ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ : ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ರೀತಿಯಲ್ಲಿ ಕ್ರಮ ಬದ್ಧವಾಗಿವೆ. ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದಿಂದ ಕ್ಷೇತ್ರದ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಯಾವುದನ್ನೂ ನಾನು ಮಾಡುವುದಲ್ಲ. ದೇವರು ನನ್ನಿಂದ ಮಾಡಿಸುತ್ತಾರೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಲಕ್ಷದೀಪೋತ್ಸವದ ಪ್ರಾರಂಭದ ದಿನವಾದ ಭಾನುವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳನ್ನು ಉದ್ದೇಶಿಸಿ ಅಮೃತವರ್ಷಿಣಿ ಸಭಾ ಭವನದಲ್ಲಿ ಅವರು ಮಾತನಾಡಿದರು.

ತಾನು ಸ್ವಂತಕ್ಕಾಗಿ ಯಾವುದೇ ಜಾಗ ಖರೀದಿಸಿಲ್ಲ. ವಿವಿಧ ಟ್ರಸ್ಟ್‍ಗಳ ಮೂಲಕ ಎಲ್ಲಾ ಯೋಜನೆಗಳನ್ನು ಶಿಸ್ತುಬದ್ಧವಾಗಿ ಕಾನೂನು ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ದೇವರ ಅನುಗ್ರಹ ಮತ್ತು ಜನರ ಪ್ರೀತಿ-ವಿಶ್ವಾಸದಿಂದ ತಾನು ನಿರಾಳನಾಗಿದ್ದೇನೆ ಎಂದು ಹೇಳಿದ ಅವರು ಕಳೆದ ಒಂದು ವರ್ಷದಿಂದ ಧರ್ಮಸ್ಥಳಕ್ಕೆ ಅಕ್ಕಿ, ಹಾಗೂ ತರಕಾರಿ ಖರೀದಿಸಿಲ್ಲ. ಅನ್ನದಾನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಭಕ್ತರೇ ಸ್ವಯಂ ಪ್ರೇರಣೆಯಿಂದ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಲಕ್ಷ ದೀಪೋತ್ಸವ ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳೇ ಇಲ್ಲಿ ಬಂದು ಅನ್ನದಾನ ನೀಡುತ್ತಿದ್ದಾರೆ ಎಂದರು.

ಹೆಗ್ಗಡೆಯವರ ಸ್ಥಾನದ ಹೊಣೆಗಾರಿಕೆಯಿಂದ ತಾನು ಶ್ರೀ ಸ್ವಾಮಿಯ ಸೇವೆಯನ್ನು ಮಾಡುತ್ತಿದ್ದೇನೆ. ಹಿರಿಯರ ಪರಂಪರೆಯನ್ನು ಮುಂದುವರಿಸುತ್ತಿದ್ದೇನೆ ಎಂದಷ್ಟೇ ಹೇಳಿದರು.

ಧರ್ಮಸ್ಥಳದ ಬಗ್ಗೆ ಆರೋಪ ಮಾಡುವವರು ಒಂದನ್ನಾದರೂ ಪುರಾವೆ ಸಹಿತ ಸಾಬೀತು ಪಡಿಸಲಿ ಎಂದು ಶಾಸಕ ಕೆ. ವಸಂತ ಬಂಗೇರ ಇತ್ತೀಚೆಗೆ ಹೇಳಿರುವುದನ್ನು ಹೆಗ್ಗಡೆಯವರು ಉಲ್ಲೇಖಿಸಿದರು.

ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ, ಕಾಲಮಿತಿ ಯಕ್ಷಗಾನ ಪ್ರದರ್ಶನ ಮೊದಲಾದ ಕ್ರಾಂತಿಕಾರಿ ಪರಿವರ್ತನೆ ಮಾಡಲಾಗಿದೆ. ಶ್ರೀ ಸ್ವಾಮಿ ಅನುಗ್ರಹದಿಂದ ಹಾಗೂ ಜನರ ಪ್ರೀತಿ-ವಿಶ್ವಾಸದಿಂದ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುವುದಾಗಿ ಅವರು ತಿಳಿಸಿದರು.

ಉಜಿರೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ಅಭಿಮಾನಿಗಳು ಪಾದಯಾತ್ರೆ ಮೂಲಕ ತೋರಿಸಿದ ಭಕ್ತಿ-ಪ್ರೀತಿ ಮತ್ತು ವಿಶ್ವಾಸದಿಂದ ತನ್ನಲ್ಲಿ ನವಚೈತನ್ಯ ತುಂಬಿದೆ. ಸ್ಫೂರ್ತಿ ಉಂಟಾಗಿದೆ ಎಂದು ಹೆಗ್ಗಡೆಯವರು ಹೇಳಿದರು.

ಕೆ. ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಪಾದಯಾತ್ರೆಯ ಉದ್ದೇಶವನ್ನು ವಿವರಿಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ವಿಜಯರಾಘಔ ಪಡ್ವೆಟ್ನಾಯ, ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

Leave a Reply