ದೆಹಲಿಯಲ್ಲಿ ಘಮಘಮಿಸಿದ ಕರ್ನಾಟಕದ ತಿಂಡಿ ತಿನಿಸುಗಳು

ದೆಹಲಿ: ಮಾರ್ಚ್ 20, 2016 ರಂದು ದೆಹಲಿ ಕರ್ನಾಟಕ ಸಂಘದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ರುಚಿರುಚಿಯಾದ ಸುಮಾರು ನೂರಾರು ತಿಂಡಿ ತಿನಿಸುಗಳನ್ನೊಳಗೊಂಡ ‘ಫುಡ್ ಫೆಸ್ಟಿವಲ್’ನ್ನು ಬಹಳ ಯಶಸ್ವಿಯಾಗಿ ಏರ್ಪಡಿಸಲಾಗಿತ್ತು. ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಈ ಆಹಾರ ಮೇಳದಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ತಮ್ಮ ಉದ್ಯೋಗದ ನಿಮಿತ್ತ ದೆಹಲಿಗೆ ಬಂದಿರುವ ಸಾವಿರಾರು ದೆಹಲಿ ಕನ್ನಡಿಗರು ಪಾಲ್ಗೊಂಡು, ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿದು ಆನಂದಿಸಿದರು.

image002food-fest-delhi-karnataka-sangha-20160321-002

ಈ ಆಹಾರಮೇಳವನ್ನು ಕರ್ನಾಟಕ ಫುಡ್ ಸೆಂಟರ್‍ನ ಮಾಲೀಕರಾದ ಶ್ರೀ ಶೇಖರ್‍ಎನ್. ಬಂಗೇರ ಅವರು ಸಿಹಿ ಹಂಚುವುದರ ಮೂಲಕ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಮಾಧ್ಯಮ ಮಿತ್ರರು ಮತ್ತು ನೂರಾರು ಗಣ್ಯರು, ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ, ಶ್ರೀ ಸಿ.ಎಂ.ನಾಗರಾಜ ಮತ್ತು ಪದಾಧಿಕಾರಿಗಳು ಉಪಸ್ಥಿತಿರಿದ್ದರು.

ಧಾರವಾಡ, ಗುಲಬರ್ಗಾ, ಬೀದರ, ಮಂಗಳೂರು, ಮೈಸೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಕೋಲಾರ, ಬೆಂಗಳೂರು, ಶಿವಮೊಗ್ಗ, ಕೊಡಗು, ಉತ್ತರಕನ್ನಡ, ದಾವಣಗೆರೆ, ಮಂಡ್ಯ, ಬಿಜಾಪುರ, ಗದಗ ಹೀಗೆ ಸುಮಾರು 20-22 ಜಿಲ್ಲೆಗಳಿಗೆ ಸೇರಿದ ಕನ್ನಡ ಕುಟುಂಬಗಳು ತಮ್ಮತಮ್ಮ ಮನೆಗಳಲ್ಲಿ ಬಗೆ ಬಗೆಯ ಘಮಘಮಿಸುವ ಬಿಸಿಬಿಸಿಯಾದ ಮತ್ತು ರುಚಿರುಚಿಯಾದ ಅಡುಗೆಗಳನ್ನು ಮಾಡಿಕೊಂಡು ಸಂಘಕ್ಕೆ ತಂದುಅಲ್ಲಿ ಸುಸಜ್ಜಿತವಾಗಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಬಹಳ ಸಂಭ್ರಮದಿಂದ ಪಾಲ್ಗೊಂಡು, ಬಡಿಸಿ, ಹಂಚಿ, ಆನಂದಿಸಿದರು.

image003food-fest-delhi-karnataka-sangha-20160321-003

ಇಡ್ಲಿ, ತಟ್ಟೆಇಡ್ಲಿ, ವಡೆ, ಕಡುಬು, ಅಪ್ಪದ ಹಿಟ್ಟು, ದೋಸೆ, ಮೊಸರನ್ನ, ಬಿಸಿಬೇಳೆ ಬಾತ್, ಚಿತ್ರಾನ್ನ, ಪುಲಾವ್, ಬಿರಿಯಾಣಿ, ರೊಟ್ಟಿ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಅಕ್ಕಿರೊಟ್ಟಿ, ರಾಗಿಮುದ್ದೆ, ರೂಮಾಲಿ ರೊಟ್ಟಿ, ಸಾಗು, ಘಸಿ, ಸಾಂಬಾರು, ಹುಳಿ, ಹೀಗೆ ತರತರದ ಬಿಸಿಬಿಸಿಯಾದ ಖಾದ್ಯ ಪದಾರ್ಥಗಳು, ಸಿಹಿತಿಂಡಿ ತಿನಿಸುಗಳು, ಖಾರ, ನಮ್‍ಕೀನ್‍ಗಳು, ಮುಂಡಕ್ಕಿ, ಚುರುಮುರಿ, ಸಕ್ಕರೆ ಪೋಂಗಲ್, ಲಾಡು, ಉಂಡೆ, ಕಾಯಿ ಹೋಳಿಗೆ, ಸಜ್ಜಿಗೆ ಹೋಳಿಗೆ, ಬನ್ಸ್, ಕೋಡುಬಳೆ, ತೆಂಕೊಳಲ್, ಚಕ್ಕುಲಿ, ಮದ್ದೂರು ವಡೆ, ಮಸಾಲೆ ವಡೆ, ಕೋಳಿ, ಮಟನ್, ಮೀನು, ಕುಚಲಕ್ಕಿ ಅನ್ನ, ಸೇವಿಗೆ, ಒತ್ತು ಸೇವಿಗೆ, ಅವಲಕ್ಕಿ, ಹೀಗೆ ಬಾಯಿಯಲ್ಲಿ ನೀರು ಬರುವಂತಹ ವಿಧ ವಿಧವಾದ ಆಹಾರ ಪದಾರ್ಥಗಳನ್ನು ಬಂದ ಜನ ಅತ್ಯಂತ ಪ್ರೀತಿ, ಸಂತಸ ಮತ್ತು ಆಶ್ಚರ್ಯದಿಂದ ಉಂಡು, ಆನಂದಿಸಿ, ತೇಗಿ, ಹೊಗಳಿ ಹೋದರು.

ದ್ರಾಕ್ಷಿಜ್ಯೂಸ್, ಎಳನೀರು, ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ, ಬಗೆ ಬಗೆಯಚಟ್ನಿ, ಉಪ್ಪಿನಕಾಯಿ ಹಿಂಡಿ, ಚಟ್ನಿ ಪೌಡರ್‍ಗಳು, ಪಾಯಸ, ಖೀರು, ಬಾಳೆಹಣ್ಣಿನ ಹಲ್ವ, ಕೇಸರಿ ಬಾತ್ ಹೀಗೆ ಈ ಪಟ್ಟಿಗೆಕೊನೆಯೇಇಲ್ಲ. ಈ ಸಂಭ್ರಮದ ಮಧ್ಯೆ ಹಲವಾರು ವಿಶೇಷ ಅತಿಥಿಗಳು, ದೂತವಾಸದ ರಾಯಭಾರಿಗಳು, ಮಾಜಿ ಮಂತ್ರಿಗಳು, ಐ.ಎ.ಎಸ್. ಅಧಿಕಾರಿಗಳು ಹೀಗೆ ಜನ ಸಾಮಾನ್ಯರೊಂದಿಗೆ ಅತಿರಥ  ಮಹಾರಥರೂ ಸಹ ಬಂದು ಆಹಾರವನ್ನು ಸವಿದ ಒಂದು ವಿಶೇಷ ಸಂದರ್ಭ.

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ರಾಧಾಕೃಷ್ಣ, ಹಾಗೂ ಶ್ರೀಮತಿ ಜಮುನಾ ಸಿ.ಮಠದ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ. ನಾಗರಾಜ ಅವರ ವಿಶೇಷ ಮುತುವರ್ಜಿಯಲ್ಲಿ ರೂಪುಗೊಂಡ ಈ ಕಾರ್ಯಕ್ರಮಕ್ಕೆ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಅತ್ಯಂತ ಸಮರ್ಪಕವಾಗಿ ಸ್ಪಂದಿಸಿ ಸಹಕರಿಸಿ ಸಂಘದ ಸಿಬ್ಬಂದಿಗಳ ಅವಿರತ ದುಡಿತದ ಮೂಲಕ ಹಾಗೂ ವಿಶೇಷವಾಗಿ ಇಂತಹ ಅದ್ಭುತವಾದ ಆಹಾರ ಪದಾರ್ಥಗಳನ್ನು ಮನೆಯಲ್ಲಿ ಮಾಡಿಕೊಂಡು ಬಂದ ಸಂಘದ ಸದಸ್ಯರುಗಳ ಮತ್ತು ಅವರ ಕುಟುಂಬದವರು ಈ ಕಾರ್ಯಕ್ರಮದ ಯಶಸ್ಸಿಗೆ ಮೂಲತಃ ಕಾರಣಕರ್ತರು.

image004food-fest-delhi-karnataka-sangha-20160321-004

ಈ ವರ್ಷದ ಜನವರಿ 31ರಂದು ಮೀರಟ್‍ನ ಹಸ್ತಿನಾಪುರಕ್ಕೆ ಅದ್ಭುತವಾದ ಪಿಕ್‍ನಿಕ್‍ಅನ್ನು ಆಯೋಜಿಸಿ ಜಯಭೇರಿ ಹೊಡೆದ ಬೆನ್ನಲ್ಲೇಇಂತಹ ಒಂದು ಯಶಸ್ವೀ ಕರ್ನಾಟಕ ಫುಡ್ ಫೆಸ್ಟಿವಲ್ ಅನ್ನು ಸಂಘದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸುವುದರ ಮೂಲಕ ಕರ್ನಾಟಕ ಸಂಘವು ಕನ್ನಡಿಗರೆಲ್ಲರ ಮನಗೆಲ್ಲುವ ಮತ್ತೊಂದು ಮಹತ್ತರ ಹೆಜ್ಜೆಯನ್ನಿಟ್ಟಂತಾಗಿದೆ. ಇಂತಹ ವಿಶೇಷವಾದ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಸಂಘವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ನಡೆಸಲಿ ಎಂದು ಸಂಘದ ಎಲ್ಲಾ ಸದಸ್ಯರುಗಳು ಹರಸಿ ಆಶಿಸಿದ್ದಾರೆ.

image001food-fest-delhi-karnataka-sangha-20160321-001

ಈ ಕಾರ್ಯಕ್ರಮದ ಮೂಲಕ ಕನ್ನಡ ನಾಡು-ನುಡಿ, ನೆಲ-ಜಲ ಮತ್ತೆ ಅಲ್ಲಿನ ಜನ ಹಾಗೂ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು ಅದೆಷ್ಟು ಪ್ರಸಿದ್ಧ, ರುಚಿ ಹಾಗೂ ಸಿಹಿಯಾಗಿದೆ ಎಂಬ ಮಾತು ಮತ್ತೊಮ್ಮೆ ದೆಹಲಿಯಲ್ಲಿ ರುಜುವಾತಾಯಿತು. ನಿರಂತರವಾಗಿ ನಡೆಯುತ್ತಿದ್ದ ಗೊಂಬೆ ಕುಣಿತ ಮಕ್ಕಳು ಹಾಗೂ ಹಿರಿಯರೆಲ್ಲರನ್ನೂ ರಂಜಿಸಿ, ತನ್ನೆಡೆಗೆ ಆಕರ್ಷಿಸಿತು.

Leave a Reply