ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ವಹಿಸುವಂತೆ ಜೆಡಿಎಸ್ ಒತ್ತಾಯ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ  ಸಿಬಿಐ ವಹಿಸುವಂತೆ ಜೆಡಿಎಸ್ ಒತ್ತಾಯ

ಮಂಗಳೂರು: ಡಿವೈಎಸ್ಪಿ ಎಮ್ ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿ ರಾಜ್ಯಸರಕಾರಕ್ಕೆ ಬೆಳ್ತಂಗಡಿ ತಹಶೀಲ್ದಾರರ ಮುಕಾಂತರ ಜಾತ್ಯಾತೀತ ಜನತಾ ದಳ ಮನವಿ ಸಲ್ಲಿಸಿತು.

ಮಂಗಳೂರು ಐ ಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಎಮ್ ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ತಿರುಚಿ ಹಾಕುವ ಹುನ್ನಾರ ನಡೆಸಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿಯಿಂದ ಈ ಮಾತು ಸಾಬೀತಾಗಿದೆ. ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಿಂದ ಪ್ರಕರಣವನ್ನು ತಿರುಚಿ ಗಣಪತಿಯವರ ಕುಟುಂಬದ ಮೇಲೆ ಹೊರಿಸಲಾಗಿದೆ.

ಗಣಪತಿ ದಕ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮುಂತಾದೆಡೆ ಸಮರ್ಥವಾಗಿ ತಮ್ಮ ಹುದ್ದೆಯನ್ನು ನಿರ್ವಹಿಸಿ ಜನಸಾಮಾನ್ಯರ ಜನಮನದಲ್ಲಿ ಉಳಿದಂತಹ ಅಧಿಕಾರಿಯಾಗಿದ್ದರು,. ಇಂತಹ ನಿಷ್ಠಾವಂತ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಮುನ್ನ ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದು ಅದನ್ನು ಸರಕಾರ ಸಂಬಂಧಪಟ್ಟವರ ಮೇಲೆ ಕೇಸು ದಾಖಲಿಸಲು ಪುರಾವೆಯಾಗಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದೆ.

ಕಾಂಗ್ರೆಸ್ ಸರಕಾರ ಇದ್ದಾಗಲೆಲ್ಲ ಸಚಿವರ ಮಕ್ಕಳನ್ನು ಮೆರವಣಿಗೆಯಲ್ಲಿ ಹೊತ್ತೊಯ್ಯುವ ಭ್ರಷ್ಟ ಅಧಿಕಾರಿಗಳಿಗೆ ಅವಕಾಶ ಮತ್ತು ನಿಷ್ಠಾವಂತರಿಗೆ ಕಿರುಕಳ ಈ ಹಿಂದೆಯೂ ನಡೆದಿದೆ. 1983 ರಲ್ಲಿ ಬೆಳ್ತಂಗಡಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದ ಗುರುರಾಜ್ ಕೂಡ ಗಣಪತಿಯವರಂತೆಯೇ ಕಿರುಕುಳ ಹಿಂಸೆಗಳಿಂದ ಸಾವನಪ್ಪಿದ್ದರು. ಅಂದಿನ ಕಾಂಗ್ರೆಸ್ ಸರಕಾರ, ಜಿಲ್ಲೆಯ ಅಂದಿನ 7 ಶಾಸಕರು ಮಾಜಿ ಸಂಸದರೊಬ್ಬರ ೊತ್ತಡದಿಂದ ಎರಡು ತಿಂಗಳ ಅವಧಿಯಲ್ಲಿ 7 ಠಾಣೆಗಳಿಗೆ ವರ್ಗಾಯಿಸಿ ಕೊನಗೆ ಜಿಲ್ಲೆಯಿಂದಲೇ ಕಳುಹಿಸಿ ನಾನ್ ಎಕ್ಸಿಕ್ಟ್ಯೂಟಿವ್ ಹುದ್ದೆಯಲ್ಲಿರಿಸಿ ಮಾನಸಿಕ ಹಿಂಸೆ ನೀಡಿ ಸಾವನಪ್ಪುವಂತೆ ಮಾಡಲಾಯಿತು. ಇದಕ್ಕೆ ಕಾರಣ ಗುರುರಾಜ್ ಸಿಐಡಿ ಅಧಿಕಾರಿಗಳಿಗೆ ಕಳ್ಳನೋಟು ಪ್ರಕರಣದಲ್ಲಿ ಬೇಕಾಗಿರುವ ವ್ಯಕ್ತಿಯನ್ನು ದಸ್ತಗಿರಿ ಮಾಡುವಲ್ಲಿ ಸಹಕರಿಸಿರುವುದು ಎಂದು ಗುರುರಾಜ್ ಅವರ ಸಹವರ್ತಿಗಳಲ್ಲಿ ತಿಳಿಸಿದ್ದರು.

ಬೆಳ್ತಂಗಡಿಯಲ್ಲೇ ಬೆಳೆದು ವಿದ್ಯಾಭ್ಯಾಸ ಪಡೆದ ಇನ್ನೋರ್ವ ನಿಷ್ಠಾವಂತ ಪೋಲಿಸ್ ಅಧಿಕಾರಿ, ವೇಣೂರಿನಲ್ಲಿ ಕೆಲವೇ ತಿಂಗಳು ಕಾರ್ಯನಿರ್ವಹಿಸಿದ್ದ ಇನ್ಸ್ಪೆಕ್ಟರ್ ಪ್ರಮೋದ್ ಇತ್ತೀಚೆಗೆ ಜಿಲ್ಲೆಯಿಂದ ಚಾಮರಾಜನಗರದಲ್ಲಿ ನಿರುಪಯೋಗಿ ಹುದ್ದೆಗೆ ವರ್ಗಾವಣೆ ಪಡೆದಿರುವುದು ನಮ್ಮ ಕಣ್ಣಿನ ಮುಂದಿದೆ.

ಮೈಸೂರು ಮಹಿಳಾ ಜಿಲ್ಲಾಧಿಕಾರಿ ಶಿಖಾರವರಿಗೆ ಸಿಎಮ್ ಆಪ್ತನ ಬೆದರಿಕೆ ಪ್ರಕರಣ ಹಾಗೂ ಗಣಪತಿ ಪ್ರಕರಣವನ್ನು ಸಿಬಿಐ ಅಥವಾ ಉಚ್ಚನ್ಯಾಯಾಲಯದ ನ್ಯಾಯಾಧಿಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಜಾತ್ಯಾತೀತ ಮನವಿಯಲ್ಲಿ ಒತ್ತಾಯಿಸಿದೆ.

Leave a Reply

Please enter your comment!
Please enter your name here