ಡಿವೈಎಫ್‍ಐ ಕಾರ್ಯಕರ್ತರ ಬಂಧನ, ಬಿಡುಗಡೆ

ನಿನ್ನೆ ಒಡಿಸ್ಸಾದಲ್ಲಿ ಸಮೃದ್ಧ ಜೀವನ್ ಮಲ್ಟಿ ಸ್ಟೇಟ್ ಮಲ್ಪಿ ಕೋ-ಓಪರೇಟಿವ್ ಸೊಸೈಟಿಯ ಮುಖ್ಯಸ್ಥರಾದ ಮಹೇಶ್ ಮೋತೆವಾರ್‍ನನ್ನು ಬಡವರ ಸುಲಿಗೆ ಮಾಡಿ ವಂಚಿಸಿರುವ ಆರೋಪದಲ್ಲಿ ಒಡಿಸ್ಸಾ ಪೊಲೀಸರು ಬಂಧಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಡಿವೈಎಫ್‍ಐನ ಕಾರ್ಯಕರ್ತರು ಮಂಗಳೂರಿನ ಪೆರೆಡಿಯಂ ಪ್ಲಾಜಾದಲ್ಲಿರುವ ಸಮೃದ್ಧ ಜೀವನ್ ಕಚೇರಿಗೆ ನುಗ್ಗಿ ಧಿಡೀರ್ ಪ್ರತಿಭಟನೆ ನಡೆಸಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಾಪಾಸು ನೀಡುವಂತೆ ಒತ್ತಾಯಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಇಂತಹ ಹಲವಾರು ಬ್ಲೇಡ್ ಕಂಪೆನಿಗಳು ಜನರಿಗೆ ಮೋಸ ಮಾಡಿ ವಂಚಿಸುತ್ತಿರುವ ವಿಷಯ ಜಗಜ್ಜಾಹೀರವಾಗಿದೆ. ಮುಂದೊಂದು ದಿನ ಈ ಸಂಸ್ಥೆಯು ಜಿಲ್ಲೆಯ ಜನರನ್ನು ವಂಚಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ನಿನ್ನೆ ಅದರ ಮುಖ್ಯಸ್ಥ ಮಹೇಶ್ ಮೋತೆವಾರ್‍ನ ಬಂಧಿಸಿದ ಘಟನೆಯೇ ಸಾಕ್ಷಿ, ಮಾತ್ರವಲ್ಲ ಇತ್ತೀಚೆಗೆ ಆರ್‍ಬಿಐ ಕೂಡ ಸಮೃದ್ಧ ಜೀವನ್ ಮಲ್ಟಿ ಸ್ಟೇಟ್ ಮಲ್ಪಿ ಕೋ-ಓಪರೇಟಿವ್ ಸೊಸೈಟಿಯು ಜನರಿಂದ ಕಾನೂನುಬಾಹಿರವಾಗಿ ಹಣ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ಇಷ್ಟೆಲ್ಲಾ ಇದ್ದರೂ ಪೊಲೀಸರಿಗೆ ದೂರು ಕೊಟ್ಟರೂ ಇಲ್ಲಿ ಈ ಸಂಸ್ಥೆ ಮಾತ್ರ ರಾಜಾರೋಷವಾಗಿ ಜನರಿಂದ ಹಣ ಸಂಗ್ರಹದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಗ್ರಾಹಕರನ್ನು ಎಚ್ಚರಿಸುವ, ಮೋಸದ ಜಾಲಕ್ಕೆ ಬಲಿಯಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಸಂಸ್ಥೆಯ ವಿರುದ್ಧ ದಿಢೀರ್ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ ಎಂದು ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ತಿಳಿಸಿದರು.
ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಪೆರೆಡಿಯಂ ಪ್ಲಾಜಾದಲ್ಲಿರುವ ಸಮೃದ್ಧ ಜೀವನ್ ಸಂಸ್ಥೆಗೆ ಕಚೇರಿ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ ವೇಳೆ ಸಂಸ್ಥೆಯ ಸಿಬ್ಬಂದಿ ಹಾಗೂ ಡಿವೈಎಫ್‍ಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕಾಗಮಿಸಿದ ಪೊಲೀಸರ ನಡುವೆಯೂ ತಿಕ್ಕಾಟ ನಡೆದು ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸಹಿತ ಹಲವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

Leave a Reply