ಜನಪರ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

ಮಂಗಳೂರು: ಸಮಾಜದಲ್ಲಿನ ಅಸಮಾನತೆ ಮೇಲು ಕೀಳು ಭಾವನೆಗಳನ್ನು ಹೊಗಲಾಡಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ಸಂಬಂಧಿಸಿದ ಯೋಜನೆಗಳ ಅನುಷ್ಠಾನಾಧಿಕಾರಿಗಳು ಮುತುವರ್ಜಿ ವಹಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಮಾಸಿಕ ಸಮೀಕ್ಷಾ ಸಭೆ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು. ಜನಪ್ರತಿನಿಧಿಗಳು ಇಂದು ಒಬ್ಬರು ನಾಳೆ ಮತ್ತೊಬ್ಬರು ಬರುತ್ತಾರೆ. ಆದರೆ ಅಧಿಕಾರಿಗಳು ಎಲ್ಲಾ ಜನಪ್ರತಿನಿಧಿಗಳೊಂದಿಗೆ ಸೌಹಾರ್ದವಾಗಿ ಯೋಜನೆಗಳ ಅನುಷ್ಠಾನದ ಗುರಿಯನ್ನು ಹೊಂದಿ ಕಾರ್ಯನಿರ್ವಹಿಸುವಂತೆ ಅವರು ಕಿವಿಮಾತು ಹೇಳಿದರು.

1

ಗ್ರಾಮಸ್ನೇಹಿ ಸಭೆಗಳು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗುತ್ತಿದ್ದು ಇವು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ಜನರಿಗೆ ತಲುಪುವಂತೆ ಹಾಗೂ ಅವರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಉಪಾಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದರು.

 ಜಿಲ್ಲ್ಲಾ ಸರ್ಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಶೌಚಾಲಯಗಳು ಕಿಟಕಿಗಳು ಮುತಾದವುಗಳು ಸರಿಯಿಲ್ಲದೆ ಒಳರೋಗಿಗಳಿಗೆ ಮತ್ತು ಅವರ ಜೊತೆ ಇರುವ ಸಂಬಂಧಿಗಳಿಗೆ ತುಂಬಾ ತೊಂದರೆ ಆಗುತ್ತಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ವೆನ್‍ಲಾಕ್ ನಿವಾಸಿ ವೈದ್ಯಾದಿಕಾರಿ ಡಾ||ಈರಪ್ಪ ಅವರನ್ನು ಅಧ್ಯಕ್ಷರು ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಅವರು ಈಗಾಗಲೇ ಸಮಗ್ರ ಆಸ್ಪತ್ರೆ ದುರಸ್ತಿಗೆ ರೂ.15 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅನುದಾನ ಬಂದ ಕೂಡಲೇ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ಅವರು ಅಧ್ಯಕ್ಷರಿಗೆ ತಿಳಿಸಿದರು.    ಸರ್ಕಾರಿ ಲೇಡಿಗೊಷನ್ ಅಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಹಾಗೂ ಬಾಣಂತಿಯರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು ಅವರಿಗೆ ಸ್ಥಳದ ಅಭಾವವಿರುವುದರಿಂದ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಪೂರ್ಣಗೊಂಡಿರುವ ಕಟ್ಟಡದ

ಭಾಗವನ್ನು ಸುಪರ್ಧಿಗೆ ಪಡೆಯುವಂತೆ ಸಭೆಯಲ್ಲಿ ಹಾಜರಿದ್ದ ಲೇಡಿಗೊಶನ್ ಆಸ್ಪತ್ರೆಯ ಅಧೀಕ್ಷಕಿ ಡಾ||ಶಕುಂತಳಾ ಅವರಿಗೆ ಅಧ್ಯಕ್ಷರು ಸೂಚಿಸಿದರು.

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಈ ಯೋಜನೆಯಲ್ಲಿ  56 ನೀರಿನ ಟ್ಯಾಂಕುಗಳಿಗೆ ನೀರು ಒದಗಿಸಬೇಕಿದ್ದು, ಅವುಗಳಲ್ಲಿ 50 ಟ್ಯಾಂಕುಗಳಿಗೆ ನೀರು ಒದಗಿಸಲು ಪೈಪ್ ಲೈನ್ ಜೋಡಣೆ ಕಾಮಗಾರಿ ಮುಗಿದಿರುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರ ತಿಳಿಸಿದರು.  ಪಕ್ಷಿಕೆರೆಯಿಂದ ಹಳೆಯಂಗಡಿ ತನಕ ಬರುವ 6 ಟ್ಯಾಂಕ್‍ಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ, ಉಳಿದ ಕಾಮಗಾರಿಗಳ ತ್ವರಿತವಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ  ಎಂದು ತಿಳಿಸಿದರು.  ತಮ್ಮ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 40 ಆದರೆ ಈಗ ಕಚೇರಿಯಲ್ಲಿರುವ ಸಿಬ್ಬಂಧಿಗಳು 03 ಮಾತ್ರ, ಕಳೆದ 4-5ತಿಂಗಳಿಂದ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ ಎಂದು ಅವರು ಅಧ್ಯಕ್ಷರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಕಳೆದ ಮುಂಗಾರು ಅವಧಿಗಿಂತ ಈ ವರ್ಷ ಮುಂಗಾರು ಮಳೆ ಕೊರತೆಯಾಗಿದೆ ಬಂಟ್ವಾಳ ಮತ್ತು   ಮಂಗಳೂರು ತಾಲೂಕುಗಳಲ್ಲಿ ಮಳೆ ಅಭಾವದಿಂದ ಮತ್ತು ಕೃಷಿ ಕಾರ್ಮಿಕರ ಕೊರತೆಯಿಂದ  ಭತ್ತ ಬಿತ್ತನೆ ಪ್ರದೇಶ ಕಡಿಮೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರಾದ ಕೆಂಪೇಗೌಡ ಸಭೆಗೆ ತಿಳಿಸಿದರು. ಬೇಸಾಯ ರೈತನಿಗೆ ಲಾಭದಾಯಕವಾಗಲು ಕೃಷಿ ಯಾಂತ್ರೀಕರಣ ಆಗಲೇಬೇಕು, ಇದಕ್ಕಾಗಿ ಜಿಲ್ಲೆಯಲ್ಲಿ ಕೃಷಿ ಉಪಕರಣಗಳು ಮತ್ತು ಯಂತ್ರಗಳನ್ನು ಕಡಿಮೆ  ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಇದರ ಉಪಯೋಗವನ್ನು ರೈತರು ಆಸಕ್ತಿಯಿಂದ ಬಳಸಿಕೊಳ್ಳುತ್ತಿದ್ದಾರೆಂದು ಅವರು ಸಭೆಯಲ್ಲಿ ಮಾಹಿತಿ ನೀಡಿದರು.

Leave a Reply

Please enter your comment!
Please enter your name here