ದುಬೈ: ಕೇರಳ ಮಾದರಿಯ ನೋರ್ಕಾ ಸಚಿವಾಲಯ ಸ್ಥಾಪನೆಗೆ ಕಾಗೋಡು ತಿಮ್ಮಪ್ಪನವರಲ್ಲಿ ಮನವಿ

Spread the love

ದುಬೈ: ಕರ್ನಾಟಕದಲ್ಲಿಯೂ ಕೇರಳದಲ್ಲಿ ಈಗಾಗಲೇ (1996ರಲ್ಲಿ) ಅನುಷ್ಠಾನಕ್ಕೆ ಬಂದಿರುವ ಅನಿವಾಸಿ ಸಚಿವಾಲಯ (ನೋರ್ಕಾ-The Non Resident Keralites Affairs) ಕೇರಳ ರಾಜ್ಯದಿಂದ ವಿದೇಶಗಳಿಗೆ ಆಗಮಿಸಿರುವ ಅನಿವಾಸಿಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದೆ. ತಿರುವನಂತಪುರದಲ್ಲಿ ಮುಖ್ಯ ಕಛೇರಿ ಇರುವ ಈ ಸಚಿವಾಲಯದ ಶಾಖೆಗಳು ಪ್ರತಿ ಜಿಲ್ಲೆಯಲ್ಲಿಯೂ ಇವೆ. ಇದರಿಂದ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಕೇರಳೀಯರಿಗೆ ಅತಿ ಹೆಚ್ಚಿನ ಅನುಕೂಲತೆ ದೊರಕುತ್ತದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಒಂದು ಸಚಿವಾಲಯ ಇರುವುದು ಅಗತ್ಯ ಹಾಗೂ ಇದು ನಮ್ಮ ಹಕ್ಕು ಸಹಾ ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿಯವರು ಕರ್ನಾಟಕ ಸರ್ಕಾರದ ಮಾನ್ಯ ಸಭಾಪತಿಗಳಾದ ಶ್ರೀ ಕಾಗೋಡು ತಿಮ್ಮಪ್ಪನವರಲ್ಲಿ ಮನವಿ ಮಾಡಿಕೊಂಡರು.

ಶುಕ್ರವಾರ, ಜ 8 ರಂದು ನಗರದ ಫಾರ್ಚೂನ್ ಪ್ಲಾಜಾ ಹೋಟೆಲಿನ ಸಭಾಂಗಣದಲ್ಲಿ ಕನ್ನಡಿಗರು ದುಬೈ ನೇತೃತ್ವದಲ್ಲಿ ಸಕಲ ಕನ್ನಡಿಗರ ಒಕ್ಕೂಟಗಳು ಜಂಟಿಯಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಯು.ಎ.ಇ ಮತ್ತು ಭಾರತದ ರಾಷ್ಟ್ರಗೀತೆ ಬಳಿಕ ನಾಡಗೀತೆಯನ್ನು ಮೊಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಾರ್ತಾ ವಿಭಾಗದ ಕಾರ್ಯದರ್ಶಿ ಶ್ರೀ ಸಲೀಂ, ಶ್ರೀ ಅಣ್ಣಾಜಿ, ಕನ್ನಡಿಗರು ದುಬೈ ಸಂಘಟನೆಯ ಅಧ್ಯಕ್ಷರಾದ ಶ್ರೀ ಸಾದನ್ ದಾಸ್, ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ. ರಾಜನಂದಿನಿ ಹಾಗೂ ಉಪಸ್ಥಿತರಿದ್ದ ಇತರ ಸುಮಂಗಲೆಯರು ಹಾಗೂ ಗಣ್ಯರು ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀ ಸರ್ವೋತ್ತಮ ಶೆಟ್ಟಿಯವರು ಸಭಾಪತಿಗಳನ್ನು ಹಾಗೂ ಅತಿಥಿಗಳನ್ನು ಸಭೆಗೆ ಸ್ವಾಗತಿಸಿದರು. ಡಾ. ಬಿ.ಆರ್. ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕಾಗೋಡು ತಿಮ್ಮಪ್ಪನವರೊಂದಿಗೆ ತಮ್ಮ ಒಡನಾಟದ ಹಲವು ಸಂಗತಿಗಳನ್ನು ಉಲ್ಲೇಖಿಸಿ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅವರು ಕರ್ನಾಟಕ್ಕೆ ತಮ್ಮ ಕೊಡುಗೆಯಾಗಿ ನೀಡುವ ಮಹತ್ವಾಕಾಂಕ್ಷೆಯ ಜೋಗ ಜಲಪಾತದ ನೀರನ್ನು ಪುನಃ ಬೀಳುವಂತೆ ಮಾಡುವ ಯೋಜನೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದರು.

ಬಳಿಕ ಯು.ಎ.ಇ.ಯಲ್ಲಿರುವ ಸಕಲ ಕನ್ನಡಿಗರ ಪರವಾಗಿ ಸಭಾಪತಿ ಶ್ರೀ ಕಾಗೋಡು ತಿಮ್ಮಪ್ಪನವರನ್ನು ಹಾರ್ದಿಕವಾಗಿ ಸನ್ಮಾನಿಸಲಾಯಿತು. ಡಾ. ಬಿ.ಆರ್ ಶೆಟ್ಟಿಯವರು ಶಾಲು ಹೊದಿಸಿದರೆ ಇತರ ಗಣ್ಯರು ಮೈಸೂರು ಪೇಟ, ಫಲತಾಂಬೂಲ, ಸ್ಮರಣಿಕೆ ಹಾಗೂ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿದರು. ಸನ್ಮಾನ ಪತ್ರವನ್ನು ಶ್ರೀಮತಿ ಭಾಗ್ಯ ಸಾದನ್ ದಾಸ್ ರವರು ಸಭೆಗೆ ಓದಿ ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾನ್ಯ ಸಭಾಪತಿಯವರು ಈ ಸನ್ಮಾನ ತನಗೆ ಮಾತ್ರವಲ್ಲ, ವಿಧಾನ ಸೌಧದ ಎಲ್ಲಾ 224 ಸದಸ್ಯರಿಗೆ ಸಲ್ಲಿರುವ ಗೌರವವಾಗಿದ್ದು ಯು.ಎ.ಇ.ಯಲ್ಲಿರುವ ಸಕಲ ಕನ್ನಡಿಗರಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು. ಯು.ಎ.ಇ.ಯಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಿರುವ ಕನ್ನಡಿಗರ ಸಾಧನೆ ಹೆಮ್ಮೆ ಪಡುವಂತಹ ವಿಷಯವಾಗಿದೆ. ಇಲ್ಲಿ ಕ್ರಮಬದ್ದವಾಗಿರುವ ಟ್ರಾಫಿಕ್ ವ್ಯವಸ್ಥೆ, ಯೋಜನಾಬದ್ದವಾಗಿರುವ ಕಟ್ಟಡಗಳು, ಕೈಗೊಂಡಿರುವ ಸುರಕ್ಷಾ ವಿಧಾನಗಳೆಲ್ಲಾ ಅನುಕರಣೀಯವಾಗಿದ್ದು ಇದನ್ನು ಕರ್ನಾಟಕದಲ್ಲೂ ಹಮ್ಮಿಕೊಳ್ಳುವಂತಾಗಬೇಕು. ವಿದೇಶ ಪ್ರವಾಸ ಹೋಗುವುದು ಪ್ರಮುಖ ವಿಷಯವಲ್ಲ, ಆದರೆ ಈಗಾಗಲೇ ಹಲವು ವಿದೇಶಗಳಿಗೆ ಭೇಟಿ ನೀಡಿದ್ದು ಅಲ್ಲಿನ ಅಭಿವೃದ್ದಿಗಳನ್ನು ನೋಡಿ ಸಂತೋಷ ಪಟ್ಟಿದ್ದೇನೆ. ಆದರೆ ಕೆವಲ ಸಂತೋಷ ಪಟ್ಟರೆ ಸಾಲದು, ಈ ಅಭಿವೃದ್ಧಿಗಳು ನಮ್ಮ ರಾಜ್ಯದ ಅಭಿವೃದ್ದಿಗೆ ಅಳವಡಿಸುವಂತಾದರೆ ಮಾತ್ರ ಈ ವಿದೇಶ ಪ್ರವಾಸಗಳಿಗೆ ಅರ್ಥ ಬರುತ್ತದೆ, ಆದರೆ ಇದು ತುಂಬಾ ಕಷ್ಟವಾದ ವಿಷಯ. ಏಕೆಂದರೆ ಇದಕ್ಕೆ ಅಗತ್ಯವಾದ ಇಚ್ಛಾಶಕ್ತಿಯನ್ನು ಹೊಂದಿರಬೇಕಾದ ರಾಜಕಾರಣಿಗಳು ದಿಕ್ಕು ತಪ್ಪಿದ್ದು ವ್ಯಾಪಾರಿ ಮನೋಭಾವನ್ನು ಹೊಂದಿದ್ದಾರೆ. ಅಭಿವೃದ್ದಿ ಎಂದರೆ ಕೇವಲ ನಗರಗಳ ಅಭಿವೃದ್ದಿ ಮಾತ್ರವಾಗಿದೆ. ಗ್ರಾಮ ಮತ್ತು ನಗರ ಎಂದರೆ ಬಡವ ಮತ್ತು ಶ್ರೀಮಂತರ ಸ್ಥಾನ ಎಂಬ ವ್ಯತ್ಯಾಸ ಇಂದು ಮೂಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕಾರಣವೆಂದರೆ ಸಮಾಜಸೇವೆಗೆ ಮುಡಿಪಾದ ಕ್ಷೇತ್ರವಾಗಿದೆ. ಚುನಾವಣೆ ಬರುತ್ತದೆ ಹೋಗುತ್ತದೆ, ನಾಯಕರು ಬರುತ್ತಾರೆ ಹೋಗುತ್ತಾರೆ ಆದರೆ ಸಮಾಜಸೇವೆ ನಿರಂತರವಾಗಿರುತ್ತದೆ. 1951ರಲ್ಲಿ ಗೋಪಾಲಗೌಡರು ಮಂಡಿಸಿದ್ದ ಸಮಾಜವಾದ, ಕುಛ್ ಭೀ ಕರೋ, ಹಿಂಸಾ ಮತ್ ಕರೋ ಎಂದು ಕರೆ ನೀಡಿದ್ದ ಜಯಪ್ರಕಾಶ್ ನಾರಾಯಣ್ ಮೊದಲಾದವರ ಆದರ್ಶ ಇಂದಿಗೂ ಅನುಕರಣೀಯವಾಗಿದೆ. ರಾಜ್ಯಾಂಗದ ಮೂಲಭೂತ ವ್ಯವಸ್ಥೆ ಎಂದರೆ ಸಮಾನತೆ. ರಾಜ್ಯದ ಎಲ್ಲಾ ವರ್ಗದ ಜನತೆಗೆ ಸೌಲಭ್ಯ ಮತ್ತು ನ್ಯಾಯ ಸಮಾನವಾಗಿ ಲಭಿಸುವಂತಾಗಬೇಕು ಎಂದು ತಿಳಿಸಿದರು.

ಜೋಗ ಜಲಪಾತದ ಸೌಂದರ್ಯ ಕೇವಲ ಮಳೆಗಾಲಕ್ಕೆ ಸೀಮಿತವಾಗಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು ಈ ಬಗ್ಗೆ ಪದ್ಮಶ್ರೀ ಶಾ. ಬಿ.ಆರ್ ಶೆಟ್ಟಿಯವರು  450 ಕೋಟಿ ರೂ ಖರ್ಚಿನಲ್ಲಿ ಈ ನೀರನ್ನು ಪಂಪುಗಳ ಮೂಲಕ ಮೇಲೆತ್ತಿ ಮತ್ತೆ ಬೀಳುವಂತೆ ಮಾಡುವ ಯೋಜನೆ ಶ್ಲಾಘನೀಯವಾಗಿದೆ. ಆದರೆ ಈ ಬದಲಾವಣೆಗೆ ಅಧಿಕಾರಿಗಳಿಂದ ಹೆಚ್ಚಿನ ನೆರವನ್ನು ನಿರೀಕ್ಷಿಸದಿರಿ, ಬದಲಾವಣೆ ಅವರಿಗೆ ಅಗತ್ಯವಿಲ್ಲ, ಆದರೆ ಈ ಯೋಜನೆ ಪೂರ್ಣಗೊಳ್ಳಲು ತಮ್ಮಿಂದಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಪ್ರಕಟಿಸಿದರು.

ಕರ್ನಾಟಕದಿಂದ ಯು.ಎ.ಇ.ಗೆ ಬಂದು ಯಶಸ್ವಿಯಾಗಿರುವ ಉದ್ಯಮಿಗಳು ಹಾಗೂ ಇತರರೆಲ್ಲಾ ಸೇರಿ ಕರ್ನಾಟಕಕ್ಕೆ ಏನಾದರೂ ಕೊಡುಗೆ ನೀಡುವಂತೆ ಅವರು ಕರೆ ನೀಡಿದರು. ಇದು ಹೀಗೇ ಆಗಬೇಕಾಗಿಲ್ಲ, ಇಷ್ಟೇ ದೊಡ್ಡದಾಗಿರಬೇಕಾಗಿಲ್ಲ, ಒಂದು ವೇಳೆ ಉದ್ಯಮ ಅಥವಾ ಕೈಗಾರಿಕೆಯನ್ನು ಪ್ರಾರಂಭಿಸುವುದಾದರೆ ಅದಕ್ಕೆ ಅಗತ್ಯವಾದ ನೆಲ ಕೊಡಿಸುವ ಜವಾಬ್ದಾರಿ ತನ್ನದು ಎಂದು ಅವರು ಆಶ್ವಾಸನೆ ನೀಡಿದರು. ಯು.ಎ.ಇ.ಯಲ್ಲಿರುವವರಿಗೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನ ಇಚ್ಛಾಶಕ್ತಿ ಇದೆ.  ಕರ್ನಾಟಕದಲ್ಲಿ ಇದುವರೆಗೆ ಹಲವರಿಗೆ ಕೈಗಾರಿಕೆಗಳಿಗಾಗಿ ನೆಲವನ್ನು ನೀಡಿ ಹದಿನೈದು ಇಪ್ಪತ್ತು ವರ್ಷಗಳಾಗಿದ್ದರೂ ಯಾವ ಪ್ರಗತಿಯೂ ಆಗದಿರುವುದು ವಿಷಾದಕರ, ಆದರೆ ಇಲ್ಲಿ ಯಶಸ್ವಿಯಾದವರು ಅಲ್ಲಿಯೂ ಯಶಸ್ವಿಯಾಗುವುದು ಖಂಡಿತ ಎಂದು ಆಶಾಭಾವನೆಯನ್ನು ಪ್ರಕಟಿಸಿದರು.

ಇಂದು ರಾಜ್ಯದಲ್ಲಿ ಲಕ್ಷಾಂತರ ಯುವಕರು ಪದವೀಧರರಾಗುತ್ತಿದ್ದಾರೆ ಆದರೆ ಸ್ವಂತ ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಕರ್ನಾಟಕದಲ್ಲಿ ಬೆಳವಣಿಗೆಗೆ ಪೂರಕ ವಾತಾವರಣವಿಲ್ಲ ಎಂಬ ಮಾತಿಗೆ ಹುರುಳಿಲ್ಲ, ಏಕೆಂದರೆ ಸಾಗರದಲ್ಲಿ ಚಿಕ್ಕದಾಗಿ ಪ್ರಾರಂಭವಾದ ಗಾರ್ಮೆಂಟ್ಸ್ ಉದ್ಯಮ ಕೇವಲ ಆರು ತಿಂಗಳಲ್ಲಿ ಅಭಿವೃದ್ಧಿ ಪಡೆದು ಇಂದು ಸಾವಿರ ಜನರಿಗೆ ಉದ್ಯೋಗ ನೀಡಿರುವ ಉದ್ಯಮವಾಗಿ ಬೆಳೆದಿರಬೇಕಾದರೆ ರಾಜ್ಯದ ಎಲ್ಲಿಯೂ ಸಾಧ್ಯವಾಗಬಹುದು. ನಿಮ್ಮಿಂದ ರಾಜ್ಯಕ್ಕೆ ಏನೇ ಕೊಡುಗೆ ಬಂದರೂ ಅದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಅದನ್ನು ಪೂರ್ಣಗೊಳಿಸಲು ಸಕಲ ಸಹಕಾರ ನೀಡುವ ಜವಾಬ್ದಾರಿ ತನ್ನದು ಎಂದು ತಿಳಿಸಿದರು.

ಸಭಾಪತಿಗಳ ಮನವಿಗೆ ಸ್ಪಂದಿಸಿದ ಡಾ. ಬಿ.ಆರ್ ಶೆಟ್ಟಿಯವರು ತಮ್ಮ ಮನದಲ್ಲಿದ್ದ ಇನ್ನೂ ಹಲವಾರು ಯೋಜನೆಗಳ ಬಗ್ಗೆ ವಿವರಗಳನ್ನು ನೀಡಿದರು. ಕೇರಳದ ಒಂದು ವಿಮಾನ ನಿಲ್ದಾಣಕ್ಕೆ ಕೇರಳ ಪ್ರಮುಖರು ದೇಣಿಗೆ ನೀಡುವ ಮುನ್ನವೇ ತಮ್ಮಿಂದ ದೇಣಿಗೆ ಸಂಗ್ರಹಿಸಿದ ಕಾರಣ ಆ ವಿಮಾನ ನಿಲ್ದಾಣ ಇಂದು ಯಶಸ್ವಿಯಾಗಿದೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಯಶಸ್ವಿಯಾಗಿದ್ದು ಇದರ ಪ್ರಯೋಜನ ಕರ್ನಾಟಕದವರಿಗಿಂತ ಕೇರಳದವರಿಗೇ ಹೆಚ್ಚು ಪ್ರಯೋಜನವಾಗುತ್ತಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದರೆ ಇಡಿಯ ರಾಜ್ಯಕ್ಕೇ ಲಾಭವಾಗಲಿದೆ. ಏಕೆಂದರೆ ಶಿವಮೊಗ್ಗ ಕರ್ನಾಟಕದ ಕೇಂದ್ರಭಾಗದಲ್ಲಿದ್ದು ಎಲ್ಲೆಡೆಗೆ ಸಂಪರ್ಕ ಪಡೆಯಲು ಸುಲಭವಾಗುತ್ತದೆ. ಅಂದು ಯು.ಎ.ಇ.ಯ ನಿರ್ಮಾತೃ ದಿವಂಗತ ಶೇಖ್ ಜಾಯೆದ್ ರವರ ಘೋಷವಾಕ್ಯ “quality healthcare for all, at affordable cost”  ವನ್ನು ಪೂರ್ಣವಾಗಿ ಅಳವಡಿಸಿ ತಮ್ಮ ಸಂಸ್ಥೆಗಳು ಇಂದು ಯು.ಎ.ಇ.ಯಲ್ಲಿ ಯಶಸ್ವಿಯಾಗಿವೆ. ಒಂದು ವೇಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ವಿಶ್ವಮಟ್ಟದ ಗುಣಮಟ್ಟಕ್ಕೇರಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿಸಿದರು. ಈ ಹಿಂದೆ ಪ್ರಧಾನಿ ಮೋದಿಯವರು ಯು.ಎ.ಇ.ಗೆ ಆಗಮಿಸಿದಾಗ ಇಲ್ಲಿನ ಆಡಳಿತವೃಂದ ಭಾರತದ ಅಭಿವೃದ್ದಿಗಾಗಿ ಎಪ್ಪತ್ತೈದು ಮಿಲಿಯನ್ ಡಾಲರುಗಳ ದೇಣಿಗೆ ನೀಡಿದ್ದು ಇದರಿಂದ ಭಾರತದಲ್ಲಿ ಬಹಳಷ್ಟು ಅಭಿವೃದ್ದಿಗಳನ್ನು ನಿರೀಕ್ಷಿಸಬಹುದು ಎಂದು ತಿಳಿಸಿದರು.

ಬಳಿಕ ಎಲ್ಲಾ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳನ್ನು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಸಭಾಪತಿಗಳು ಶಾಲು ಹೊದೆಸಿ ಸನ್ಮಾಸಿದರು.

ಆ ಬಳಿಕ ಮಾತನಾಡಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾರ ಶ್ರೀ ಸರ್ವೋತ್ತಮ ಶೆಟ್ಟಿಯವರು ಮಾತನಾಡಿ ಕರ್ನಾಟಕದಲ್ಲಿಯೂ ಕೇರಳ ಮಾದರಿಯ ನೋರ್ಕಾ ಸಚಿವಾಲಯವನ್ನು ಸ್ಥಾಪಿಸಲು ಸಭಾಪತಿಗಳಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಅನಿವಾಸಿ ಭಾರತೀಯರು, ಅದರಲ್ಲೂ ಕರ್ನಾಟಕದ ಜನತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರದಿಂದ ಸಹಾಯವನ್ನು ಅವರು ಅಪೇಕ್ಷಿಸಿದರು.

ನಮ್ಮ ಟೀವಿ ಮಾಧ್ಯಮದ ಯು.ಎ.ಇ ಪ್ರತಿನಿಧಿ ಶ್ರೀ ವಿನಯ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಯನ್ನೂ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯು.ಎ.ಇ.ಯ ಎಲ್ಲಾ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದು ಸಭಾಪತಿಗಳಿಗೆ ಗೌರವ ಸೂಚಿಸಿದರು.


Spread the love