್ಥಳ, ಶೃಂಗೇರಿ, ಸುಬ್ರಹ್ಮಣ್ಯ ಅಥವಾ ಸಾರ್ವಜನಿಕ ಸ್ವರೂಪದ ಇತರ ಯಾವುದೇ ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಸುಧಾರಣೆ ತರಲು ಸರಕಾರ ನಿರ್ಧರಿಸಿದಲ್ಲಿ ಕಾನೂನಿನ ಮೂಲಕ ಅದನ್ನು ಅನುಷ್ಠಾನಕ್ಕೆ ತರಬಹುದಾಗಿದೆ.

ಹಿಂದೂ ಧರ್ಮದಲ್ಲಿ, ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಸುಧಾರಣೆ ತರಬಯಸುವ ಯಾರೇ ಆಗಲಿ ಸಂವಿಧಾನದ ಈ ಇತಿ-ಮಿತಿಯನ್ನು ಅರ್ಥೈಸಿಕೊಂಡು ಅದಕ್ಕನುಗುಣವಾಗಿ ಸಾಮಾಜಿಕ ಸಾಮರಸ್ಯದೊಂದಿಗೆ ತಮ್ಮ ಕಾರ್ಯಕ್ರಮಗಳನ್ನು ರೂಪಿಸುವ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ.

‘ಉಡುಪಿ ಮಠದಲ್ಲಿ ಊಟದಲ್ಲಿ ಪಂಕ್ತಿ ಬೇಧ ಇಲ್ಲ. ಊಟದಲ್ಲಿ ಪ್ರತ್ಯೇಕತೆ ಬಯಸುವ ಕೆಲವು ಸಂಪ್ರದಾಯಸ್ಥ ಬ್ರಾಹ್ಮಣರಿಗಷ್ಟೇ ಪ್ರತ್ಯೇಕ ವ್ಯವಸ್ಥೆ ಇದೆ’ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ. ಮಠದಲ್ಲಿ ಪಂಕ್ತಿ ಬೇಧ ಇದ್ದರೂ, ಇಲ್ಲದಿದ್ದರೂ ನನ್ನದೇನೂ ತಕರಾರು ಇಲ್ಲ. ಅದು ಅವರ ಮಠ. ಅದರ ನಿರ್ವಹಣೆ ಸಂವಿಧಾನ ಅವರಿಗೆ ನೀಡಿದ ಹಕ್ಕು. ನಾವು ಹಸ್ತಕ್ಷೇಪ ಮಾಡುವುದಿಲ್ಲ, ಮಾಡಬಾರದು.

ಪೇಜಾವರ ಶ್ರೀಗಳು ರಾಜ್ಯದ ಹಲವೆಡೆ ದಲಿತ ಕಾಲನಿಗಳಿಗೆ ಭೇಟಿ ನೀಡಿ, ದಲಿತರಿಗೆ ವೈಷ್ಣವ ದೀಕ್ಷೆ ನೀಡಿದ್ದಾರೆ. ಅವರಿಂದ ವೈಷ್ಣವ ದೀಕ್ಷೆ ಪಡೆದ ದಲಿತರಾದರೂ, 21ನೇ ಶತಮಾನದ ಈ ಕಂಪ್ಯೂಟರ್ ಯುಗದಲ್ಲಿ ಊಟದಲ್ಲಿ ಪ್ರತ್ಯೇಕತೆ ಬಯಸುವ ಸಂಪ್ರದಾಯಸ್ಥ ಬ್ರಾಹ್ಮಣರ ಜತೆ ಸಹಭೋಜನ ಮಾಡಲು ಸಾಧ್ಯವಿದೆಯೇ? ಎಂಬುದನ್ನು ತಿಳಿಸಿದಲ್ಲಿ ‘ವೈಷ್ಣವ ದೀಕ್ಷೆ’ಯ ಮಹತ್ವ ಅರ್ಥವಾದೀತು.

ಮೇಲೆ ಹೇಳಿರುವ ಸಂವಿಧಾನ ಮತ್ತು ಕಾನೂನುಗಳ ಮಿತಿಯ ಹೊರತಾಗಿಯೂ ನಾವೆಲ್ಲರೂ ಉಡುಪಿಯ ಕೃಷ್ಣನ ಕುರಿತು ಗಂಭೀರವಾಗಿ ಚಿಂತಿಸಬೇಕಾಗಿದೆ. ಉಡುಪಿಯಲ್ಲಿರುವುದು ಸಂಪ್ರದಾಯಗಳಿಗೆ ಬೆನ್ನು ಹಾಕಿದ ಕೃಷ್ಣ. ನಿಷ್ಕಲ್ಮಶ ಭಕ್ತಿಗೆ ಒಲಿದ ಕೃಷ್ಣ. ಅಸ್ಪøಶ್ಯತೆಯ ನೋವು-ಅಪಮಾನ ಅನುಭವಿಸುತ್ತಾ, ದೇಗುಲದ ಒಳಗಡೆ ಪ್ರವೇಶ ಸಾಧ್ಯವಾಗದೆ ಹೊರಗಡೆ ನಿಂತು, ‘ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೇ’, ಎಂದು ಆರಾಧಿಸಿದ ಕನಕನಿಗೆ ಒಲಿದ ಕೃಷ್ಣ. ಆದ್ದರಿಂದ ಪ್ರತ್ಯೇಕತೆ ಬಯಸುವ ಸಂಪ್ರದಾಯಸ್ಥ ಬ್ರಾಹ್ಮಣರಿಗೆ ಮತ್ತು ಮಠದ ರಕ್ಷಣೆಗಾಗಿ ತುದಿಕಾಲಲ್ಲಿ ನಿಂತ ವಿವಿಧ ಸಂಘಟನೆಗಳ ನೇತಾರರಿಗೆ ಮತ್ತು ಕಾರ್ಯಕರ್ತರಿಗೆ ಕನಕದಾಸರ ಕೀರ್ತನೆಗಳನ್ನು ಹಾಗೂ ಪ್ರಪಂಚಕ್ಕೆ ಹಿಂದೂ ಧರ್ಮವನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದ ಅವರ ಬರಹಗಳನ್ನು ಓದಲು ಪೇಜಾವರ ಶ್ರೀಗಳೇ ಸ್ವತಃ ಪ್ರೇರಣೆ ನೀಡಬೇಕು. ಇದು ನನ್ನ ಆಗ್ರಹಪೂರ್ವಕ ಮನವಿ.

ಮೈಸೂರಿನ ಶ್ರೀರಾಮಕೃಷ್ಣಾಶ್ರಮ ‘ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ’ ಪ್ರಕಟಿಸಿದೆ. ಅವುಗಳನ್ನು ಓದಲು ತಿಳಿಹೇಳಬೇಕು. ಪುರೋಹಿತ ಶಾಹಿ, ಹಿಂದೂ ಧರ್ಮದ ಮೇಲೆ ನಡೆಸಿದ ದಾಳಿಗಳು, ದಬ್ಬಾಳಿಕೆಗಳು, ಅತ್ಯಾಚಾರಗಳು ಎಂತಹವು ಎಂಬುದು ಸ್ವಾಮಿ ವಿವೇಕಾನಂದರ ಬರಹಗಳಿಂದ ಅರ್ಥವಾಗಬಹುದು. ಕನಕದಾಸರ ಕೀರ್ತನೆಗಳು ಕೇವಲ ಕುಣಿತದ ಭಜನೆಗಳಾಗಬಾರದು. ಅವು ನಮ್ಮ ಜೀವನ ಮೌಲ್ಯಗಳಾಗಬೇಕು. ಸನ್ಯಾಸ ಪರಂಪರೆಯ ಶ್ರೇಷ್ಠತೆಯನ್ನು ಸದಾ ಕಾಪಾಡಿಕೊಂಡು ಬಂದಿರುವ ಹಿರಿಯ ಚೇತನ ಪೇಜಾವರ ಶ್ರೀಗಳು ಮನಸ್ಸು ಮಾಡಿದರೆ ಇದು ಸಾಧ್ಯವಿದೆ. ಆದರೆ ಅವರು ದೃಢ ಹಾಗೂ ದಿಟ್ಟ ಮನಸ್ಸು ಮಾಡಬೇಕು. ಜಾತಿ-ಲಿಂಗ ಆಧಾರಿತ ತಾರತಮ್ಯ ಇಲ್ಲದ ಮಾನವ ಕೇಂದ್ರಿತ ನ್ಯಾಯ-ಸ್ವಾತಂತ್ರ್ಯ-ಸಮಾನತೆ-ಭಾತೃತ್ವದ ಮೇಲೆ ನೆಲೆ ನಿಂತ ಬಲಿಷ್ಠ ಹಿಂದೂ ಧರ್ಮ ಭಾರತದ ಜನತಂತ್ರದ ಉಳಿವಿಗೆ ಅತ್ಯಗತ್ಯ ಎಂದು ನಾನು ನಂಬಿದ್ದೇನೆ. ಹಿಂದೂ ಧರ್ಮದ ರಕ್ಷಣೆಗೆ ನಿಂತ ಎಲ್ಲರೂ ಈ ದಿಕ್ಕಿನಲ್ಲಿ ಯೋಚಿಸುವಂತಾಗಲಿ ಎಂಬುದು ನನ್ನ ಆಶಯ. ಕನಕನಿಗೆ ಒಲಿದ ಶ್ರೀಕೃಷ್ಣ ಅವರೆಲ್ಲರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

(ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಹೇಳಿಕೆ)

1 Comment

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here