ದೇವಸ್ಥಾನ ಆಭರಣಗಳ ರಿಜಿಸ್ಟ್ರಿ  ನಿರ್ವಹಣೆ-ಜಿಲ್ಲಾಧಿಕಾರಿ ಸೂಚನೆ   

ಮಂಗಳೂರು: ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳು ಹೊಂದಿರುವ ಆಭರಣಗಳ ಪರಿಶುದ್ದತೆ, ತೂಕ, ಮೌಲ್ಯಮಾಪನ ಮಾಡಿ ರಿಜಿಸ್ತ್ರಿಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಎ ಮತ್ತು ಬಿ ಪ್ರವರ್ಗ ದೇವಸ್ಥಾನಗಳ ಆಡಳಿತ ಮಂಡಳಿಯ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸೂಚಿಸಿದರು.

ದೇವಸ್ಥಾನಗಳಲ್ಲಿ ಭದ್ರತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳೆಂದರೆ ಸಿಸಿಟಿವಿ ಮತ್ತು ಬರ್ಗಲರ್ ಅಲಾರಂಗಳನ್ನು ಅಳವಡಿಸುವುದು, ಸಮರ್ಪಕ ಭದ್ರತಾ ಸಿಬ್ಬಂದಿಗಳ ನೇಮಕಾತಿ,ಸಿಡಿಲು ವಿರೋಧಕ ಅಳವಡಿಸುವುದು, ಅಗ್ನಿ ನಂದಕಗಳನ್ನು ಅಳವಡಿಸುವುದು ಸೇರಿರುತ್ತದೆ.

ಈಗಾಗಲೇ ಕದ್ರಿ ಮುಂಜುನಾಥ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ, ಕಾವೂರು ಮಹಾಲಿಂಗೇಶ್ವರ ದೇವಸ್ಥಾನ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಪುತ್ತೂರು ಮಹಾಲಿಂಗೇಶ್ವರ, ಶರವೂರು ದುರ್ಗಾಪರಮೇಶ್ವರಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯಗಳು ಅಧಿಕೃತ ಮೌಲ್ಯ ಮಾಪಕರಿಂದ ಆಭರಣಗಳ ಮೌಲ್ಯಮಾಪನ ಮಾಡಿಸಿ ಕ್ಯಾಟಲಾಗ್ ಸಹಿತ ರಿಜಿಸ್ಟರ್‍ಗಳನ್ನು ಹೊಂದಿರುತ್ತಾರೆ.

ಉಳಿದಂತೆ ಎಲ್ಲಾ ದೇವಾಲಯಗಳು ಇದೇ ರೀತಿ ರಿಜಿಸ್ಟರ್‍ಗಳನ್ನು ಹೊಂದುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ದೇವಾಲಯಗಳಲ್ಲಿನ ಆಭರಣಗಳನ್ನು ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ ಪ್ಯಾನಲ್‍ಗಳಲ್ಲಿದ್ದ ಆಭರಣಗಳ ಮೌಲ್ಯ ಮಾಪಕರುಗಳಿಂದ ಆವಶ್ಯಕತೆಗಳಿನುಗುಣವಾಗಿ ಸ್ಥಳೀಯ ತಹಶೀಲ್ದಾರ್ ಕಂದಾಯ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಮಕ್ಷಮದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ನಿಯಮಾನುಸಾರ ಮೌಲ್ಯ ಮಾಪನ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

ಎಲ್ಲಾ ದೇವಾಲಯಗಳಲ್ಲಿ ಸರಕಾರದ ಸುತ್ತೋಲೆಯಂತೆ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಈ ಬಗ್ಗೆ 31 ಅಂಶಗಳ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ       ಶಿವಕುಮಾರಯ್ಯ , ಮುಜರಾಯಿ ತಹಶೀಲ್ದಾರ್ ಪ್ರಭಾಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here