ಚಿಕ್ಕಮಗಳೂರು: ಕಾಳಿಂಗ ಸರ್ಪ ಕಡಿದು ಉರಗ ತಜ್ಞ ಪ್ರಫುಲ್ಲದಾಸ್ ಭಟ್ ಸಾವು

ಚಿಕ್ಕಮಗಳೂರು : ವಿಷಪೂರಿತ ಹಾವುಗಳನ್ನು ಹಿಡಿಯುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮನೆಮಾತಾಗಿದ್ದ ಹೆಸರಾಂತ ಉರಗತಜ್ಞ ಪ್ರಪುಲ್ಲದಾಸ್ ಭಟ್ (67) ಮಂಗಳವಾರ ಕಾಳಿಂಗ ಸರ್ಪವೊಂದನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಳಕೋಡು ಗ್ರಾಮದ ತೋಟವೊಂದರಲ್ಲಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲು ಪ್ರಪುಲ್ಲದಾಸ್ ಭಟ್ ಮಧ್ಯಾಹ್ನ ತೆರಳಿದ್ದರು. ತೋಟದಲ್ಲಿದ್ದ ಹಾವನ್ನು ಕೆಲವೇ ಹೊತ್ತಿನಲ್ಲಿ ಸೆರೆ ಹಿಡಿದಿದ್ದರು. ಆದರೆ ಹಾವನ್ನು ಚೀಲಕ್ಕೆ ಹಾಕುವ ವೇಳೆ ಕಾಳಿಂಗ ಸರ್ಪ ಪ್ರಫುಲ್ಲದಾಸ್ ಭಟ್ಟರ ಕೈಯಿಂದ ನುಣುಚಿಕೊಂಡು ಬಲಗೈಗೆ ಕಚ್ಚಿದೆ. ಕೂಡಲೇ ಅಸ್ವಸ್ಥರಾದ ಅವರನ್ನು ಕಳಸದ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪ್ರಪುಲ್ಲದಾಸ್ ಭಟ್ ಕಳೆದ 30 ವರ್ಷಗಳಿಂದ ಹಾವು ಹಿಡಿಯುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಇದುವರೆಗೂ ಸಾವಿರಾರು ವಿಷಪೂರಿತ ಹಾವುಗಳನ್ನು ಹಿಡಿಯುವ ಮೂಲಕ ಜಿಲ್ಲೆಯಲ್ಲಿ ಹೆಸರಾಗಿದ್ದರು.

ಉರಗತಜ್ಞ ಪ್ರಫುಲ್ಲದಾಸ್ ಸೇವೆ ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಕೂಡ ಇವರಿಗೆ ಸಂದಿದೆ.

Leave a Reply

Please enter your comment!
Please enter your name here